ಟೀಂ ಇಂಡಿಯಾದ ಬ್ಯಾಟ್ಸ್‌ಮನ್ ಸರ್ಫರಾಜ್ ಖಾನ್ ಎರಡು ತಿಂಗಳಲ್ಲಿ 17 ಕೆಜಿ ತೂಕ ಕಳೆದುಕೊಳ್ಳುವ ಮೂಲಕ ಎಲ್ಲರನ್ನೂ ಬೆರಗುಗೊಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ತಂಡದಲ್ಲಿ ಸ್ಥಾನ ಪಡೆಯದ ಸರ್ಫರಾಜ್ ಫಿಟ್‌ನೆಸ್ ಬಗ್ಗೆ ಈ ಹಿಂದೆ ಸಾಕಷ್ಟು ಟೀಕೆಗಳನ್ನು ಎದುರಿಸಿದ್ದರು ಮತ್ತು ಸ್ಥಿರ ಪ್ರದರ್ಶನದ ಹೊರತಾಗಿಯೂ ಅವರನ್ನು ಕಡೆಗಣಿಸುವ ಆಯ್ಕೆದಾರರ ನಿರ್ಧಾರದ ಹಿಂದಿನ ಕಾರಣಗಳಲ್ಲಿ ಇದು ಒಂದು ಎನ್ನಲಾಗಿತ್ತು. ಕ್ರಿಕೆಟಿಗ ತಮ್ಮ ದೈಹಿಕ ರೂಪಾಂತರದ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲೆಂಡ್‌ನ ಮಾಜಿ ಬ್ಯಾಟ್ಸ್‌ಮನ್ ಕೆವಿನ್ ಪೀಟರ್ಸನ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಪೃಥ್ವಿ ಶಾ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ.
'ಅತ್ಯುತ್ತಮ ಪ್ರಯತ್ನ, ಯಂಗ್ ಮ್ಯಾನ್! ಅಪಾರ ಅಭಿನಂದನೆಗಳು ಮತ್ತು ಇದು ಮೈದಾನದಲ್ಲಿ ಉತ್ತಮ ಮತ್ತು ಸ್ಥಿರ ಪ್ರದರ್ಶನಗಳಿಗೆ ಕಾರಣವಾಗುತ್ತದೆ ಎಂದು ನನಗೆ ಖಚಿತವಾಗಿದೆ. ನಿಮ್ಮ ಆದ್ಯತೆಗಳನ್ನು ಮರುಸಂಘಟಿಸಲು ನೀವು ಕಳೆದ ಸಮಯ ನನಗೆ ತುಂಬಾ ಇಷ್ಟವಾಯಿತು! LFG! ದಯವಿಟ್ಟು ಯಾರಾದರೂ ಪೃಥ್ವಿಗೆ ಇದನ್ನು ತೋರಿಸಬಹುದೇ? ಇದನ್ನು ಮಾಡಬಹುದು! ಬಲವಾದ ದೇಹ, ಬಲವಾದ ಮನಸ್ಸು!' ಎಂದು ಪೀಟರ್ಸನ್ ಪೋಸ್ಟ್ ಮಾಡಿದ್ದಾರೆ.
ಈಮಧ್ಯೆ, ಗಾಯದಿಂದಾಗಿ ನಿತೀಶ್ ಕುಮಾರ್ ರೆಡ್ಡಿ ಇಂಗ್ಲೆಂಡ್ ಟೆಸ್ಟ್ ಸರಣಿಯಿಂದ ಹೊರಗುಳಿದಿದ್ದಾರೆ ಮತ್ತು ಅರ್ಶದೀಪ್ ಸಿಂಗ್ ನಾಲ್ಕನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಇದರಿಂದಾಗಿ ಭಾರತವು ಅನೇಕ ಗಾಯದ ಸಮಸ್ಯೆಗಳಿಂದ ಬಳಲುತ್ತಿದೆ.
'ಎಡ ಮೊಣಕಾಲಿನ ಗಾಯದಿಂದಾಗಿ ನಿತೀಶ್ ಕುಮಾರ್ ರೆಡ್ಡಿ ಉಳಿದ ಎರಡು ಟೆಸ್ಟ್ ಪಂದ್ಯಗಳಿಂದ ಹೊರಗುಳಿದಿದ್ದಾರೆ. ನಿತೀಶ್ ಮನೆಗೆ ಮರಳಲಿದ್ದಾರೆ ಮತ್ತು ತಂಡವು ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತದೆ. ಬಿಸಿಸಿಐ ವೈದ್ಯಕೀಯ ತಂಡವು ಅವರ ಪ್ರಗತಿಯನ್ನು ಗಮನಿಸುತ್ತಿದೆ' ಎಂದು ಬಿಸಿಸಿಐ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಕಳೆದ ವಾರ ಬೆಕೆನ್‌ಹ್ಯಾಮ್‌ನಲ್ಲಿ ನಡೆದ ಅಭ್ಯಾಸದ ಅವಧಿಯಲ್ಲಿ ನೆಟ್ಸ್‌ನಲ್ಲಿ ಬೌಲಿಂಗ್ ಮಾಡುವಾಗ ಅರ್ಶ್‌ದೀಪ್ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದು, ಈ ಸರಣಿಯಲ್ಲಿ ಇನ್ನೂ ಆಡಿಲ್ಲ.
ಹರಿಯಾಣದ ಸೀಮರ್ ಅನ್ಶುಲ್ ಕಾಂಬೋಜ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಅವರು ಈಗಾಗಲೇ ಮ್ಯಾಂಚೆಸ್ಟರ್‌ನಲ್ಲಿರುವ ತಂಡದೊಂದಿಗೆ ಸಂಪರ್ಕದಲ್ಲಿದ್ದಾರೆ.