ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕೊನೆಗೂ ವರ್ಷಗಳ ಹಿಂದೆಯೇ ಆಗಬೇಕಿದ್ದ ಕೆಲಸವನ್ನು ಈಗ ಮಾಡಿದೆ. ಬೃಹತ್ ಕ್ರಮವೊಂದರಲ್ಲಿ, ಬಿಸಿಸಿಐ ಮಹಿಳಾ ದೇಶೀಯ ಕ್ರಿಕೆಟ್ ಆಡುವ ಮಹಿಳಾ ಆಟಗಾರ್ತಿಯರ ಪಂದ್ಯ ಶುಲ್ಕದಲ್ಲಿ ತೀವ್ರ ಏರಿಕೆಗೆ ಅನುಮೋದನೆ ನೀಡಿದೆ. ಇದರಿಂದಾಗಿ ಆಟಗಾರ್ತಿಯರ ಗಳಿಕೆಯು ಭಾರತದ ದೇಶೀಯ ಸರ್ಕ್ಯೂಟ್‌ನಲ್ಲಿ ಪುರುಷ ಆಟಗಾರರಿಗೆ ಸಮನಾಗಿರುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಶುಲ್ಕ ಏರಿಕೆ ಮಾಡಲಾಗಿದೆ.
ಪರಿಷ್ಕೃತ ರಚನೆಯಡಿಯಲ್ಲಿ, ಹಿರಿಯ ಮಹಿಳಾ ಕ್ರಿಕೆಟಿಗರು ಈಗ ಅವರು ಆಡುವ ಪ್ರತಿ ದೇಶೀಯ ಏಕದಿನ ಮತ್ತು ಬಹು-ದಿನ ಪಂದ್ಯಗಳಿಗೆ ದಿನಕ್ಕೆ ₹50,000 ಗಳಿಸುತ್ತಾರೆ. ಆ ಅಂಕಿ ಅಂಶವು ಆಡುವ 11ರ ಬಳಗದ ಎಲ್ಲ ಸದಸ್ಯರಿಗೆ ಅನ್ವಯಿಸುತ್ತದೆ. ಆಡದ ತಂಡದ ಸದಸ್ಯರು ಸಹ ಪ್ರತಿ ಪಂದ್ಯಕ್ಕೆ ₹25,000 ಪಡೆಯುತ್ತಾರೆ. T20 ಸ್ಪರ್ಧೆಗಳಲ್ಲಿ, ಪ್ಲೇಯಿಂಗ್ XI ಪ್ರತಿ ಪಂದ್ಯಕ್ಕೆ ₹25,000 ಗಳಿಸುತ್ತದೆ. ಆದರೆ ಮೀಸಲು ಆಟಗಾರರು ₹12,500 ಗಳಿಸುತ್ತಾರೆ.
ಹಿರಿಯ ಮಹಿಳಾ ಆಟಗಾರ್ತಿಯರಿಗೆ ಈ ಹಿಂದೆ ಅವರು ಪ್ಲೇಯಿಂಗ್ XI ಭಾಗವಾಗಿದ್ದರೆ ಪ್ರತಿ ಪಂದ್ಯಕ್ಕೆ ₹20,000 ಮತ್ತು ಬೆಂಚ್‌ನಲ್ಲಿದ್ದರೆ ₹10,000 ನೀಡಲಾಗುತ್ತಿತ್ತು. ಇದೀಗ ಪಂದ್ಯ ಶುಲ್ಕ ಹೆಚ್ಚಳದಿಂದಾಗಿ ಮಹಿಳಾ ಕ್ರಿಕೆಟ್ ಮತ್ತಷ್ಟು ಉನ್ನತ ಮಟ್ಟಕ್ಕೇರುವ ಸಾಧ್ಯತೆ ಇದೆ.
ಜೂನಿಯರ್ ಮಹಿಳಾ ಕ್ರಿಕೆಟಿಗರನ್ನು ಸಹ ಈ ಪರಿಷ್ಕರಣೆಯಲ್ಲಿ ಸೇರಿಸಲಾಗಿದೆ. ಅವರು ತಂಡದ ಪ್ಲೇಯಿಂಗ್ XI ಭಾಗವಾಗಿದ್ದರೆ ಒಂದು ದಿನ ಮತ್ತು ಬಹು-ದಿನದ ಪಂದ್ಯಗಳಿಗೆ ಈಗ ದಿನಕ್ಕೆ ₹25,000 ಗಳಿಸುತ್ತಾರೆ. ಮೀಸಲು ಆಟಗಾರರು ₹12,500 ಪಡೆಯುತ್ತಾರೆ. T20ಗಳಲ್ಲಿ, ಆಟಗಾರರಿಗೆ ₹12,500 ಮತ್ತು ಆಡದ ಸದಸ್ಯರಿಗೆ ₹6,250 ಪಡೆಯಲಿದ್ದಾರೆ.
