ಭಾರತದ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಅವರ ದೀರ್ಘಕಾಲದ ಗಾಯದಿಂದಾಗಿ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳುವುದು ಮತ್ತಷ್ಟು ವಿಳಂಬವಾಗಿದೆ. ಕ್ರಿಕ್‌ಬಜ್ ವರದಿ ಪ್ರಕಾರ, ಅವರು ಆಗಸ್ಟ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಭಾರತ A ಸರಣಿಯಿಂದ ಹೊರಗುಳಿಯಲಿದ್ದಾರೆ. ಅಲ್ಲದೆ, ಲೆಗ್ ಸ್ಪಿನ್ನರ್ ಪ್ರಿಯಾ ಮಿಶ್ರಾ ಅವರನ್ನು ಕೂಡ ಸರಣಿಯಿಂದ ಹೊರಗಿಡಲಾಗಿದೆ.
'ಇಬ್ಬರೂ ಆಟಗಾರರು ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬಿಸಿಸಿಐ ವೈದ್ಯಕೀಯ ತಂಡದ ಆರೈಕೆಯಲ್ಲಿದ್ದಾರೆ ಮತ್ತು ಸದ್ಯ ಅವರು ಆಟಕ್ಕೆ ಮರಳುವ ಶಿಷ್ಟಾಚಾರಗಳನ್ನು ಅನುಸರಿಸುತ್ತಿದ್ದಾರೆ' ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಈಮಧ್ಯೆ, ಭಾರತದ ಕೀಪರ್-ಬ್ಯಾಟರ್ ಯಸ್ತಿಕಾ ಭಾಟಿಯಾ ಅವರನ್ನು ಸದ್ಯಕ್ಕೆ ಏಕದಿನ ತಂಡಕ್ಕೆ ಸೇರಿಸಿಕೊಳ್ಳಲಾಗಿದ್ದು, ಧಾರಾ ಗುಜ್ಜರ್ ಮತ್ತು ಪ್ರೇಮಾ ರಾವತ್ ಅವರನ್ನು ಸ್ಪಿನ್ ಬದಲಿ ಆಟಗಾರರನ್ನಾಗಿ ಆಯ್ಕೆ ಮಾಡಲಾಗಿದೆ.
ಭಾಟಿಯಾ ಏಕದಿನ ವಿಶ್ವಕಪ್‌ಗೆ ಆಯ್ಕೆಯಾಗುವ ಸಾಧ್ಯತೆ ಇದ್ದು, ಭಾರತದಲ್ಲಿ ನಡೆಯಲಿರುವ ಟೂರ್ನಿಗೆ ಆಸ್ಟ್ರೇಲಿಯಾ ಎ ವಿರುದ್ಧದ ಅನುಭವ ಅವರಿಗೆ ಸಹಾಯಕವಾಗಬಹುದು. ಈ ಸರಣಿಗೆ ಸಂಬಂಧಿಸಿದಂತೆ, ಭಾರತ ಎ ಮತ್ತು ಆಸ್ಟ್ರೇಲಿಯಾ ಎ ತಂಡಗಳು ಆಗಸ್ಟ್ 7 ರಿಂದ ಆಗಸ್ಟ್ 24 ರವರೆಗೆ ಮೂರು ಟಿ20ಐ, ಮೂರು ಏಕದಿನ ಮತ್ತು ಒಂದು ನಾಲ್ಕು ದಿನಗಳ ಪಂದ್ಯವನ್ನು ಆಡಲಿವೆ.
IND A ತಂಡ
ಭಾರತ ಎ: ರಾಧಾ ಯಾದವ್ (ನಾಯಕಿ), ಮಿನ್ನು ಮಣಿ (ಉಪನಾಯಕಿ), ಶಫಾಲಿ ವರ್ಮಾ, ಡಿ. ವೃಂದಾ, ಸಜನಾ ಸಜೀವನ್, ಉಮಾ ಚೆಟ್ರಿ (ವಿಕೆಟ್ ಕೀಪರ್), ರಾಘ್ವಿ ಬಿಸ್ಟ್, ಪ್ರೇಮಾ ರಾವತ್, ನಂದಿನಿ ಕಶ್ಯಪ್ (ವಿಕೆಟ್ ಕೀಪರ್), ತನುಜಾ ಕನ್ವರ್, ಜೋಶಿತಾ ವಿಜೆ, ಶಬ್ನಮ್ ಶಕೀಲ್, ಸೈಮಾ ಠಾಕೂರ್, ತಿತಾಸ್ ಸಾಧು, ಧಾರಾ ಗುಜ್ಜಾರ್.