ದುಬೈ: ಪಾಕಿಸ್ತಾನದಲ್ಲಿ ಆಯೋಜನೆಯಾಗಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿ ಆರಂಭವಾದಾಗಿನಿಂದಲೂ ಒಂದಿಲ್ಲೊಂದು ವಿವಾದಗಳು ಕೇಳಿಬರುತ್ತಲೇ ಇದ್ದು, ಈ ಬಾರಿ ಲೋಗೋ ವಿಚಾರವಾಗಿ ಕ್ಯಾತೆ ತೆಗೆದಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೇರವಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ವಿರುದ್ಧವೇ ಕೆಂಡಾಮಂಡಲವಾಗಿದೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಲೋಗೋ ವಿಚಾರವಾಗಿ ಇದೀಗ ಪಾಕಿಸ್ತಾನ ಐಸಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮಾತ್ರವಲ್ಲದೇ ಈ ಕುರಿತು ಸ್ಪಷ್ಟನೆ ಕೇಳಿ ಐಸಿಸಿಗೆ ಪತ್ರ ಕೂಡ ಬರೆದಿದೆ ಎನ್ನಲಾಗಿದೆ. ಇತ್ತೀಚೆಗೆ ದುಬೈನಲ್ಲಿ ನಡೆದ ಭಾರತ-ಬಾಂಗ್ಲಾದೇಶ ಗ್ರೂಪ್ ಎ ಪಂದ್ಯದ ನೇರ ಪ್ರಸಾರದ ಸಮಯದಲ್ಲಿ ಪಾಕಿಸ್ತಾನದ ಹೆಸರನ್ನು ಟೂರ್ನಮೆಂಟ್ ಲೋಗೋದಿಂದ ತೆಗೆದು ಹಾಕಲಾಗಿತ್ತು. ಈ ವಿಚಾರವಾಗಿ ಇದೀಗ ಪಿಸಿಬಿ ಅಸಮಾಧಾನಗೊಂಡಿದೆ ಎಂದು ಹೇಳಲಾಗಿದೆ.
ಟಿವಿ ಲೋಗೋದಲ್ಲಿ ಪಾಕಿಸ್ತಾನದ ಹೆಸರು ಕಾಣದ ಹಿನ್ನಲೆಯಲ್ಲಿ ಚಾಂಪಿಯನ್ಸ್ ಟ್ರೋಫಿ 2025 ಹೊಸ ವಿವಾದಕ್ಕೆ ಗುರಿಯಾಗಿದೆ. ಟೂರ್ನಮೆಂಟ್ ಉದ್ಘಾಟನಾ ಪಂದ್ಯದ ಸಮಯದಲ್ಲಿ, ನೇರ ಪ್ರಸಾರದ ಸಮಯದಲ್ಲಿ ಕಾಣಿಸಿಕೊಂಡ ಲೋಗೋದಲ್ಲಿ ಆತಿಥೇಯರ (ಪಾಕಿಸ್ತಾನ) ಹೆಸರು ಕಾಣಿಸಿಕೊಂಡಿತು. ಆದರೆ ಆ ಬಳಿಕ ದುಬೈನಲ್ಲಿ ನಡೆದ ಭಾರತ ಬಾಂಗ್ಲಾದೇಶ ನಡುವಿನ ಎರಡನೇ ಪಂದ್ಯದ ಸಮಯದಲ್ಲಿ, ಪಾಕಿಸ್ತಾನದ ಹೆಸರು ಇರಲಿಲ್ಲ. ಇದು ಅದು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಐಸಿಸಿ ಸ್ಪಷ್ಟನೆ
ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ), ಇದೊಂದು ತಾಂತ್ರಿಕ ದೋಷ ಎಂದು ಹೇಳುವ ಮೂಲಕ ವಿವಾದದಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡಿದೆ. ಐಸಿಸಿ ಮತ್ತು ಟೂರ್ನಿ ಪ್ರಸಾರ ಮಾಡುತ್ತಿರುವ ಜಿಯೋ ಟಿವಿ ಪ್ರಕಾರ, ಇದು ತಾಂತ್ರಿಕ ದೋಷ ಎನ್ನಲಾಗಿದೆ. ಭಾರತದ ಎಲ್ಲಾ ಪಂದ್ಯಗಳ ಪ್ರಸಾರವು ಪಾಕಿಸ್ತಾನದ ಹೆಸರಿನೊಂದಿಗೆ ಟೂರ್ನಮೆಂಟ್ ಲೋಗೋವನ್ನು ಹೊಂದಿರುತ್ತದೆ ಎಂದು ಐಸಿಸಿ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ.
“ಗ್ರಾಫಿಕ್ಸ್ ಸಂಬಂಧಿತ ತಾಂತ್ರಿಕ ಸಮಸ್ಯೆಯಿಂದಾಗಿ ಈ ಲೋಪ ಉಂಟಾಗಿದ್ದು, ನಾಳೆಯಿಂದ ಅದನ್ನು ಸರಿಪಡಿಸಲಾಗುವುದು. ಪಂದ್ಯದ ಸಮಯದಲ್ಲಿ ಲೋಗೋವನ್ನು ಬದಲಾಯಿಸಲು ಸಾಧ್ಯವಾಗಲಿಲ್ಲ” ಎಂದು ವಕ್ತಾರರು ತಿಳಿಸಿದ್ದಾರೆ.
ಐಸಿಸಿಯಿಂದ ವಿವರಣೆ ಕೇಳಿದ ಪಿಸಿಬಿ
ಇಎಸ್‌ಪಿಎನ್‌ಕ್ರಿಕ್‌ಇನ್ಫೊ ಪ್ರಕಾರ, ಜಾಗತಿಕ ಆಡಳಿತ ಮಂಡಳಿ (ಐಸಿಸಿ)ಯಿಂದ ಅನೌಪಚಾರಿಕ ಸಂವಹನದ ಹೊರತಾಗಿಯೂ, ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಘಟನೆಯ ಬಗ್ಗೆ ಐಸಿಸಿಯಿಂದ ಅಧಿಕೃತ ವಿವರಣೆಯನ್ನು ಕೇಳಿದೆ.