ಕಟಕ್: ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ ಹಾರ್ದಿಕ್ ಪಾಂಡ್ಯಾ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧ 176 ರನ್ ಗಳ ಸವಾಲಿನ ಗುರಿ ನೀಡಿದೆ.
ಕಟಕ್ ನ ಬಾರಾಬತಿ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಮೊದಲ ಟಿ20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಹಾರ್ದಿಕ್ ಪಾಂಡ್ಯಾ ಅವರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದ ನೆರವಿನಿಂದ 175ರನ್ ಕಲೆಹಾಕಿ ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲ್ಲಲು 176 ರನ್ ಗಳ ಸವಾಲಿನ ಗುರಿ ನೀಡಿದೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ಇಬ್ಬನಿ ಪರಿಣಾಮ ಇನ್ನಿಂಗ್ಸ್ ಮೊದಲಿನಿಂದಲೂ ಭಾರತ ಸಮರ್ಥ ಬ್ಯಾಟಿಂಗ್ ಪ್ರದರ್ಶನ ನೀಡಲು ವಿಫಲವಾಯಿತು.
ಉಪನಾಯಕ ಶುಭ್ ಮನ್ ಗಿಲ್ ಕೇವಲ 4 ರನ್ ಗಳಿಸಿ ಮೊದಲ ಓವರ್ ನಲ್ಲೇ ವಿಕೆಟ್ ಒಪ್ಪಿಸದರು. ಬಳಿಕ ನಾಯಕ ಸೂರ್ಯ ಕುಮಾರ್ ಕೂಡ 12 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ 17 ರನ್ ಗಳಿಸಿ ಔಟಾಗುವ ಮೂಲಕ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಈ ಹಂತದಲ್ಲಿ ಜೊತೆಗೂಡಿದ ತಿಲಕ್ ವರ್ಮಾ (26 ರನ್) ಮತ್ತು ಅಕ್ಸರ್ ಪಟೇಲ್ (23 ರನ್) ತಂಡಕ್ಕೆ ಆಸರೆಯಾದರೂ ಅವರ ಹೋರಾಟ ಕೂಡ ವ್ಯರ್ಥವಾಯಿತು. ಈ ಹಂತದಲ್ಲಿ ಕ್ರೀಸ್ ಗಿಳಿದ ಹಾರ್ದಿಕ್ ಪಾಂಡ್ಯಾ ಎಂದಿನಂತೆ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಕೇವಲ 28 ಎಸೆತಗಳನ್ನು ಎದುರಿಸಿದ ಪಾಂಡ್ಯಾ 4 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ ಅಜೇಯ 59 ರನ್ ಕಲೆಹಾಕಿದರು.
ಮತ್ತೊಂದು ಬದಿಯಲ್ಲಿ ಶಿವಂ ದುಬೆ 11 ರನ್ ಗಳಿಸಿ ಔಟಾದರೆ, ಜಿತೇಶ್ ಶರ್ಮಾ ಅಜೇಯ 10 ರನ್ ಗಳಿಸಿ ತಂಡದ ಮೊತ್ತ ಹಿಗ್ಗಿಸಿದರು. ಅಂತಿಮವಾಗಿ ಭಾರತ ನಿಗಧಿತ 20 ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು.
ಆಫ್ರಿಕಾ ಪರ ಲುಂಗಿ ಎಂಗಿಡಿ 3 ವಿಕೆಟ್ ಕಬಳಿಸಿದರೆ, ಸಿಪ್ ಮ್ಲಾ2 ಮತ್ತು ಫೆರ್ರಾರಾ ಒಂದು ವಿಕೆಟ್ ಪಡೆದರು.