ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿದೆ. ಭಾರತದ ಮೊದಲ ಇನ್ನಿಂಗ್ಸ್ 358 ರನ್‌ಗಳಿಗೆ ಸರ್ವಪತನ ಕಂಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 669 ರನ್ ಗಳಿಸಿ 311 ರನ್‌ಗಳ ಮುನ್ನಡೆ ಸಾಧಿಸಿತು. ಜೋ ರೂಟ್ ಮತ್ತು ಬೆನ್ ಸ್ಟೋಕ್ಸ್ ಶತಕ ಇನ್ನಿಂಗ್ಸ್ ಆಡಿದರು.
ನಂತರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಮೊದಲ ಓವರ್ ನಲ್ಲೇ ಎರಡು ಆಘಾತ ಎದುರಾಯಿತು. ನಾಲ್ಕನೇ ಎಸೆತದಲ್ಲಿ ಯಶಸ್ವಿ ಜೈಸ್ವಾಲ್ ಔಟಾದರೆ ಐದನೇ ಎಸೆತದಲ್ಲಿ ಸಾಯಿ ಸುದರ್ಶನ್ ಔಟಾದರು. ಈ ವೇಳೆ ತಂಡಕ್ಕೆ ಆಸರೆಯಾಗಿದ್ದು ಕೆಎಲ್ ರಾಹುಲ್ ಹಾಗೂ ಶುಭಮನ್ ಗಿಲ್. ಇಬ್ಬರು ಅರ್ಧಶತಕ ಪೂರೈಸಿದ್ದಾರೆ.
47 ಓವರ್ ಮುಕ್ತಾಯದ ವೇಳೆ ಭಾರತ 2 ವಿಕೆಟ್ ನಷ್ಟಕ್ಕೆ 133 ರನ್ ಪೇರಿಸಿದೆ. ಇನ್ನು ಶುಭ್ಮನ್ ಗಿಲ್ 124 ಎಸೆತಗಳಲ್ಲಿ 9 ಬೌಂಡರಿ ಸೇರಿದಂತೆ ಅಜೇಯ 64 ರನ್ ಬಾರಿಸಿದ್ದಾರೆ. ಇನ್ನು ಕೆಎಲ್ ರಾಹುಲ್ 157 ಎಸೆತಗಳಲ್ಲಿ 5 ಬೌಂಡರಿ ಸೇರಿದಂತೆ 61 ರನ್ ಬಾರಿಸಿ ಆಡುತ್ತಿದ್ದಾರೆ. ಈ ಹಂತದಲ್ಲಿ ಭಾರತ 178 ರನ್ ಗಳ ಹಿನ್ನಡೆಯಲ್ಲಿದೆ. ಸದ್ಯಕ್ಕೆ ಭಾರತ ಸ್ವಲ್ಪ ಮಟ್ಟಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದೆ. ಒಂದಾದ ಮೇಲೆ ಒಂದರಂತೆ ವಿಕೆಟ್ ಗಳು ಬಿದ್ದಿದ್ದರೆ ಈ ಪಂದ್ಯವನ್ನು ಭಾರತ ಕಳೆದುಕೊಳ್ಳಬೇಕಿತ್ತು.