ಶುಭಮನ್ ಗಿಲ್ ನೇತೃತ್ವದ ಯುವ ಆಟಗಾರರ ಭಾರತ ತಂಡ ಸದ್ಯ ನಡೆಯುತ್ತಿರುವ ಇಂಗ್ಲೆಂಡ್ vs ಭಾರತ ಸರಣಿಯಲ್ಲಿ ಕಠಿಣ ಪರೀಕ್ಷೆಯನ್ನು ಎದುರಿಸುತ್ತಿದೆ. ಸರಣಿಗೂ ಮುನ್ನ, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದು, ತಂಡಕ್ಕೆ ಹೊಡೆತ ನೀಡಿದಂತಾಗಿದೆ. ಇಬ್ಬರೂ ಹಿರಿಯ ಆಟಗಾರರು ಟೆಸ್ಟ್ ಮಾದರಿಗೆ ವಿದಾಯ ಹೇಳಿದ್ದಾರೆ. ಇದಕ್ಕೂ ಮೊದಲು, ಅವರು T20I ಸ್ವರೂಪದಿಂದ ನಿವೃತ್ತರಾದರು ಮತ್ತು ಇದೀಗ ಇಬ್ಬರೂ ODI ಸ್ವರೂಪದಲ್ಲಿ ಸಕ್ರಿಯರಾಗಿದ್ದಾರೆ. ಭಾರತೀಯ ಕ್ರಿಕೆಟ್ ತಂಡದೊಂದಿಗೆ ಇಂಗ್ಲೆಂಡ್‌ನಲ್ಲಿರುವ ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಟಾರ್ ಆಟಗಾರರ ನಿವೃತ್ತಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.
ಸರಣಿಗೂ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿ ಬಗ್ಗೆ ಮಾತನಾಡಿದ ಶುಕ್ಲಾ, ಅವರ ಉಪಸ್ಥಿತಿಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದರೂ, ಅದು ಅವರ ವೈಯಕ್ತಿಕ ನಿರ್ಧಾರ ಮತ್ತು ಬಿಸಿಸಿಐ ಯಾರನ್ನೂ ಯಾವುದೇ ಸ್ವರೂಪದಿಂದ ನಿವೃತ್ತಿ ಹೊಂದುವಂತೆ ಒತ್ತಾಯಿಸುವುದಿಲ್ಲ ಎಂದು ಹೇಳಿದರು.
'ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾವೆಲ್ಲರೂ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅನುಪಸ್ಥಿತಿಯನ್ನು ಅನುಭವಿಸುತ್ತಿದ್ದೇವೆ. ನಿವೃತ್ತಿ ನಿರ್ಧಾರವನ್ನು ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸ್ವತಃ ತೆಗೆದುಕೊಂಡರು. ಯಾವುದೇ ಆಟಗಾರನಿಗೆ ನಿವೃತ್ತಿ ಹೊಂದಲು ನಾವು ಎಂದಿಗೂ ಹೇಳುವುದಿಲ್ಲ ಎಂಬುದು ಬಿಸಿಸಿಐ ನೀತಿಯಾಗಿದೆ. ನಾವು ಅವರನ್ನು ಯಾವಾಗಲೂ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳೆಂದು ಪರಿಗಣಿಸುತ್ತೇವೆ' ಎಂದು ಹೇಳಿದರು.
'ಅವರು ಸ್ವತಃ ನಿವೃತ್ತರಾಗಿದ್ದಾರೆ. ನಾವು ಯಾವಾಗಲೂ ಅವರನ್ನು ಮಿಸ್ ಮಾಡಿಕೊಳ್ಳುತ್ತೇವೆ. ಅವರಿಬ್ಬರೂ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಮತ್ತು ನಮಗೆ ಒಳ್ಳೆಯ ವಿಷಯವೆಂದರೆ ಅವರು ಏಕದಿನ ಪಂದ್ಯಗಳಿಗೆ ಲಭ್ಯವಿದ್ದಾರೆ' ಎಂದರು.
ವಿದೇಶಿ ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರಿಂದ, ಪ್ರವಾಸಕ್ಕೂ ಮುನ್ನ ತಂಡದಲ್ಲಿ ಸ್ಥಾನದ ಬಗ್ಗೆ ಪ್ರಶ್ನೆಗಳಿದ್ದರೂ ಯುವ ನಾಯಕ ಶುಭಮನ್ ಗಿಲ್ ತಮ್ಮನ್ನು ತಾವು ನಾಯಕನಾಗಿ ಸಾಬೀತುಪಡಿಸಿಕೊಂಡಿದ್ದಾರೆ. ಅವರು ಬ್ಯಾಟಿಂಗ್‌ನಲ್ಲೂ ತಮ್ಮನ್ನು ತಾವು ಸಾಬೀತುಪಡಿಸಿದ್ದಾರೆ. ಒಂದು ಶತಕ, ನಂತರ ದ್ವಿಶತಕ ಮತ್ತು ಶತಕ, ಇದಕ್ಕಿಂತ ಉತ್ತಮವಾದದ್ದು ಇನ್ನೊಂದಿದೆಯೇ?' ಎಂದು ಶುಕ್ಲಾ ಹೇಳಿದರು.