ಮುಂಬೈ: ಭಾರತ ಪ್ರವಾಸದಲ್ಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಬುಧವಾರ ತಂಡ ಪ್ರಕಟಿಸಲಾಗಿದ್ದು, ನಿರೀಕ್ಷೆಯಂತೆಯೇ ತಂಡಕ್ಕೆ ಶುಭ್ ಮನ್ ಗಿಲ್ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ವಾಪಸ್ ಆಗಿದ್ದಾರೆ.
ಇದೇ ಡಿಸೆಂಬರ್ 9ರಿಂದ ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಬಿಸಿಸಿಐ ಆಯ್ಕೆ ಸಮಿತಿ ಐದು ಪಂದ್ಯಗಳ ಟಿ20 ಸರಣಿಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.
ಇಂದು ಪ್ರಕಟವಾಗಿರುವ ಭಾರತ ತಂಡದಲ್ಲಿ ಈ ಹಿಂದೆ ಗಾಯದ ಸಮಸ್ಯೆಗೆ ತುತ್ತಾಗಿದ್ದ ಉಪನಾಯಕ ಶುಭ್ ಮನ್ ಗಿಲ್ ಚೇತರಿಕೆ ಬಳಿಕ ತಂಡ ಸೇರಿಕೊಂಡಿದ್ದು, ಆಲ್ರೌಂಡರ್ ಹಾರ್ದಿಕ್ ಪಾಂಡ್ಯಾ ಕೂಡ ತಂಡ ಸೇರಿಕೊಂಡಿರುವುದು ತಂಡದ ಬಲ ಹೆಚ್ಚಿಸುವಂತೆ ಮಾಡಿದೆ. ಅದಾಗ್ಯೂ ಶುಭ್ ಮನ್ ಗಿಲ್ ಸರಣಿಯ ಎಲ್ಲ ಪಂದ್ಯಕ್ಕೂ ಲಭ್ಯವಿರಲಿದ್ದಾರೆಯೇ ಎಂಬುದೂ ಪ್ರಶ್ನೆಯಾಗಿದ್ದು, ಇದು ಅವರ ಫಿಟ್ನೆಸ್ ಮೇಲೆ ನಿಂತಿದೆ ಎಂದು ಹೇಳಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ಗಿಲ್, ಟೆಸ್ಟ್ ಸರಣಿ ಮತ್ತು ನಂತರ ಏಕದಿನ ಸರಣಿಯಿಂದ ಹೊರಗುಳಿದಿದ್ದರು. ಅಂದಿನಿಂದ ಅವರು ಚೇತರಿಕೆ ಮತ್ತು ಪುನರ್ವಸತಿಗೆ ಒಳಗಾಗುತ್ತಿದ್ದಾರೆ. ಆದಾಗ್ಯೂ, ಆಯ್ಕೆದಾರರು ಗಿಲ್ ಅವರನ್ನು ತಂಡದಲ್ಲಿಯೇ ಉಳಿಸಿಕೊಳ್ಳಲು ನಿರ್ಧರಿಸಿದ್ದು, ಅವರು ತಂಡಕ್ಕೆ ಮರಳುವುದು ಅವರ ಫಿಟ್ನೆಸ್ ಮೇಲೆ ಅವಲಂಬಿತವಾಗಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಗಿಲ್ ಜೊತೆಗೆ ಹಾರ್ದಿಕ್ ಪಾಂಡ್ಯ ಕೂಡ ಎರಡು ತಿಂಗಳ ನಂತರ ಟೀಂ ಇಂಡಿಯಾಕ್ಕೆ ಮರಳುತ್ತಿದ್ದಾರೆ. ಕೊನೆಯ ಬಾರಿಗೆ 2025 ರ ಏಷ್ಯಾಕಪ್‌ನಲ್ಲಿ ಫೈನಲ್‌ಗೂ ಮೊದಲು ತಂಡದಲ್ಲಿ ಆಡಿದ್ದ ಪಾಂಡ್ಯ ಅಂದಿನಿಂದ ತಂಡದಿಂದ ಹೊರಗುಳಿದಿದ್ದರು. ಆದರೆ ಇತ್ತೀಚೆಗೆ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಟಕ್ಕೆ ಮರಳಿದ್ದ ಹಾರ್ದಿಕ್ ತಮ್ಮ ಫಿಟ್ನೆಸ್ ಅನ್ನು ಸಾಬೀತುಪಡಿಸಿದ್ದರು.