ಬಿಸಿಸಿಐ ಟಿಪ್ಪಣಿಯ ಪ್ರಕಾರ, ಈ ಹಿಂದೆ ಒಬ್ಬ ಹಿರಿಯ ಮಹಿಳಾ ಆಟಗಾರ್ತಿ ತನ್ನ ತಂಡವು ಕೇವಲ ಲೀಗ್ ಪಂದ್ಯಗಳನ್ನು ಆಡಿದರೆ ಇಡೀ ಆವೃತ್ತಿಗೆ ಸುಮಾರು ₹2 ಲಕ್ಷ ಗಳಿಸುತ್ತಿದ್ದರು. ಆ ಸಂಖ್ಯೆ ಈಗ ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆ ಇದೆ.
ಅಂಪೈರ್‌ಗಳು ಮತ್ತು ರೆಫರಿಗಳ ವೇತನ ಹೆಚ್ಚಳ
ಡಿಸೆಂಬರ್ 22 ರಂದು ನಡೆದ ಅಪೆಕ್ಸ್ ಕೌನ್ಸಿಲ್ ಸಭೆಯು ದೇಶೀಯ ಅಂಪೈರ್‌ಗಳು ಮತ್ತು ಮ್ಯಾಚ್ ರೆಫರಿಗಳಿಗೆ ಹೆಚ್ಚಿನ ಶುಲ್ಕವನ್ನು ಅನುಮೋದಿಸಿತು. ಲೀಗ್ ಪಂದ್ಯಗಳಲ್ಲಿ ಕಾರ್ಯನಿರ್ವಹಣೆ ಮಾಡುವ ಎಲ್ಲ ಅಂಪೈರ್‌ಗಳಿಗೆ ಈಗ ವರ್ಗವನ್ನು ಲೆಕ್ಕಿಸದೆ ದಿನಕ್ಕೆ ₹40,000 ಪಾವತಿಸಲಾಗುತ್ತದೆ. ನಾಕೌಟ್ ಪಂದ್ಯಗಳಿಗೆ, ಪ್ರಸ್ತಾವಿತ ಶುಲ್ಕವು ಪಂದ್ಯ ಮತ್ತು ಪಂದ್ಯಾವಳಿಯನ್ನು ಅವಲಂಬಿಸಿ ದಿನಕ್ಕೆ ₹50,000 ರಿಂದ ₹60,000 ರವರೆಗೆ ಇರುತ್ತದೆ. ದೇಶೀಯ ಕ್ರಿಕೆಟ್‌ನಲ್ಲಿ ಮೈದಾನದಲ್ಲಿರುವ ಅಧಿಕಾರಿಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಅದೇ ರಚನೆಯು ಪಂದ್ಯದ ರೆಫರಿಗಳಿಗೂ ಅನ್ವಯಿಸುತ್ತದೆ.
ಭಾರತೀಯ ಮಹಿಳಾ ಕ್ರಿಕೆಟ್ ಅಸಾಧಾರಣ ಪ್ರತಿಭೆಯನ್ನು ಪ್ರದರ್ಶಿಸುತ್ತಿರುವ ಸಮಯದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ವರ್ಷದ ಆರಂಭದಲ್ಲಿ ಹರ್ಮನ್‌ಪ್ರೀತ್ ಕೌರ್ ನೇತೃತ್ವದ ತಂಡದ ಏಕದಿನ ವಿಶ್ವಕಪ್ ಗೆಲುವಿನ ನಂತರ ಬಿಸಿಸಿಐ ಆಟಗಾರ್ತಿಯರಿಗೆ ಮತ್ತು ಸಹಾಯಕ ಸಿಬ್ಬಂದಿಗೆ ₹51 ಕೋಟಿ ನಗದು ಬಹುಮಾನವನ್ನು ಘೋಷಿಸಿತು.