ಪಾಕಿಸ್ತಾನದ ಮಾಜಿ ವೇಗಿ ವಾಸಿಂ ಅಕ್ರಮ್ ಅವರ ಪತ್ನಿ ಶಾನೀರಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಟ್ರೋಲ್ ಖಾತೆಯೊಂದಕ್ಕೆ ತಿರುಗೇಟು ನೀಡಿದ್ದಾರೆ.
'Out Of Context Cricket' ಹೆಸರಿನ ಎಕ್ಸ್ ಖಾತೆಯಲ್ಲಿ ಕೆಲವು ಶ್ರೇಷ್ಠ ಕ್ರಿಕೆಟಿಗರನ್ನು ಒಳಗೊಂಡ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ 'ವಿಚ್ಛೇದಿತ XI' ಎಂದು ಹಾಕಿ ತಮ್ಮ ಸಂಗಾತಿಗಳಿಂದ ವಿಚ್ಛೇದ ಪಡೆದಿರುವ 12 ಜನರನ್ನು ಹೆಸರಿಸಲಾಗಿದೆ. ಈ ಪಟ್ಟಿಯಲ್ಲಿ ಭಾರತದ ದಿಗ್ಗಜರಾದ ರವಿಶಾಸ್ತ್ರಿ, ಜಾವಗಲ್ ಶ್ರೀನಾಥ್, ದಿನೇಶ್ ಕಾರ್ತಿಕ್, ಶಿಖರ್ ಧವನ್ ಸೇರಿದಂತೆ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಅವರು ಇದ್ದಾರೆ. ಇದಲ್ಲದೆ, ಪಟ್ಟಿಯಲ್ಲಿ ವಾಸಿಂ ಅಕ್ರಮ್ ಅವರ ಹೆಸರು ಇರುವುದು ಅವರ ಪತ್ನಿ ಶಾನೀರಾ ಅವರನ್ನು ಕೆರಳಿಸಿದೆ.
ಈ ಪೋಸ್ಟ್ ಅನ್ನು ರೀಶೇರ್ ಮಾಡಿರುವ ಶಾನೀರಾ, ಆ ಖಾತೆಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಮತ್ತು ಸುಳ್ಳು ಮಾಹಿತಿಯನ್ನು ಹರಡಿದ್ದಕ್ಕಾಗಿ ಕಿಡಿಕಾರಿದ್ದಾರೆ.
'ಹೇ @GemsOfCricket. ನೀವು ಖಂಡಿತವಾಗಿಯೂ 'ಸಂದರ್ಭದಿಂದ ಹೊರಗಿರುವಿರಿ' ಮತ್ತು ನೀವು ಸರಿಯಾದ ಮತ್ತು ವಿಶ್ವಾಸಾರ್ಹ ಮಾಹಿತಿಯಿಂದ ಹೊರಗಿರುವಿರಿ ಎಂಬುದನ್ನು ನಾದು ನಾನು ನೋಡುತ್ತಿದ್ದೇನೆ!' ಎಂದು ಶಾನೀರಾ ಬರೆದಿದ್ದಾರೆ.
ಅಕ್ರಮ್ ಅವರು 1995ರಲ್ಲಿ ಹುಮಾ ಮುಫ್ತಿ ಎಂಬುವವರನ್ನು ವಿವಾಹವಾಗಿದ್ದರು. ಅವರ 14 ವರ್ಷಗಳ ದಾಂಪತ್ಯದಲ್ಲಿ ಇಬ್ಬರು ಗಂಡು ಮಕ್ಕಳಿದ್ದರು. ದುರದೃಷ್ಟವಶಾತ್, 2009 ರಲ್ಲಿ ಅವರು ಭಾರತದ ಚೆನ್ನೈನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಬಹು ಅಂಗಾಂಗ ವೈಫಲ್ಯದಿಂದಾಗಿ ಮುಫ್ತಿ ನಿಧನರಾದರು.
ನಂತರ 2013 ರಲ್ಲಿ, ಅಕ್ರಂ ಅವರು ಆಸ್ಟ್ರೇಲಿಯಾದಲ್ಲಿ ಜನಿಸಿದ ಶಾನೀರಾ ಥಾಂಪ್ಸನ್ ಅವರನ್ನು ವಿವಾಹವಾದರು. ದಂಪತಿಗೆ 2014ರ ಡಿಸೆಂಬರ್‌ನಲ್ಲಿ ಪುತ್ರಿ ಜನಿಸಿದ್ದಾರೆ. ದಂಪತಿ ಈಗ ಸಂತೋಷದ ಜೀವನ ನಡೆಸುತ್ತಿದ್ದಾರೆ.