ರಿಂಕೂ ಸಿಂಗ್-ನಿತೀಶ್ ಕುಮಾರ್ ರೆಡ್ಡಿಗೆ ಕೊಕ್
ಇನ್ನು ಅಚ್ಚರಿ ಬೆಳವಣಿಗೆಯಲ್ಲಿ ತಂಡದ ಸ್ಫೋಟಕ ಬ್ಯಾಟರ್ ರಿಂಕೂ ಸಿಂಗ್ ಮತ್ತು ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿಯನ್ನು ತಂಡದಿಂದ ಕೈ ಬಿಡಲಾಗಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಈ ಸರಣಿಗೂ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ಸರಣಿಯನ್ನು ಆಡಿದ ತಂಡವನ್ನು ಉಳಿಸಿಕೊಂಡಿದೆ. ಹಾರ್ದಿಕ್ ಪಾಂಡ್ಯ ವಿಷಯದಲ್ಲಿ ಪ್ರಮುಖ ಬದಲಾವಣೆ ಮಾಡಲಾಗಿದ್ದು, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಿಂಕು ಸಿಂಗ್ ಅವರನ್ನು ತಂಡದಿಂದ ಕೈಬಿಡಲಾಗಿದೆ.
ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ಸರಣಿಯಲ್ಲಿ ರಿಂಕುಗೆ ಕೇವಲ ಒಂದು ಪಂದ್ಯದಲ್ಲಿ ಮಾತ್ರ ಆಡಲು ಅವಕಾಶ ಸಿಕ್ಕಿತು, ಆದರೆ ಆ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು. ಅದಕ್ಕೂ ಮೊದಲು ಏಷ್ಯಾಕಪ್‌ನಲ್ಲಿ ಅವರು ಕೇವಲ ಒಂದು ಪಂದ್ಯವನ್ನು ಆಡಿದ್ದರು. ಒಟ್ಟಾರೆಯಾಗಿ, ಈ ವರ್ಷ ಐದು ಟಿ20 ಪಂದ್ಯಗಳಲ್ಲಿ ರಿಂಕುಗೆ ಪ್ಲೇಯಿಂಗ್ ಇಲೆವೆನ್‌ನಲ್ಲಿ ಅವಕಾಶ ಸಿಕ್ಕಿದ್ದು, ಅವುಗಳಲ್ಲಿ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ರಿಂಕು ಜೊತೆಗೆ, ನಿತೀಶ್ ಕುಮಾರ್ ರೆಡ್ಡಿ ಅವರನ್ನು ಸಹ ಈ ಸರಣಿಯಿಂದ ಹೊರಗಿಡಲಾಗಿದೆ.
RCB ಸ್ಟಾರ್ ಗೆ ಮತ್ತೆ ಅವಕಾಶ
ಇನ್ನು ಈ ಹಿಂದೆ ಕಳೆದ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸ್ಫೋಟಕ ಪ್ರದರ್ಶನ ನೀಡಿ ಆರ್ ಸಿಬಿ ತಂಡ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೂ ಆಯ್ಕೆಯಾಗಿದ್ದಾರೆ. ಈ ಹಿಂದೆ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲೂ ಜಿತೇಶ್ ತಮಗೆ ಸಿಕ್ಕ ಅಲ್ಪ ಅವಕಾಶದಲ್ಲೇ ತಮ್ಮ ಸಾಮರ್ಥ್ಯ ಸಾಬೀತು ಪಡಿಸಿದ್ದರು.
ಭಾರತ ತಂಡ:
ಸೂರ್ಯಕುಮಾರ್ ಯಾದವ್ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಅಕ್ಷರ್ ಪಟೇಲ್, ಜಿತೇಶ್ ಶರ್ಮಾ, ಸಂಜು ಸ್ಯಾಮ್ಸನ್, ಜಸ್ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್.