ನವದೆಹಲಿ: ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ಚಾಂಪಿಯನ್ಸ್ ಟ್ರೋಫಿಯ ಭಾರತ- ಪಾಕಿಸ್ತಾನ ನಡುವಿನ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಸಾಂಪ್ರದಾಯಿಕ ಎದುರಾಳಿಗಳ ನಡುವಿನ ಕಾಳಗವನ್ನು ಕಣ್ತುಂಬಿಕೊಳ್ಳಲು ಉಭಯ ರಾಷ್ಟ್ರಗಳ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದು, ಸೋಲು- ಗೆಲುವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಈ ನಡುವೆ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತವೇ ಹೆಚ್ಚು ಪಂದ್ಯಗಳಲ್ಲಿ ಗೆದಿದ್ದೆ ಎಂದು ಪಾಕಿಸ್ತಾನದ ಮಾಜಿ ನಾಯಕ ಶಾಹಿದ್ ಆಫ್ರಿದಿ ಹೇಳಿದ್ದಾರೆ.
ಹಿಂದಿನ ಚಾಂಪಿಯನ್ಸ್ ಟ್ರೋಫಿಯ ಐದು ಪಂದ್ಯಗಳಲ್ಲಿ ಮೂರು ಬಾರಿ ಪಾಕಿಸ್ತಾನವು ಭಾರತವನ್ನು ಸೋಲಿಸಿದೆ. 2004ರಲ್ಲಿ ಇಂಗ್ಲೆಂಡ್ ನಲ್ಲಿ, 2009ರಲ್ಲಿ ದಕ್ಷಿಣ ಆಫ್ರಿಕಾ ಮತ್ತು 2017ರ ಫೈನಲ್ ನಲ್ಲಿ ಲಂಡನ್ ನ ಒವೆಲ್ ನಲ್ಲಿ ನಡೆದ ಪಂದ್ಯಗಳಲ್ಲಿ ಪಾಕಿಸ್ತಾನ ಗೆಲುವು ಸಾಧಿಸಿತ್ತು.
ಮ್ಯಾಚ್ ವಿನ್ನರ್ಸ್ ಬಗ್ಗೆ ಮಾತನಾಡುವುದಾದರೆ ಪಾಕಿಸ್ತಾನಕ್ಕೆ ಹೋಲಿಸಿದರೆ ಭಾರತವೇ ಹೆಚ್ಚಿನ ಮ್ಯಾಚ್ ವಿನ್ನರ್ ಅಂತಾ ಹೇಳುತ್ತೇನೆ. ಈಗ ಪಾಕಿಸ್ತಾನದಲ್ಲಿ ಅಂತಹ ಹೇಳಿಕೊಳ್ಳುವ ಆಟಗಾರರು ಇಲ್ಲ. ಭಾರತದ ಮಧ್ಯಮ ಮತ್ತು ಕೆಳ ಕ್ರಮಾಂಕ ಬಲಿಷ್ಟವಾಗಿದ್ದು, ಅದರಿಂದಲೇ ಅವರು ಪಂದ್ಯ ಗೆಲ್ಲಬಹುದು ಎಂದರು.
ದೀರ್ಘಕಾಲದಿಂದ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಿದ್ದೇವೆ, ಆದರೆ ಯಾರೂಬ್ಬರು ಸ್ಥಿರವಾಗಿ ನಿಂತಿಲ್ಲ, ಕೆಲವರು ಕೆಲವು ಪಂದ್ಯಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಆದರೆ ಒಂದು ವರ್ಷ, ಎರಡು ವರ್ಷ ಅಥವಾ 50-60 ಪಂದ್ಯಗಳಲ್ಲಿ ತಮ್ಮ ಸ್ಥಿರ ಪ್ರದರ್ಶನವನ್ನು ಉಳಿಸಿಕೊಂಡಿರುವ ಆಟಗಾರರನ್ನು ನಾವು ನೋಡಿಲ್ಲ. ಭಾರತಕ್ಕೆ ಹೋಲಿಸಿದರೆ ನಾವು ಸ್ವಲ್ಪ ದುರ್ಬಲರಾಗಿದ್ದೇವೆ. ಭಾರತ ವಿರುದ್ಧ ಗೆಲ್ಲಬೇಕಾದರೆ ಬ್ಯಾಟ್ಸ್ ಮನ್ , ಬೌಲರ್ ಅಥವಾ ಸ್ಪಿನ್ನರ್ ಯಾರೇ ಆಗಲಿ ಸಾಮೂಹಿಕ ಪ್ರದರ್ಶನ ನೀಡಬೇಕಾದ ಅಗತ್ಯವಿದೆ ಎಂದು JioHotstar ಗೆ ಅಫ್ರಿದಿ ತಿಳಿಸಿದ್ದಾರೆ.
ಮತ್ತೊಂದೆಡೆ ಅಫ್ರಿದಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಭಾರತದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್, ಪಾಕಿಸ್ತಾನಕ್ಕೆ ಅನುಕೂಲ ಹೆಚ್ಚಿದೆ. ಏಕೆಂದರೆ ದುಬೈ ಅವರ ಮೂಲ ನೆಲವಾಗಿದೆ. ಅಲ್ಲಿ ಅವರು ಸಾಕಷ್ಟು ಕ್ರಿಕೆಟ್ ಆಡಿದ್ದು, ಪರಿಸ್ಥಿತಿ ಚೆನ್ನಾಗಿ ಗೊತ್ತಿರುತ್ತದೆ. ನಾವು ಹೆಚ್ಚಿನ ಮ್ಯಾಚ್ ವಿನ್ನರ್ ಎಂಬ ಅಫ್ರಿದಿ ಅವರ ಮಾತನ್ನು ಒಪ್ಪುತ್ತೇನೆ. ಆದರೆ, ಪಾಕಿಸ್ತಾನ ಕಡಿಮೆ ಮ್ಯಾಚ್ ವಿನ್ನರ್ ಆಗಿದ್ದರೂ ಸಹ ಯಾರೋ ಒಬ್ಬ ವ್ಯಕ್ತಿ ಚೆನ್ನಾಗಿ ಆಟ ಪಂದ್ಯದ ಗತಿಯನ್ನು ಬದಲಾಯಿಸುವ ಸಾಮರ್ಥ್ಯ ಅವರಲ್ಲಿ ಇದೆ ಎಂದರು.