ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿಯು ಆರಂಭಗೊಂಡಿದ್ದು, ಬುಧವಾರ ನಡೆದ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ ತಂಡವು ನ್ಯೂಜಿಲೆಂಡ್ ವಿರುದ್ಧ ಸೋಲು ಕಂಡಿದೆ. ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡವು ಇಂದು (ಗುರುವಾರ) ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಲಿದೆ. ಟೀಂ ಇಂಡಿಯಾ ಐದು ಸ್ಪಿನ್ನರ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದರೊಂದಿಗೆ ಫಾರ್ಮ್‌ನಲ್ಲಿದ್ದ ಯುವ ಆಟಗಾರ ಯಶಸ್ವಿ ಜೈಸ್ವಾಲ್ ಅವರನ್ನು ಕೈಬಿಟ್ಟಿರುವುದು ಈಗಾಗಲೇ ಟೀಕೆಗೆ ಗುರಿಯಾಗಿದೆ. ಉಪನಾಯಕನನ್ನಾಗಿ ಶುಭಮನ್ ಗಿಲ್ ಅವರನ್ನು ಆಯ್ಕೆ ಮಾಡಿರುವ ಬಿಸಿಸಿಐ ನಿರ್ಧಾರದ ಬಗ್ಗೆಯೂ ಕೆಲವು ಪ್ರಶ್ನೆಗಳು ಎದ್ದಿವೆ.
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ರೋಹಿತ್ ಮತ್ತು ಗಿಲ್ ಆರಂಭಿಕರಾಗಿ ಕಣಕ್ಕಿಳಿದರೆ, ನಂ. 3 ಸ್ಥಾನದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ನಿರೀಕ್ಷೆಯಿದೆ. ಇತ್ತೀಚಿನ ದಿನಗಳಲ್ಲಿ ಕಳಪೆ ಫಾರ್ಮ್‌ನಿಂದಾಗಿ ವಿರಾಟ್ ಮತ್ತು ರೋಹಿತ್ ಟೀಕೆಗೆ ಗುರಿಯಾಗಿದ್ದರು. ಇದೀಗ ಚಾಂಪಿಯನ್ಸ್ ಟ್ರೋಫಿಯಲ್ಲಿ ಉಭಯ ಆಟಗಾರರು ಹೇಗೆ ಫಾರ್ಮ್‌ಗೆ ಮರಳಲಿದ್ದಾರೆ ಎನ್ನುವತ್ತ ಎಲ್ಲರ ಚಿತ್ತ ನೆಟ್ಟಿದೆ.
ದೇಶೀಯ ಕ್ರಿಕೆಟ್‌ನಲ್ಲಿ ಅದ್ಭುತ ಫಾರ್ಮ್ ಹೊಂದಿರುವ ಶ್ರೇಯಸ್ ಅಯ್ಯರ್ ಅವರು ನಂ.4ರಲ್ಲಿ ಬ್ಯಾಟಿಂಗ್ ಮಾಡುವ ನಿರೀಕ್ಷೆಯಿದೆ. ವಿಕೆಟ್ ಕೀಪರ್ ಸ್ಥಾನಕ್ಕೆ ರಿಷಬ್ ಪಂತ್ ಬದಲಿಗೆ ಕೆಎಲ್ ರಾಹುಲ್‌ಗೆ ಆದ್ಯತೆ ನೀಡಲಾಗಿದೆ. ಈ ಬಗ್ಗೆಯೂ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಆಲ್‌ರೌಂಡರ್‌ಗಳಿಗೆ ಬರುವುದಾದರೆ, ಭಾರತವು ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರನ್ನು ಆಡಿಸುವ ನಿರೀಕ್ಷೆಯಿದೆ. ಈ ಮೂವರು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗುವ ನಿರೀಕ್ಷೆಯಿದೆ.
ಬೌಲಿಂಗ್ ವಿಭಾಗಕ್ಕೆ ಬಂದರೆ, ಕುಲದೀಪ್ ಯಾದವ್ ಮೂರನೇ ಸ್ಪಿನ್ನರ್ ಆಗಿ ಆಡುವ ನಿರೀಕ್ಷೆಯಿದೆ. ಜೊತೆಗೆ ಮೊಹಮ್ಮದ್ ಶಮಿ ಮತ್ತು ಅರ್ಷದೀಪ್ ಸಿಂಗ್ ಪೇಸ್ ಬೌಲಿಂಗ್ ಆಯ್ಕೆಗಳಾಗಿದ್ದಾರೆ.
ಬಾಂಗ್ಲಾದೇಶ ವಿರುದ್ಧ ಭಾರತದ ಸಂಭಾವ್ಯ ಆಡುವ ಬಳಗ
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.