ಐಸಿಸಿ ಕ್ರಿಕೆಟ್ ಟೂರ್ನಮೆಂಟ್ ಎಂದಾಕ್ಷಣ ಅಭಿಮಾನಿಗಳಲ್ಲಿ ಕ್ರೇಜ್ ಹೆಚ್ಚಾಗುತ್ತದೆ. ಕ್ರೀಡಾಂಗಣಗಳು ತುಂಬಿ ತುಳುಕಲಿದ್ದು ತಮ್ಮ ನೆಚ್ಚಿನ ತಂಡಕ್ಕೆ ಜೋಶ್ ತುಂಬುತ್ತಾರೆ. ಆದರೆ 29 ವರ್ಷಗಳ ಬಳಿಕ ಪಾಕಿಸ್ತಾನ ಐಸಿಸಿ ಟೂರ್ನಮೆಂಟ್ ನ ಆತಿಥ್ಯ ವಹಿಸಿದೆ. ಇನ್ನು ಉದ್ಘಾಟನಾ ಪಂದ್ಯ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ಗಳ ನಡುವೆ ನಡೆಸುತ್ತಿದೆ. ಆದರೆ ಕರಾಚಿ ಕ್ರೀಡಾಂಗಣ ಮಾತ್ರ ಅಭಿಮಾನಿಗಳಿಲ್ಲದೆ ಬಣಗುಡುತ್ತಿದೆ.
ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ನಡುವಿನ ಪಂದ್ಯದೊಂದಿಗೆ ಚಾಂಪಿಯನ್ಸ್ ಟ್ರೋಫಿ ಆರಂಭವಾಗಿದೆ. 29 ವರ್ಷಗಳ ನಂತರ ಪಾಕಿಸ್ತಾನದಲ್ಲಿ ಐಸಿಸಿ ಟೂರ್ನಮೆಂಟ್ ನಡೆಯುತ್ತಿದೆ. ಆದರೆ ಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಮತ್ತು ಅಭಿಮಾನಿಗಳು ಕ್ರೀಡಾಂಗಣದಲ್ಲಿ ಹಾಜರಿದ್ದ ಪ್ರೇಕ್ಷಕರ ಸಂಖ್ಯೆಯನ್ನು ನೋಡಿ ಆಶ್ಚರ್ಯಚಕಿತರಾದರು. 1996ರ ನಂತರ ಪಾಕಿಸ್ತಾನ ಮೊದಲ ಬಾರಿಗೆ ಐಸಿಸಿ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಪಾಕಿಸ್ತಾನವು ಪಂದ್ಯಾವಳಿಗಾಗಿ ತನ್ನ ಕ್ರೀಡಾಂಗಣಗಳನ್ನು ನವೀಕರಿಸಿದೆ. ಆದರೆ ಇದರ ಹೊರತಾಗಿಯೂ ಅಭಿಮಾನಿಗಳು ಪಂದ್ಯವನ್ನು ವೀಕ್ಷಿಸಲು ಕ್ರೀಡಾಂಗಣಕ್ಕೆ ಬರಲು ಸಿದ್ಧರಿಲ್ಲವೆ ಎಂಬ ಪ್ರಶ್ನೆ ಮೂಡಿದೆ.
ಎರಡೂ ತಂಡಗಳ ಟಾಸ್ ಮತ್ತು ರಾಷ್ಟ್ರಗೀತೆಗಳ ಸಮಯದಲ್ಲಿ ಕ್ರೀಡಾಂಗಣದ ಖಾಲಿ ಖಾಲಿಯಾಗಿ ಕಂಡುಬಂದವು. ಆತಿಥೇಯ ತಂಡದ ಪಂದ್ಯ ಕ್ರೀಡಾಂಗಣದಲ್ಲಿ ನಡೆದರೂ, ಪ್ರೇಕ್ಷಕರ ಸಂಖ್ಯೆ ಕಡಿಮೆ ಇತ್ತು. ಪ್ರೇಕ್ಷಕರ ಕೊರತೆಯ ಬಗ್ಗೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಬುಧವಾರದ ಪಂದ್ಯದ ಬಗ್ಗೆ ಸ್ಥಳೀಯರಿಗೆ ತಿಳಿಸಲು ಪಿಸಿಬಿ ಮರೆತಿದೆಯೇ ಎಂದು ಇಂಗ್ಲೆಂಡ್‌ನ ಮಾಜಿ ನಾಯಕ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ Xನಲ್ಲಿ ಬರೆದುಕೊಂಡಿರುವ ಮೈಕೆಲ್ ವಾನ್, ಪಾಕಿಸ್ತಾನದಲ್ಲಿ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿರುವುದು ಸಂತೋಷ ತಂದಿದೆ. 1996 ರ ನಂತರದ ಮೊದಲ ಪ್ರಮುಖ ಕಾರ್ಯಕ್ರಮ. ಇದು ನಡೆಯುತ್ತಿದೆ ಎಂದು ಸ್ಥಳೀಯರಿಗೆ ಹೇಳಲು ಅವರು ಮರೆತಿದ್ದಾರೆಯೇ.. ಜನಸಂದಣಿ ಎಲ್ಲಿದೆ?? ಎಂದು ಬರೆದಿದ್ದಾರೆ.
ಮಾರ್ಚ್ 2009ರಲ್ಲಿ ಶ್ರೀಲಂಕಾ ತಂಡದ ಮೇಲೆ ಭಯೋತ್ಪಾದಕ ದಾಳಿ ನಡೆದ ನಂತರ ಯಾವುದೇ ಉನ್ನತ ಅಂತರರಾಷ್ಟ್ರೀಯ ಕ್ರಿಕೆಟ್ ತಂಡವು ದೀರ್ಘಕಾಲದವರೆಗೆ ಪಾಕಿಸ್ತಾನ ಪ್ರವಾಸ ಮಾಡಿರಲಿಲ್ಲ. ಈ ದಶಕದ ಆರಂಭದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್‌ನಂತಹ ಅತ್ಯುತ್ತಮ ತಂಡಗಳು ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದವು.