ಮಂಜು ಕವಿದಿದ್ದಕ್ಕಾಗಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20ಐ ರದ್ದಾದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿರುದ್ಧ ಸಾಕಷ್ಟು ಟೀಕೆಗಳು ಕೇಳಿಬಂದವು. ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ, ಡಿಸೆಂಬರ್ 15 ರಿಂದ ಜನವರಿ 15 ರವರೆಗೆ ಉತ್ತರ ಭಾರತದಲ್ಲಿ ನಡೆಯಲಿರುವ ಪಂದ್ಯಗಳ ವೇಳಾಪಟ್ಟಿಯನ್ನು ಮಂಡಳಿಯು ಸಭೆ ಸೇರಿ ಪರಿಶೀಲಿಸಲಿದೆ. ನಂತರ ಪಂದ್ಯಗಳನ್ನು ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತಕ್ಕೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ ಎಂದು ಹೇಳಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಐದು ಪಂದ್ಯಗಳ ಸರಣಿಯ ನಾಲ್ಕನೇ ಟಿ20ಐ ಬುಧವಾರ ಲಖನೌನ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಹೆಚ್ಚು ಮಂಜು ಕವಿದಿದ್ದರಿಂದಾಗಿ ಪಂದ್ಯ ರದ್ದಾಯಿತು. ಭಾರತ ಟಿ20ಐ ಸರಣಿಯಲ್ಲಿ 2-1 ಮುನ್ನಡೆಯಲ್ಲಿದ್ದು, ಇನ್ನೂ ಒಂದು ಪಂದ್ಯ ಬಾಕಿ ಇದೆ.
'ಮಂಜು ಆವರಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಜನರು ಇದರಿಂದ ಅಸಮಾಧಾನಗೊಂಡಿದ್ದಾರೆ. ಡಿಸೆಂಬರ್ 15 ರಿಂದ ಜನವರಿ 15ರವರೆಗೆ ನಿಯೋಜನೆಗೊಂಡಿರುವ ಉತ್ತರ ಭಾರತದಲ್ಲಿನ ಪಂದ್ಯಗಳನ್ನು ದಕ್ಷಿಣ ಭಾರತಕ್ಕೆ ಸ್ಥಳಾಂತರಿಸಬೇಕೇ ಅಥವಾ ಪಶ್ಚಿಮ ಭಾರತಕ್ಕೆ ಸ್ಥಳಾಂತರಿಸಬೇಕೇ ಎಂದು ನಿರ್ಧರಿಸಲು ನಾವು ಅವುಗಳನ್ನು ಪರಿಶೀಲಿಸಬೇಕಾಗಿದೆ. ಮಂಜಿನಿಂದಾಗಿ ದೇಶೀಯ ಪಂದ್ಯಗಳ ಮೇಲೂ ಪರಿಣಾಮ ಬೀರುತ್ತಿದೆ. ಇದು ಗಂಭೀರ ಸಮಸ್ಯೆಯಾಗಿದೆ' ಎಂದು ಶುಕ್ಲಾ ಎಎನ್‌ಐ ಜೊತೆ ಮಾತನಾಡುತ್ತಾ ಹೇಳಿದರು.
ಡಿಸೆಂಬರ್ 15 ರಿಂದ ಜನವರಿ 15 ರವರೆಗಿನ ವಿಂಡೋದಲ್ಲಿ ಭಾರತದಲ್ಲಿ ದೇಶೀಯ ಕ್ರಿಕೆಟ್ ಸ್ಪರ್ಧೆಗಳು ನಡೆಯಲಿವೆ. 50 ಓವರ್‌ಗಳ ಪಂದ್ಯಾವಳಿಯಾದ ವಿಜಯ್ ಹಜಾರೆ ಟ್ರೋಫಿ ಡಿಸೆಂಬರ್ 24 ರಿಂದ ಜನವರಿ 18 ರವರೆಗೆ ನಡೆಯಲಿದ್ದು, ಪಂದ್ಯಾವಳಿಯು ಜೈಪುರದಲ್ಲಿ ನಡೆಯುತ್ತಿದೆ. ಈಮಧ್ಯೆ, ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಅಂತಿಮ T20I ಶುಕ್ರವಾರ ಅಹಮದಾಬಾದ್‌ನಲ್ಲಿ ನಡೆಯಲಿದೆ.
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಆಡಲಿರುವ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಏಕದಿನ ಸರಣಿ ಜನವರಿ 11 ರಿಂದ ಆರಂಭವಾಗಲಿದ್ದು, ವಡೋದರಾ, ರಾಜ್‌ಕೋಟ್ ಮತ್ತು ಇಂದೋರ್‌ನಲ್ಲಿ ಪಂದ್ಯಗಳು ನಿಗದಿಯಾಗಿವೆ.
ನಾಲ್ಕನೇ ಟಿ20ಐ ಪಂದ್ಯಕ್ಕೂ ಮುನ್ನ, ಭಾರತದ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರನ್ನು ಅನಾರೋಗ್ಯದ ಕಾರಣ ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಟಿ20ಐ ಸರಣಿಯಿಂದ ಹೊರಗುಳಿದಿದ್ದಾರೆ ಎಂದು ಬಿಸಿಸಿಐ ಡಿಸೆಂಬರ್ 15 ರಂದು ತಿಳಿಸಿದೆ. ಅಕ್ಷರ್ ಪಟೇಲ್ ಬದಲಿಗೆ, ಬಿಸಿಸಿಐ ಪುರುಷರ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧದ ಉಳಿದ ಟಿ20ಐ ಪಂದ್ಯಗಳಿಗೆ ಶಹಬಾಜ್ ಅಹ್ಮದ್ ಅವರನ್ನು ಬದಲಿಯಾಗಿ ಹೆಸರಿಸಿದೆ.