ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸುವ ಮೂಲಕ ಕೋಟ್ಯಂತರ ಭಾರತೀಯರಿಗೆ ಆಘಾತ ನೀಡಿದ ನಂತರ ಇದೇ ಮೊದಲ ಬಾರಿಗೆ ವಿರಾಟ್ ಕೊಹ್ಲಿ ಈ ವಿಷಯದ ಬಗ್ಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅವರ YouWeCan ಫೌಂಡೇಶನ್ ವತಿಯಿಂದ ನಡೆದ ದತ್ತಿ ಕಾರ್ಯಕ್ರಮದಲ್ಲಿ, ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಮಾಜಿ ಸಹ ಆಟಗಾರ ಕ್ರಿಸ್ ಗೇಲ್ ಸೇರಿದಂತೆ ಇತರ ಕೆಲವು ಪ್ರಮುಖರೊಂದಗೆ ವೇದಿಕೆ ಹಂಚಿಕೊಂಡರು.
ಮುಖ್ಯ ಕೋಚ್ ಗೌತಮ್ ಗಂಭೀರ್ ಸೇರಿದಂತೆ ಇಡೀ ಕ್ರಿಕೆಟ್ ತಂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು. ರವಿಶಾಸ್ತ್ರಿ, ಸಚಿನ್ ತೆಂಡೂಲ್ಕರ್, ಕೆವಿನ್ ಪೀಟರ್ಸನ್, ಬ್ರಿಯಾನ್ ಲಾರಾ ಮತ್ತು ಆಶಿಶ್ ನೆಹ್ರಾ ಅವರಂತಹ ದಿಗ್ಗಜರು ಭಾಗವಹಿಸಿದ್ದರು.
'ನಾನು ಎರಡು ದಿನಗಳ ಹಿಂದೆಯಷ್ಟೇ ನನ್ನ ಗಡ್ಡಕ್ಕೆ ಬಣ್ಣ ಬಳಿದಿದ್ದೆ. ಪ್ರತಿ ನಾಲ್ಕು ದಿನಗಳಿಗೊಮ್ಮೆ ನಿಮ್ಮ ಗಡ್ಡಕ್ಕೆ ಬಣ್ಣ ಬಳಿಯುವ ಸಮಯ ಬಂದಿದೆ' ಎಂದು ಕೊಹ್ಲಿ ಹೇಳಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಆರಂಭಿಕ ದಿನಗಳಲ್ಲಿ ತಮ್ಮನ್ನು ರಕ್ಷಿಸಿದ ರೀತಿ ಮತ್ತು ಮುಂದೆ ಕ್ರಿಕೆಟಿಗರಾಗಲು ಸಹಾಯ ಮಾಡಿದ್ದಕ್ಕಾಗಿ ಕೊಹ್ಲಿ ಮತ್ತೊಮ್ಮೆ ಶಾಸ್ತ್ರಿ ಅವರಿಗೆ ಧನ್ಯವಾದ ಅರ್ಪಿಸಿದರು.
'ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಅವರೊಂದಿಗೆ ಕೆಲಸ ಮಾಡದಿದ್ದರೆ... ಈಗ ಟೆಸ್ಟ್ ಕ್ರಿಕೆಟ್‌ನಲ್ಲಿ ಏನಾಗಿದೆಯೋ ಅದು ಸಾಧ್ಯವಾಗುತ್ತಿರಲಿಲ್ಲ. ನಾವಿಬ್ಬರೂ ಪರಸ್ಪರ ನಂಬಿಕೆ ಮತ್ತು ಗುರಿಗಳಲ್ಲಿ ತುಂಬಾ ಸ್ಪಷ್ಟತೆಯನ್ನು ಹೊಂದಿದ್ದೆವು. ಈ ಸ್ಪಷ್ಟತೆ ಮತ್ತು ಬೆಂಬಲವು ಕ್ರಿಕೆಟಿಗರು ತಮ್ಮ ವೃತ್ತಿಜೀವನದಲ್ಲಿ ಬೆಳೆಯಲು ಅತ್ಯಗತ್ಯ. ಅವರು ನನ್ನನ್ನು ಅಷ್ಟು ಬಲವಾಗಿ ಬೆಂಬಲಿಸದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಎದುರಿನಿಂದ ಬರುತ್ತಿದ್ದ ಕಠೋರ ಪ್ರಶ್ನೆಗಳ ನಡುವೆಯೂ ಅವರು ನಡೆಸಿದ ಪತ್ರಿಕಾಗೋಷ್ಠಿಗಳು ಉತ್ತಮವಾಗಿರುತ್ತಿದ್ದವು. ವಿಷಯಗಳು ವಿಭಿನ್ನವಾಗಿರುತ್ತಿದ್ದವು ಮತ್ತು ನನ್ನ ಕ್ರಿಕೆಟ್ ಪ್ರಯಾಣದ ಒಂದು ದೊಡ್ಡ ಭಾಗವಾಗಿದ್ದಕ್ಕಾಗಿ ನಾನು ಅವರ ಬಗ್ಗೆ ಯಾವಾಗಲೂ ಗೌರವ ಹೊಂದಿದ್ದೇನೆ' ಎಂದು ಕೊಹ್ಲಿ ಹೇಳಿದರು.
ಯುವರಾಜ್ ಸಿಂಗ್, ಹರ್ಭಜನ್ ಸಿಂಗ್, ಜಹೀರ್ ಖಾನ್ ಮುಂತಾದ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಾಗ ವಿರಾಟ್ ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡರು.
