ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ತನ್ನ ಸಹ ಆಟಗಾರ ಅಕ್ಸರ್ ಪಟೇಲ್ ಗೆ ಕೈ ಮುಗಿದು ಕ್ಷಮೆ ಕೇಳಿದ ಘಟನೆ ನಡೆದಿದೆ.
ದುಬೈನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ತಮ್ಮ ಸಹ ಆಟಗಾರ ಅಕ್ಸರ್ ಪಟೇಲ್ ಗೆ ಕೈ ಮುಗಿದು ಕ್ಷಮೆ ಯಾಚಿಸಿದ್ದಾರೆ. ತಾವು ಮಾಡಿದ ಒಂದೇ ಒಂದು ಎಡವಟ್ಟಿನಿಂದಾಗಿ ಅಕ್ಸರ್ ಪಟೇಲ್ ರ ಹ್ಯಾಟ್ರಿಕ್ ಕನಸು ನುಚ್ಚು ನೂರಾಯಿತು. ಇದೇ ಕಾರಣಕ್ಕೆ ರೋಹಿತ್ ಶರ್ಮಾ ಅಕ್ಸರ್ ಪಟೇಲ್ ಬಳಿ ಬಹಿರಂಗವಾಗಿಯೇ ಕ್ಷಮೆ ಯಾಚಿಸಿದ್ದಾರೆ. ಈ ಕುರಿತ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ಇಂದು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಬಾಂಗ್ಲಾದೇಶ ತಂಡವು ಟೀಂ ಇಂಡಿಯಾ ಬೌಲರ್‌ಗಳ ಸಂಘಟಿತ ಪ್ರದರ್ಶನಕ್ಕೆ ಆರಂಭದಲ್ಲೇ ತತ್ತರಿಸಿತು. ಪಂದ್ಯದ ಆರಂಭದಲ್ಲಿ ಭಾರತೀಯ ಬೌಲರ್ ಗಳ ಆರ್ಭಟಕ್ಕೆ ತತ್ತರಿಸಿ ಹೋದ ಬಾಂಗ್ಲಾದೇಶ ದಾಂಡಿಗರು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 35ರನ್ ಗಳ ಅಂತರದಲ್ಲಿ ಬಾಂಗ್ಲಾದೇಶ ತಂಡ 5 ಪ್ರಮುಖ ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟಕ್ಕೆ ಸಿಲುಕಿತು. ಈ ಪೈಕಿ ಮೂವರು ಬ್ಯಾಟರ್ ಗಳು ಶೂನ್ಯಕ್ಕೆ ಔಟಾಗಿದ್ದು, ಬಾಂಗ್ಲಾದೇಶಕ್ಕೆ ನುಂಗಲಾರದ ತುತ್ತಾಯಿತು. ಈ ಹಂತದಲ್ಲಿ ಜೊತೆಗೂಡಿದ ತೌಹೀದ್ ಹೃದೋಯ್ ಮತ್ತು ಜೇಕರ್ ಅಲಿ ಬಾಂಗ್ಲಾದೇಶ ತಂಡವನ್ನು ಮುಜುಗರದಿಂದ ಪಾರು ಮಾಡಿದರು.
ಬಾಂಗ್ಲಾಗೆ ಆರಂಭಿಕ ಆಘಾತ
ಟಾಸ್ ಗೆದ್ದು ದೊಡ್ಡ ಮೊತ್ತ ಕಲೆಹಾಕುವ ಲೆಕ್ಕಾಚಾರದೊಂದಿಗೆ ಕಣಕ್ಕಿಳಿದ ಬಾಂಗ್ಲಾದೇಶ ತಂಡಕ್ಕೆ ಅನುಭವಿ ವೇಗಿ ಮೊಹಮ್ಮದ್ ಶಮಿ ಮೊದಲ ಓವರ್‌ನಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಕಬಳಿಸಿ ಶಾಕ್ ನೀಡಿದರು. ಇನ್ನು ಇನ್ನಿಂಗ್ಸ್‌ನ ಎರಡನೇ ಹಾಗೂ ಹರ್ಷಿತ್ ರಾಣಾ ಎಸೆದ ತಮ್ಮ ಪಾಲಿನ ಮೊದಲ ಓವರ್‌ನಲ್ಲಿ ನಾಯಕ ನಜ್ಮುಲ್ ಹೊಸೈನ್ ಶಾಂತೋ ಅವರನ್ನು ಬಲಿ ಪಡೆಯುವ ಮೂಲಕ ಬಾಂಗ್ಲಾ ಪಡೆಗೆ ಮತ್ತೊಂದು ಶಾಕ್ ನೀಡಿದರು. ಇನ್ನು ಮೆಹದಿ ಹಸನ್ ಮಿರಜ್ ಕೇವಲ 5 ರನ್ ಗಳಿಸಿ ಶಮಿಗೆ ಎರಡನೇ ಬಲಿಯಾದರು. 