ಸಿಡ್ನಿ: ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಿರ್ಣಾಯಕ ಘಟ್ಟದತ್ತ ಸಾಗಿದ್ದು, 2ನೇ ಇನ್ನಿಂಗ್ಸ್ ಆರಂಭಿಸಿರುವ ಭಾರತ ಕೇವಲ 141 ರನ್ ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.
ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ 5ನೇ ಟೆಸ್ಟ್ ಪಂದ್ಯದಲ್ಲಿ ಮತ್ತೆ ಬೌಲರ್ ಗಳ ಆರ್ಭಟ ಮುಂದುವರೆದಿದ್ದು, ಇಂದೂ ಕೂಡ ಎರಡೂ ತಂಡಗಳಿಂದ ಬರೊಬ್ಬರಿ 15 ವಿಕೆಟ್ ಗಳು ಉರುಳಿವೆ. ನಿನ್ನೆ 1 ವಿಕೆಟ್ ನಷ್ಟಕ್ಕೆ 9 ರನ್ ಗಳಿಸಿದ್ದ ಆಸ್ಟ್ರೇಲಿಯಾ ಇಂದು 2ನೇ ದಿನ ಬ್ಯಾಟಿಂಗ್ ಮುಂದುವರೆಸಿತು.
ಆದರೆ ಭಾರತೀಯ ಬೌಲರ್ ಗಳ ಪ್ರಬಲ ದಾಳಿ ಎದುರು ಆಸ್ಚ್ರೇಲಿಯಾ ಮಂಕಾಯಿತು. ಕೇವಲ 181 ರನ್ ಗಳಿಗೇ ಆಸ್ಟ್ರೇಲಿಯಾ ಔಟಾಗುವ ಮೂಲಕ 4 ರನ್ ಗಳ ಹಿನ್ನಡೆ ಅನುಭವಿಸಿತು. ಇನ್ನು ಭಾರತದ ಪರ ಸಿರಾಜ್ ಮತ್ತು ಪ್ರಸಿದ್ಧಿ ಕೃಷ್ಣ ತಲಾ 3 ವಿಕೆಟ್ ಪಡೆದರೆ, ನಾಯಕ ಬುಮ್ರಾ ಮತ್ತು ನಿತೀಶ್ ಕುಮಾರ್ ರೆಡ್ಡಿ ತಲಾ 2 ಪಡೆದರು.
ಮತ್ತೆ ಕೈಕೊಟ್ಟ ಭಾರತದ ಬಲಿಷ್ಟ ಬ್ಯಾಟಿಂಗ್
ಇನ್ನು ಮೊದಲ ಇನ್ನಿಂಗ್ಸ್ ನಲ್ಲಿ ಹೀನಾಯ ಪ್ರದರ್ಶನ ನೀಡಿದ್ದ ಭಾರತದ ಬಲಿಷ್ಠ ಬ್ಯಾಟ್ಸಮನ್ ಗಳು, 2ನೇ ಇನ್ನಿಂಗ್ಸ್ ನಲ್ಲೂ ಪೆವಿಲಿಯನ್ ಪರೇಡ್ ನಡೆಸಿದರು. ಆರಂಭಿಕ ಆಟಗಾರ ಜೈಸ್ವಾಲ್ 22ರನ್ ಗಳಿಸಿದರೆ, ಕೆಎಲ್ ರಾಹುಲ್ ಮತ್ತು ಶುಭ್ ಮನ್ ಗಿಲ್ ರನ್ ಗಳಿಕೆ ತಲಾ 13 ರನ್ ಗಳಿಗೆ ಸೀಮಿತವಾಯಿತು. ಕೊಹ್ಲಿ ಮತ್ತೆ ಒಂದಂಕಿ ಮೊತ್ತಕ್ಕೆ ಔಟಾಗಿ ನಿರಾಶೆ ಮೂಡಿಸಿದರು.
ಈ ಹಿಂದೆ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ನಿತೀಶ್ ಕುಮಾರ್ ರೆಡ್ಡಿ ರನ್ ಗಳಿಕೆ ಕೂಡ ಕೇವಲ 4ರನ್ ಗೆ ಸೀಮಿತವಾಯಿತು. ಆದರೆ ಇಡೀ ಸರಣಿಯಲ್ಲಿ ನಿರಾಶೆ ಮೂಡಿಸಿದ್ದ ರಿಷಬ್ ಪಂತ್ 2ನೇ ಇನ್ನಿಂಗ್ಸ್ ನಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿ ದಾಖಲೆಯ ಅರ್ಧಶತಕ ಸಿಡಿಸಿದರು.
ಕೇವಲ 33 ಎಸೆತಗಳನ್ನು ಎದುರಿಸಿದ ಪಂತ್ 4 ಸಿಕ್ಸರ್ ಮತ್ತು 6 ಬೌಂಡರಿಗಳ ನೆರವಿನಿಂದ 61ರನ್ ಗಳಿಸಿ ಕಮಿನ್ಸ್ ಬೌಲಿಂಗ್ ನಲ್ಲಿ ಔಟಾದರು. ದಿನದ ಅಂತಿಮ ಹಂತದಲ್ಲಿ ಜೊತೆಗೂಡಿದ ರವೀಂದ್ರ ಜಡೇಜಾ (8 ರನ್) ಮತ್ತು ವಾಷಿಂಗ್ಟನ್ ಸುಂದರ್ (6 ರನ್) 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಅಂತಿಮವಾಗಿ ಭಾರತ ತಂಡ 6 ವಿಕೆಟ್ ನಷ್ಟತ್ತೆ 141 ರನ್ ಗಳಿಸಿದ್ದು, ಒಟ್ಟಾರೆ 145 ರನ್ ಗಳ ಮುನ್ನಡೆ ಸಾಧಿಸಿದೆ.
ಆಸ್ಟ್ರೇಲಿಯಾ ಪರ ಸ್ಕಾಟ್ ಬೋಲ್ಯಾಂಡ್ 4 ವಿಕೆಟ್ ಪಡೆದರೆ, ನಾಯಕ ಕಮಿನ್ಸ್ ಮತ್ತು ವೆಬ್ ಸ್ಟರ್ ತಲಾ 1 ವಿಕೆಟ್ ಪಡೆದಿದ್ದಾರೆ.