ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾ ಹಲವಾರು ಗಾಯದ ಸಮಸ್ಯೆಗಳಿಂದ ಬಳಲುತ್ತಿದ್ದು, ಇದೀಗ ನಿತೀಶ್ ಕುಮಾರ್ ರೆಡ್ಡಿ ಮತ್ತು ಅರ್ಶ್‌ದೀಪ್ ಸಿಂಗ್ ಅವರಂತಹ ಆಟಗಾರರನ್ನು ತಂಡದಿಂದ ಹೊರಗಿಡಲಾಗಿದೆ. ವಾಸ್ತವವಾಗಿ, ಆಲ್‌ರೌಂಡರ್ ಆಗಿರುವ ರೆಡ್ಡಿ ಅವರನ್ನು ಸರಣಿಯ ಉಳಿದ ಎರಡು ಪಂದ್ಯಗಳಿಂದ ಹೊರಗಿಡಲಾಗಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮ್ಯಾಂಚೆಸ್ಟರ್ ಪಂದ್ಯಕ್ಕೂ ಮುನ್ನ ಒಬ್ಬ ಬದಲಿ ಆಟಗಾರನನ್ನು ಮಾತ್ರ ಹೆಸರಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್ ವೇಗಿ ಅನ್ಶುಲ್ ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿಕೊಂಡಿದೆ.
5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 1-2 ಅಂತರದಿಂದ ಹಿನ್ನಡೆಯಲ್ಲಿರುವ ಟೀಂ ಇಂಡಿಯಾಗೆ ಮ್ಯಾಂಚೆಸ್ಟರ್‌ನಲ್ಲಿ ನಡೆಯಲಿರುವ 4ನೇ ಟೆಸ್ಟ್ ಪಂದ್ಯ ಗೆಲ್ಲಲೇಬೇಕಾದ ಪಂದ್ಯವಾಗಿದೆ. ಆಕಾಶ್ ದೀಪ್ ಅವರ ಫಿಟ್ನೆಸ್ ಬಗ್ಗೆಯೂ ಸಂದೇಹಗಳಿದ್ದವು. ಆದರೆ, ಬಿಸಿಸಿಐ ಅವರನ್ನು ಮ್ಯಾಂಚೆಸ್ಟರ್ ಟೆಸ್ಟ್‌ಗೆ ತಂಡದಲ್ಲಿ ಹೆಸರಿಸಿದೆ. ಜಸ್ಪ್ರೀತ್ ಬುಮ್ರಾ ಅವರಿಗೆ ವಿಶ್ರಾಂತಿ ನೀಡಿದರೆ, ಆಡಳಿತ ಮಂಡಳಿ ಯಾವ ವೇಗಿಗಳನ್ನು ತಂಡಕ್ಕೆ ಕರೆತರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
ಕೆಲವು ವರದಿಗಳು ಜಸ್ಪ್ರೀತ್ ಬುಮ್ರಾ 4ನೇ ಟೆಸ್ಟ್ ಪಂದ್ಯದಲ್ಲಿ ಆಡಿದರೆ ಸದ್ಯ ಪ್ಲೇಯಿಂಗ್ XI ನ ಭಾಗವಾಗಿರುವ ಆಕಾಶ್ ದೀಪ್ ಅವರನ್ನು ಕೂರಿಸಬಹುದು ಎಂದು ಸೂಚಿಸಿವೆ. ಸ್ಪಿನ್ನರ್ ಕುಲದೀಪ್ ಯಾದವ್ ಅವರನ್ನು ಪ್ಲೇಯಿಂಗ್ XIಗೆ ಸೇರಿಸಿಕೊಳ್ಳಬೇಕೆಂಬ ಬೇಡಿಕೆಗಳು ಬಂದಿವೆ. ಆದರೆ, ಚೈನಾಮನ್ ಸ್ಪಿನ್ನರ್ ಇದುವರೆಗಿನ ಮೂರು ಟೆಸ್ಟ್ ಪಂದ್ಯಗಳಲ್ಲಿ ಯಾವುದರಲ್ಲೂ ಆಡಿಲ್ಲ.
'ಎಡ ಮೊಣಕಾಲಿನ ಗಾಯದಿಂದಾಗಿ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಉಳಿದ ಎರಡು ಟೆಸ್ಟ್‌ಗಳಿಂದ ಹೊರಗುಳಿದಿದ್ದಾರೆ. ನಿತೀಶ್ ಮನೆಗೆ ಮರಳಲಿದ್ದಾರೆ ಮತ್ತು ತಂಡವು ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತದೆ' ಎಂದು ಬಿಸಿಸಿಐ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
'ಮ್ಯಾಂಚೆಸ್ಟರ್‌ನಲ್ಲಿ ಇಂಗ್ಲೆಂಡ್ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯದಿಂದ ಅರ್ಶ್‌ದೀಪ್ ಸಿಂಗ್ ಹೊರಗುಳಿದಿದ್ದಾರೆ. ಬೆಕೆನ್‌ಹ್ಯಾಮ್‌ನಲ್ಲಿ ನಡೆದ ಅಭ್ಯಾಸದ ವೇಳೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದೆ. ಬಿಸಿಸಿಐ ವೈದ್ಯಕೀಯ ತಂಡವು ಅವರನ್ನು ಮೇಲ್ವಿಚಾರಣೆ ಮಾಡುತ್ತಿದೆ. ಪುರುಷರ ಆಯ್ಕೆ ಸಮಿತಿಯು ಅನ್ಶುಲ್ ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿದೆ. ಕಾಂಬೋಜ್ ಮ್ಯಾಂಚೆಸ್ಟರ್‌ನಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ. ನಾಲ್ಕನೇ ಟೆಸ್ಟ್ ಜುಲೈ 23 ರಂದು ಆರಂಭವಾಗಲಿದೆ' ಎಂದು ತಿಳಿಸಿದೆ.
ನಾಲ್ಕನೇ ಟೆಸ್ಟ್‌ಗಾಗಿ ನವೀಕರಿಸಲಾದ ಭಾರತದ ತಂಡ
ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್ (ವಿಕೆಟ್ ಕೀಪರ್), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಅಭಿಮನ್ಯು ಈಶ್ವರನ್, ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ ಜುರೆಲ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಆಕಾಶ್ ದೀಪ್, ಕುಲದೀಪ್ ಯಾದವ್, ಅಂಶುಲ್ ಕಾಂಬೋಜ್