ಯಾವುದೇ ಕ್ರಿಕೆಟಿಗನಿಗೆ, ಲಾರ್ಡ್ಸ್ ಹಾನರ್ ಬೋರ್ಡ್‌ನಲ್ಲಿ ಸ್ಥಾನ ಪಡೆಯುವುದು ಒಂದು ಕನಸು ನನಸಾದ ಕ್ಷಣ. ಇಂಗ್ಲೆಂಡ್ ನೆಲದ ಇತಿಹಾಸದಲ್ಲಿ ತಮ್ಮ ಹೆಸರನ್ನು ಬರೆಯುವುದು ಕೆಲವರಿಗೆ ಒಂದು ವಿಶಿಷ್ಟ ಕ್ಷಣವಾಗಿದೆ. ಜಸ್ಪ್ರೀತ್ ಬುಮ್ರಾ ಮೂರನೇ ಟೆಸ್ಟ್‌ನ 2ನೇ ದಿನದಂದು ಲಾರ್ಡ್ಸ್‌ನಲ್ಲಿ ತಮ್ಮ ಚೊಚ್ಚಲ ಐದು ವಿಕೆಟ್‌ಗಳ ಗೊಂಚಲು ಪಡೆದರು. ಆದರೂ ಯಾವುದೇ ಸಂಭ್ರಮಾಚರಣೆಯನ್ನು ಮಾಡಲಿಲ್ಲ. ಬದಲಾಗಿ, ಬುಮ್ರಾ ಸದ್ದಿಲ್ಲದೆ ತಮ್ಮ ಗುರಿಯನ್ನು ತಲುಪಿದರು.
'ನಾನು ದಣಿದಿದ್ದರಿಂದ ಅಲ್ಲಿ ಸಂಭ್ರಮಾಚರಣೆ ಮಾಡಲಿಲ್ಲ. ಜಿಗಿಯಲು ಈಗ ನಾನು 21-22 ವಯಸ್ಸಿನವನಲ್ಲ. ತಂಡಕ್ಕೆ ಕೊಡುಗೆ ನೀಡುವುದು ನನಗೆ ಸಂತೋಷವಾಯಿತು. ಆದರೆ, ನಾನು ಹಿಂತಿರುಗಿ ಮುಂದಿನ ಚೆಂಡನ್ನು ಬೌಲ್ ಮಾಡಲು ಬಯಸಿದ್ದೆ' ಎಂದು ಬುಮ್ರಾ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಎರಡನೇ ಟೆಸ್ಟ್ ಪಂದ್ಯಕ್ಕೆ ವಿಶ್ರಾಂತಿ ಪಡೆದ ನಂತರ ಪ್ಲೇಯಿಂಗ್ ಇಲೆವೆನ್‌ನಲ್ಲಿ ಸ್ಥಾನ ಪಡೆದ ಬುಮ್ರಾ, 74 ರನ್‌ಗಳನ್ನು ನೀಡಿ 5 ವಿಕೆಟ್ ಪಡೆದರು. ಈ ಮೂಲಕ ಭಾರತವು ಇಂಗ್ಲೆಂಡ್ ಅನ್ನು 387 ರನ್‌ಗಳಿಗೆ ಆಲೌಟ್ ಮಾಡಲು ನೆರವಾದರು. ಕೇವಲ ಏಳು ಎಸೆತಗಳ ಅಂತರದಲ್ಲಿ, ಬುಮ್ರಾ ಜೋ ರೂಟ್, ಬೆನ್ ಸ್ಟೋಕ್ಸ್ ಮತ್ತು ಕ್ರಿಸ್ ವೋಕ್ಸ್ ಅವರನ್ನು ಔಟ್ ಮಾಡಿ ಆತಿಥೇಯರ ಸ್ಕೋರ್ ಅನ್ನು 251/4 ರಿಂದ 271/7 ಕ್ಕೆ ಇಳಿಸಿದರು.
ಇದು ಬುಮ್ರಾ ಅವರ ಸರಣಿಯಲ್ಲಿ ಸತತ ಎರಡನೇ ಐದು ವಿಕೆಟ್ ಗೊಂಚಲಾಗಿದ್ದು, ಟೆಸ್ಟ್ ಕ್ರಿಕೆಟ್‌ನಲ್ಲಿ ಅವರ 15ನೇ ವಿಕೆಟ್ ಆಗಿದೆ. ಈ ಮೂಲಕ ಅವರು ಕಪಿಲ್ ದೇವ್ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ. ತವರಿನಿಂದ ಹೊರಗೆ ಅತಿಹೆಚ್ಚು ಬಾರಿ ಇನ್ನಿಂಗ್ಸ್‌ವೊಂದರಲ್ಲಿ 5 ವಿಕೆಟ್ ಕಬಳಿಸಿದ ಭಾರತೀಯ ಬೌಲರ್ ಎನ್ನುವ ದಾಖಲೆಯನ್ನು ಬುಮ್ರಾ ಬರೆದಿದ್ದಾರೆ. ಇದು ಅವರ 13ನೇ 5 ವಿಕೆಟ್ ಗೊಂಚಲಾಗಿದ್ದು, ಕಪಿಲ್ ದೇವ್ 12 ಸಲ ಈ ಸಾಧನೆ ಮಾಡಿದ್ದರು.
'ನಾನು ಭಾರತ ತಂಡದ ಜೆರ್ಸಿ ಧರಿಸುವವರೆಗೆ, ಜನರು ನನ್ನನ್ನು ಜಡ್ಜ್ ಮಾಡುತ್ತಲೇ ಇರುತ್ತಾರೆ. ವೃತ್ತಿಪರ ಕ್ರೀಡೆಯೂ ಹಾಗೆಯೇ. ಸಚಿನ್ ಸರ್ ಕೂಡ 200 ಟೆಸ್ಟ್ ಆಡಿದ್ದಾರೆ ಮತ್ತು ಈಗಲೂ ಜಡ್ಜ್ ಮಾಡುತ್ತಲೇ ಇದ್ದಾರೆ. ಹಲವು ಕ್ಯಾಮೆರಾಗಳಿವೆ. ಜನರು ಈಗ ವೀಕ್ಷಣೆಗಳು ಮತ್ತು ಚಂದಾದಾರರನ್ನು ಬೆನ್ನಟ್ಟುತ್ತಿದ್ದಾರೆ. ಅವರು ನನ್ನ ಮುಖದಿಂದ ಹಣ ಸಂಪಾದಿಸುತ್ತಿದ್ದರೆ, ಬಹುಶಃ ಅವರು ನನಗೆ ಆಶೀರ್ವಾದ ನೀಡುತ್ತಾರೆ' ಎಂದರು.
ದಿನದಾಟದ ಅಂತ್ಯಕ್ಕೆ ಭಾರತ 145/3 ರನ್ ಗಳಿಸಿ 242 ರನ್‌ಗಳ ಹಿನ್ನಡೆಯಲ್ಲಿತ್ತು. ಕೆಎಲ್ ರಾಹುಲ್ (53*) ಮತ್ತು ರಿಷಭ್ ಪಂತ್ (19*) ಪ್ರವಾಸಿ ತಂಡದ ಪರ ಕ್ರೀಸ್‌ನಲ್ಲಿದ್ದರು.