'ನಾವು ಮೈದಾನದ ಒಳಗೆ ಮತ್ತು ಹೊರಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದೆವು. ಬೆಂಗಳೂರಿನಲ್ಲಿ ನಡೆದ ಉತ್ತರ ವಲಯ ಪಂದ್ಯಾವಳಿಯ ಸಮಯದಲ್ಲಿ ನಾನು ಅವರನ್ನು ಮೊದಲ ಬಾರಿಗೆ ಭೇಟಿಯಾದೆ. ನಾನು ಭಾರತಕ್ಕಾಗಿ ಆಡಲು ಪ್ರಾರಂಭಿಸಿದಾಗ, ಅವರು, ಭಜ್ಜು ಪಾ ಮತ್ತು ಜಹೀರ್ ಖಾನ್ ನನ್ನನ್ನು ತಮ್ಮವನೆಂದು ಭಾವಿಸಿದರು. ನಿಜವಾಗಿಯೂ ನಾನು ಆಟಗಾರನಾಗಿ ಬೆಳೆಯಲು ಸಹಾಯ ಮಾಡಿದರು. ಡ್ರೆಸ್ಸಿಂಗ್ ಕೋಣೆಯಲ್ಲಿ ನನಗೆ ಕಂಫರ್ಟ್ ಆಗಿರುವಂತೆ ಮಾಡಿದರು' ಎಂದರು.
'ಮೈದಾನದ ಹೊರಗೆ ಬಹಳಷ್ಟು ಮೋಜಿನ ಸಮಯಗಳು ಮತ್ತು ಉನ್ನತ ಸ್ಥಾನಕ್ಕೆ ಹೋಗುವ ಜೀವನಶೈಲಿಯ ಬಗ್ಗೆ ನನಗೆ ಅರಿವು ಮೂಡಿಸಿದವು. ಇವು ನನ್ನ ಜೀವನದುದ್ದಕ್ಕೂ ನಾನು ಪಾಲಿಸುವ ಬಂಧಗಳಾಗಿವೆ. ವಿಶ್ವಕಪ್‌ನಲ್ಲಿ ಅವರನ್ನು ನೋಡುವುದು ತುಂಬಾ ವಿಶೇಷವಾಗಿತ್ತು ಮತ್ತು ಅದರ ನಂತರ ನಮಗೆ ತಿಳಿದುಬಂದದ್ದು ಆಘಾತಕಾರಿಯಾಗಿತ್ತು. ಅವರಿಗೆ ತುಂಬಾ ಹತ್ತಿರವಾಗಿದ್ದರೂ... ಅದು ನಮಗೆ ತಿಳಿದಿರಲಿಲ್ಲ. ನಂತರ ಅವರ ಕ್ಯಾನ್ಸರ್ ವಿರುದ್ಧದ ಹೋರಾಟ ಮತ್ತು ಅವರು ಈಗಿರುವ ಚಾಂಪಿಯನ್... ನಾನು ತಂಡವನ್ನು ಮುನ್ನಡೆಸುತ್ತಿರುವಾಗ ತಂಡಕ್ಕೆ ಮರಳಿದರು' ಎಂದು ನೆನಪಿಸಿಕೊಂಡರು.
ಭಾರತದ ಅಗ್ರ ಕ್ರಮಾಂಕದ ಆಟಗಾರರು ಬೇಗನೆ ಔಟಾದ ನಂತರ ಯುವರಾಜ್ ಸಿಂಗ್ ಮತ್ತು ಎಂಎಸ್ ಧೋನಿ ಇಬ್ಬರೂ ಶತಕಗಳನ್ನು ಗಳಿಸಿದ 2017ರ ಸರಣಿಯನ್ನು ಕೊಹ್ಲಿ ನೆನಪಿಸಿಕೊಂಡರು.
'ನಾವು ಕಟಕ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪಂದ್ಯ ಆಡಿದ್ದು ನನಗೆ ಸ್ಪಷ್ಟವಾಗಿ ನೆನಪಿದೆ. 2017ರಲ್ಲಿ ನಾವು ತವರಿನಲ್ಲಿ ಆಡಿದ ಸರಣಿಯಲ್ಲಿ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಬೇಗನೆ ಔಟ್ ಆದರು ಮತ್ತು ಯುವಿ ಪಾ 150 ರನ್ ಗಳಿಸಿದರು ಮತ್ತು ಎಂಎಸ್ ಧೋನಿ 110 ರನ್ ಗಳಿಸಿದರು. ಇದು ಬಾಲ್ಯದ ದಿನಗಳಲ್ಲಿ ದೊಡ್ಡ ಟಿವಿಯಲ್ಲಿ ನೋಡುತ್ತಿರುವಂತೆ ಇದೆ ಎಂದು ಕೆಎಲ್ ರಾಹುಲ್ ಅಥವಾ ಯಾರಿಗೋ ಹೇಳಿದ್ದು ನನಗೆ ಇನ್ನೂ ನೆನಪಿದೆ... ನನಗೆ ಅವರ ಬಗ್ಗೆ ತುಂಬಾ ಪ್ರೀತಿ ಮತ್ತು ಗೌರವವಿದೆ. ಇಲ್ಲಿರುವುದು ಸಂತೋಷದ ಸಂಗತಿ ಮತ್ತು ನಾನು ಅವರನ್ನು ಹೊರತುಪಡಿಸಿ ಬೇರೆ ಯಾರಿಗೂ ಇದನ್ನು ಮಾಡುವುದಿಲ್ಲ' ಎಂದು ತಿಳಿಸಿದರು.