26 ರನ್ ಗಳಿಸುವಷ್ಟರಲ್ಲಿ ಬಾಂಗ್ಲಾದೇಶ ತಂಡವು 3 ಪ್ರಮುಖ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ರೋಹಿತ್ ಮಹಾ ಪ್ರಮಾದ
ಇನ್ನು 9ನೇ ಓವರ್‌ನಲ್ಲಿ ಬೌಲಿಂಗ್ ಮಾಡಲಿಳಿದ ಅಕ್ಷರ್ ಪಟೇಲ್ ತಾವೆಸೆದ ಮೊದಲ ಓವರ್‌ನಲ್ಲೇ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಬಳಿಸಿ ಮಿಂಚಿದರು. ಇನ್ನು ಮೂರನೇ ಎಸೆತದಲ್ಲಿ ಹ್ಯಾಟ್ರಿಕ್ ಕನಸಿನೊಂದಿಗೆ ಎಸೆದ ಚೆಂಡು ಝಕರ್ ಅಲಿ ಬ್ಯಾಟ್ ಅಂಚನ್ನು ಸವರಿ ನೇರವಾಗಿ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಕೈಗೆ ಹೋಯಿತು. ಆದರೆ ಆತುರದಲ್ಲಿ ರೋಹಿತ್ ಶರ್ಮಾ ಕ್ಯಾಚ್ ಕೈಚೆಲ್ಲುವುದರೊಂದಿಗೆ ಅಕ್ಷರ್ ಹ್ಯಾಟ್ರಿಕ್ ವಿಕೆಟ್ ಕನಸು ನುಚ್ಚುನೂರಾಯಿತು.
ಕೈ ಮುಗಿದು ಕ್ಷಮೆ ಕೋರಿದ ರೋಹಿತ್ ಶರ್ಮಾ
ಸುಲಭದ ಕ್ಯಾಚ್ ಕೈಚೆಲ್ಲಿದ ನಾಯಕ ರೋಹಿತ್ ಶರ್ಮಾ ನೆಲಕ್ಕೆ ಕೈಬಡಿದು ತಮ್ಮ ಬೇಸರ ಹೊರಹಾಕಿದರು. ಅಂತೆಯೇ ಹ್ಯಾಟ್ರಿಕ್ ವಿಕೆಟ್ ಕಬಳಿಸುವ ಅವಕಾಶ ಹಾಳು ಮಾಡಿದ್ದಕ್ಕಾಗಿ ನಾಯಕ ರೋಹಿತ್ ಶರ್ಮಾ ಅಕ್ಷರ್ ಪಟೇಲ್‌ಗೆ ಕೈಮುಗಿದು ಕ್ಷಮೆಯಾಚಿಸಿದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ರೋಹಿತ್ ಮಿಸ್ ಮಾಡಲ್ಲ ಅನ್ಕೊಂಡಿದ್ದೆ
ಇನ್ನು ತಮ್ಮ ಹ್ಯಾಟ್ರಿಕ್ ಅವಕಾಶ ಮಿಸ್ ಆದ ಕುರಿತು ಇನ್ನಿಂಗ್ಸ್ ಬಳಿಕ ಮಾತನಾಡಿದ ಅಕ್ಸರ್ ಪಟೇಲ್, "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಚೆಂಡು ರೋಹಿತ್ ಶರ್ಮಾಗೆ ಹೋದಾಗ ನಾನು ಸಂಭ್ರಮಿಸಲು ಪ್ರಾರಂಭಿಸಿದೆ. ಆದರೆ ನಂತರ ಅವರು ಅದನ್ನು ಕೈಬಿಟ್ಟಿದ್ದಾರೆಂದು ನನಗೆ ಅರಿವಾಯಿತು. ಆಗ ಏನು ಮಾಡಬೇಕು ಎಂದು ತಿಳಿಯಲಿಲ್ಲ. ಕೆಲವೊಮ್ಮೆ ಎಲ್ಲರಿಗೂ ಇದು ಆಗುತ್ತದೆ. ಅದು ಸಂಭವಿಸಿದಾಗ, ನಾನು ಹೆಚ್ಚು ಪ್ರತಿಕ್ರಿಯಿಸಲಿಲ್ಲ. ಏಕೆಂದರೆ ನಾನು ಹಿಂದಕ್ಕೆ ತಿರುಗಿ ಹೊರಟುಹೋದೆ" ಎಂದು ಹೇಳಿದ್ದಾರೆ.