ಸೋಫಿಯಾ: ಬಲ್ಗೇರಿಯಾದಲ್ಲಿ ನಡೆದ ತ್ರಿಕೋನ ಟಿ20 ಕ್ರಿಕೆಟ್ ಸರಣಿಯಲ್ಲಿ ವಿಶ್ವ ದಾಖಲೆಯೊಂದು ನಿರ್ಮಾಣವಾಗಿದ್ದು, ಕ್ರಿಕೆಟ್ ಜಗತ್ತಿನ ಯಾವುದೇ ಅಗ್ರ ತಂಡಗಳೂ ಮಾಡಲಾಗದ ಸಾಧನೆಯನ್ನು ಕ್ರಿಕೆಟ್ ಶಿಶು ಬಲ್ಗೇರಿಯಾ ಮಾಡಿ ತೋರಿಸಿದೆ.
ಹೌದು.. ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದ್ದು, ಬಲ್ಗೇರಿಯಾದಲ್ಲಿ ನಡೆಯುತ್ತಿರುವ ಬಲ್ಗೇರಿಯಾ, ಜಿಬ್ರಾಲ್ಟರ್ ಮತ್ತು ಟರ್ಕಿ ನಡುವಿನ ತ್ರಿಕೋನ ಟಿ20 ಸರಣಿಯ 4ನೇ ಪಂದ್ಯದಲ್ಲಿ ಈ ಐತಿಹಾಸಿಕ ದಾಖಲೆ ನಿರ್ಮಾಣವಾಗಿದೆ. ಬಲ್ಗೇರಿಯಾ ಮತ್ತು ಜಿಬ್ರಾಲ್ಟರ್ ನಡುವಿನ ಪಂದ್ಯದಲ್ಲಿ ಬಲ್ಗೇರಿಯಾ ದಾಖಲೆಯ ಚೇಸಿಂಗ್ ಮಾಡಿ ಐತಿಹಾಸಿಕ ದಾಖಲೆ ನಿರ್ಮಿಸಿದೆ.
ಬಲ್ಗೇರಿಯಾ ರಾಜಧಾನಿ ಸೋಫಿಯಾದ ನ್ಯಾಷನಲ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ಟಾಸ್ ಗೆದ್ದ ಬಲ್ಗೇರಿಯಾ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಜಿಬ್ರಾಲ್ಟರ್ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತು.
ಜಿಬ್ರಾಲ್ಟರ್ ಪರ ಆರಂಭಿಕ ಆಟಗಾರ ಫಿಲಿಪ್ ರೈಕ್ಸ್ ಕೇವಲ 33 ಎಸೆತಗಳಲ್ಲಿ 73 ರನ್ ಗಳಿಸಿದರೆ, ನಾಯಕ ಇಯಾನ್ ಲ್ಯಾಟಿನ್ 28 ಎಸೆತಗಳಲ್ಲಿ 52 ರನ್ ಸಿಡಿಸಿದರು. ಉಳಿದಂತೆ ಮೈಕೆಲ್ ರೈಕ್ಸ್ (21), ಲೂಯಿಸ್ ಬ್ರೂಸ್ (24), ಕ್ರಿಸ್ ಪೈಲ್ (22) ಮತ್ತು ಕಬೀರ್ ಮಿರ್ಪುರಿ (21) ಎರಡಂಕಿ ಮೊತ್ತ ಗಳಿಸಿದರು. ಅಂತಿಮವಾಗಿ ಜಿಬ್ರಾಲ್ಟರ್ ತಂಡ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿತು.
ಬಲ್ಗೇರಿಯಾ ದಾಖಲೆಯ ಚೇಸ್
ಈ 244 ರನ್ ಗಳ ಬೃಹತ್ ಮೊತ್ತವನ್ನು ಬೆನ್ನು ಹತ್ತಿದ ಬಲ್ಗೇರಿಯಾ ತಂಡ ಮನನ್ ಬಶೀರ್ (70), ಮಿಲೆನ್ ಗೊಗೆವ್ (69) ಮತ್ತು ಇಸಾ ಜಾರೋ (69) ಅದ್ಭುತ ಬ್ಯಾಟಿಂಗ್ ನೆರವಿನಿಂದ ಕೇವಲ 14.2 ಓವರ್ ನಲ್ಲೇ 4 ವಿಕೆಟ್ ಕಳೆದುಕೊಂಡು 17.02 ಸರಾಸರಿಯಲ್ಲಿ 244 ರನ್ ಗಳಿಸಿ ಐತಿಹಾಸಿಕ ಜಯ ದಾಖಲಿಸಿತು.
ವಿಶ್ವ ದಾಖಲೆ
ಬಲ್ಗೇರಿಯಾ ಈ ಜಯ ಕ್ರಿಕೆಟ್ ಇತಿಹಾಸದ ದಾಖಲೆಗೆ ಪಾತ್ರವಾಗಿದ್ದು, ಟಿ20 ಕ್ರಿಕೆಟ್ ಇತಿಹಾಸದಲ್ಲೇ 200ಕ್ಕೂ ಅಧಿಕ ರನ್ ಗುರಿಯನ್ನು ಅತೀ ಹೆಚ್ಚಿನ ರನ್ ರೇಟ್ನಲ್ಲಿ ಚೇಸ್ ಮಾಡಿದ ವಿಶ್ವ ದಾಖಲೆಯನ್ನು ಬಲ್ಗೇರಿಯಾ ತಂಡ ತನ್ನದಾಗಿಸಿಕೊಂಡಿದೆ. ಇದಕ್ಕೂ ಮುನ್ನ ಈ ದಾಖಲೆ ಸರ್ಬಿಯಾ ತಂಡದ ಹೆಸರಿನಲ್ಲಿತ್ತು. 2025 ರಲ್ಲಿ ಸ್ಲೋವೆನಿಯಾ ವಿರುದ್ಧದ ಪಂದ್ಯದಲ್ಲಿ ಸರ್ಬಿಯಾ 200 ರನ್ಗಳ ಗುರಿಯನ್ನು 14.1 ಓವರ್ಗಳಲ್ಲಿ ಚೇಸ್ ಮಾಡಿ ವಿಶ್ವ ದಾಖಲೆ ನಿರ್ಮಿಸಿದ್ದರು.
487 ರನ್, 41 ಸಿಕ್ಸರ್
ಇನ್ನು ಈ ಪಂದ್ಯದಲ್ಲಿ ಎರಡೂ ತಂಡಗಳಿಂದ 34.1 ಓವರ್ಗಳಲ್ಲಿ 487 ರನ್ಗಳು ಹರಿದುಬಂದಿದ್ದು ಅಲ್ಲದೆ ಎರಡೂ ತಂಡಗಳಿಂದ ಒಟ್ಟು 41 ಸಿಕ್ಸರ್ ಗಳು ಹರಿದುಬಂದಿವೆ. ಈ ಪೈಕಿ ಜಿಬ್ರಾಲ್ಟರ್ ಬ್ಯಾಟರ್ಗಳು 18 ಸಿಕ್ಸ್ಗಳನ್ನು ಬಾರಿಸಿದರೆ, ಬಲ್ಗೇರಿಯಾ ಬ್ಯಾಟ್ಸ್ಮನ್ಗಳು 23 ಸಿಕ್ಸರ್ ಸಿಡಿಸಿದರು.