ಕೊಲಂಬೋ: ಶ್ರೀಲಂಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ ಐತಿಹಾಸಿಕ ಜಯ ಸಾಧಿಸಿದ್ದು, ತಂಡದ ಸ್ಟಾರ್ ಬೌಲರ್ ಮೆಹದಿ ಹಸನ್ ಭಾರತದ ಸ್ಪಿನ್ ಲೆಜೆಂಡ್ ಹರ್ಭಜನ್ ಸಿಂಗ್ ದಾಖಲೆ ಮುರಿದಿದ್ದಾರೆ.
ಶ್ರೀಲಂಕಾ ಪ್ರವಾಸದಲ್ಲಿರುವ ಬಾಂಗ್ಲಾದೇಶ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ 2-1 ಅಂತರದಲ್ಲಿ ಐತಿಹಾಸಿಕ ಜಯ ಸಾಧಿಸಿದೆ. ಕೊಲಂಬೊದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ ತಂಡ 8 ವಿಕೆಟ್ ಗಳ ಅಂತರದ ಭರ್ಜರಿ ಜಯ ಸಾಧಿಸಿದೆ.
ಆರ್ ಪ್ರೇಮದಾಸ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕ ಚರಿತ್ ಅಸಲಂಕಾ ಬ್ಯಾಟಿಂಗ್ ಆಯ್ದುಕೊಂಡರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಂಕಾ ತಂಡ ನಿಸ್ಸಾಂಕಾ (46 ರನ್) ಮತ್ತು ಶನಕ (35 ರನ್) ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ನಿಗಧಿತ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿತು.
ಈ ಸುಲಭದ ಗುರಿಯನ್ನು ಬೆನ್ನು ಹತ್ತಿದ ಬಾಂಗ್ಲಾದೇಶ ಪರ ತಂಝೀಮ್ ಹಸನ್ ತಮೀಮ್ 47 ಎಸೆತಗಳಲ್ಲಿ 6 ಸಿಕ್ಸ್ ಹಾಗೂ 1 ಫೋರ್ನೊಂದಿಗೆ ಅಜೇಯ 73 ರನ್ ಬಾರಿಸಿದರು. ಇನ್ನು ನಾಯಕ ಲಿಟ್ಟನ್ ದಾಸ್ 32 ರನ್ ಕಲೆಹಾಕಿದರು. ಇನ್ನು ತೌಹಿದ್ ಹೃದೋಯ್ 27 ರನ್ಗಳ ಕೊಡುಗೆ ನೀಡಿದರು. ಈ ಮೂಲಕ ಬಾಂಗ್ಲಾದೇಶ್ ತಂಡವು 16.3 ಓವರ್ಗಳಲ್ಲಿ 133 ರನ್ ಬಾರಿಸಿ, 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಬಾಂಗ್ಲಾದೇಶಕ್ಕೆ ಐತಿಹಾಸಿಕ ಜಯ
ಇನ್ನು ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಬಾಂಗ್ಲಾದೇಶಕ್ಕೆ ಇದು ಚೊಚ್ಚಲ ಸರಣಿ ಜಯವಾಗಿದೆ. ಬಾಂಗ್ಲಾದೇಶ ತಂಡವು ಈವರೆಗೆ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿಲ್ಲ. ಈ ಬಾರಿ ಲಂಕಾ ಪಡೆ ವಿರುದ್ಧ 2-1 ಅಂತರದಿಂದ ಸರಣಿ ಗೆಲ್ಲುವ ಮೂಲಕ ಬಾಂಗ್ಲಾದೇಶ್ ತಂಡವು ಹೊಸ ಇತಿಹಾಸ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ.
ಹರ್ಭಜನ್ ದಾಖಲೆ ಮುರಿದ ಮೆಹದಿ ಹಸನ್
ಇನ್ನು ಈ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡಿದ ಮೆಹದಿ ಹಸನ್ 4 ಓವರ್ ನಲ್ಲಿ ಕೇವಲ 2.80 ಸರಾಸರಿಯಲ್ಲಿ ಕೇವಲ 11ರನ್ ನೀಡಿದ್ದರು. ಈ ಪೈಕಿ ಒಂದು ಮೇಡಿನ್ ಕೂಡ ಸೇರಿತ್ತು. ಇದು ಪ್ರೇಮದಾಸ ಕ್ರೀಡಾಂಗಣದಲ್ಲಿ ಬೌಲರ್ ಒಬ್ಬರ ಟಿ20 ಪಂದ್ಯದ ಅತ್ಯುತ್ತಮ ಪ್ರದರ್ಶನವಾಗಿ ದಾಖಲಾಗಿದೆ.
ಈ ಹಿಂದೆ ಈ ದಾಖಲೆ ಭಾರತದ ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. 2012ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹರ್ಭಜನ್ ಸಿಂಗ್ ಕೇವಲ 12 ರನ್ ನೀಡಿ 4 ವಿಕೆಟ್ ಪಡೆದಿದ್ದರು. ಇದು ಈ ಕ್ರೀಡಾಂಗಣದಲ್ಲಿ ವಿದೇಶಿ ಬೌಲರ್ ಒಬ್ಬರ ಅತ್ಯುತ್ತಮ ಪ್ರದರ್ಶನವಾಗಿತ್ತು. ಇದೀಗ ಈ ದಾಖಲೆಯನ್ನು ಬಾಂಗ್ಲಾದೇಶದ ಮೆಹದಿ ಹಸನ್ ಹಿಂದಿಕ್ಕಿದ್ದಾರೆ.
ಉಳಿದಂತೆ ಈ ಮೈದಾನದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ದಾಖಲೆ ಶ್ರೀಲಂಕಾದ ವನಿಂದು ಹಸರಂಗ ಹೆಸರಲ್ಲಿದೆ. ಅವರು ಕೇವಲ 9 ರನ್ ನೀಡಿ 4 ವಿಕೆಟ್ ಪಡೆದಿದ್ದಾರೆ.