ವಿಶ್ವ ಚಾಂಪಿಯನ್‌ಶಿಪ್ ಆಫ್ ಲೆಜೆಂಡ್ಸ್ (WCL) ಪ್ರಶಸ್ತಿಯನ್ನು ಉಳಿಸಿಕೊಳ್ಳುವ ಭಾರತ ಚಾಂಪಿಯನ್ಸ್‌ನ ಪ್ರಯಾಣವು ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಸೋಲಿನ ಮೂಲಕ ಆರಂಭವಾಯಿತು. ಉಭಯ ರಾಷ್ಟ್ರಗಳ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ಪಾಕಿಸ್ತಾನ ಚಾಂಪಿಯನ್ಸ್ ವಿರುದ್ಧ ಆಡಲು ನಿರಾಕರಿಸಿದ ನಂತರ, ಯುವರಾಜ್ ಸಿಂಗ್ ಮತ್ತು ತಂಡವು ನಾರ್ಥಾಂಪ್ಟನ್‌ನಲ್ಲಿ ಪ್ರೋಟಿಯಸ್ ವಿರುದ್ಧ ತಮ್ಮ ಅಭಿಯಾನವನ್ನು ಪ್ರಾರಂಭಿಸಿತು ಮತ್ತು 88 ರನ್ ಅಂತರದ ಸೋಲು ಕಂಡಿತು.
ನಾಯಕ ಎಬಿ ಡಿವಿಲಿಯರ್ಸ್ 30 ಎಸೆತಗಳಲ್ಲಿ 63* ರನ್ ಗಳಿಸಿದರು. ಈ ಮೂಲಕ ಮಿಸ್ಟರ್ 360 ತಂಡಕ್ಕೆ ನೆರವಾದರು. ದಕ್ಷಿಣ ಆಫ್ರಿಕಾ 20 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 208 ರನ್ ಕಲೆಹಾಕಿತ್ತು.
209 ರನ್ ಗುರಿಯನ್ನು ಬೆನ್ನತ್ತಿದ ಭಾರತ ಚಾಂಪಿಯನ್ಸ್ ತಂಡವು ಆರಂಭದಲ್ಲೇ ಆಘಾತ ಕಂಡಿತು. ಫೀಲ್ಡಿಂಗ್ ಮಾಡುವಾಗ ಗಾಯಗೊಂಡಿದ್ದರಿಂದ ನಾಯಕ ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡಲಿಲ್ಲ. ಶಿಖರ್ ಧವನ್, ಸುರೇಶ್ ರೈನಾ, ಅಂಬಟಿ ರಾಯುಡು ಮತ್ತು ಯೂಸುಫ್ ಪಠಾಣ್ ಅವರಂತಹ ಸ್ಟಾರ್ ಆಟಗಾರರನ್ನು ಒಳಗೊಂಡ ಭಾರತದ ಬ್ಯಾಟಿಂಗ್ ಕ್ರಮಾಂಕವು ಕುಸಿತ ಕಂಡಿತು. ಮಳೆಯಿಂದ ಆಟ ಸ್ಥಗಿತಗೊಳ್ಳುವ ಮೊದಲು 9 ವಿಕೆಟ್ ನಷ್ಟಕ್ಕೆ ಕೇವಲ 111 ರನ್ ಗಳಿಸಿತು. ಇದರ ಪರಿಣಾಮವಾಗಿ, ದಕ್ಷಿಣ ಆಫ್ರಿಕಾ ಈಗ ಟೂರ್ನಮೆಂಟ್‌ನಲ್ಲಿ ಸತತ ಎರಡು ಗೆಲುವುಗಳನ್ನು ಹೊಂದಿದೆ.
ಬ್ಯಾಟಿಂಗ್‌ನಲ್ಲಿನ ವೀರೋಚಿತ ಪ್ರದರ್ಶನದ ಜೊತೆಗೆ ಡಿವಿಲಿಯರ್ಸ್ ಮೈದಾನದಲ್ಲಿಯೂ ತಮ್ಮ ಛಾಪು ಮೂಡಿಸಿದರು. ಭಾರತದ ಚೇಸಿಂಗ್‌ನ 8ನೇ ಓವರ್‌ನಲ್ಲಿ, ಸ್ಪಿನ್ನರ್ ಇಮ್ರಾನ್ ತಾಹಿರ್ ಅವರ ಎಸೆತದಲ್ಲಿ ಯೂಸುಫ್ ಪಠಾಣ್ ಲಾಂಗ್-ಆನ್ ಕಡೆಗೆ ದೊಡ್ಡ ಹೊಡೆತವನ್ನು ಹೊಡೆದರು. ಆಗ ಡಿವಿಲಿಯರ್ಸ್ ಬೌಂಡರಿ ಗೆರೆಯ ಕಡೆಗೆ ಹೋಗಿ ಚೆಂಡನ್ನು ಹಿಡಿದು ಸರೆಲ್ ಎರ್ವೀ ಕಡೆಗೆ ಎಸೆದರು. ನಂತರ ಅವರು ಅದ್ಭುತ ಡೈವ್ ಮಾಡಿ ಅತ್ಯುತ್ತಮ ಕ್ಯಾಚ್ ಪಡೆದರು.
ನಿವೃತ್ತಿಯ ಹೊರತಾಗಿಯೂ, ತಾನು ಇನ್ನೂ ಆಡಲು ಫಿಟ್ ಆಗಿದ್ದೇನೆ ಎಂದು ಡಿವಿಲಿಯರ್ಸ್ ತೋರಿಸಿದ್ದು, ಎಲ್ಲ ಅಭಿಮಾನಿಗಳು ಮತ್ತು ಕ್ರಿಕೆಟ್ ಪಂಡಿತರನ್ನು ದಿಗ್ಭ್ರಮೆಗೊಳಿಸಿದೆ.