ಬೆಂಗಳೂರು: 18 ವರ್ಷಗಳ ಬಳಿಕ IPL ಟ್ರೋಫಿ ಗೆದ್ದ RCB ತಂಡದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತಕ್ಕೆ ಸಂಭಿಸಿದಂತೆ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಸೈಯದ್ ಕಿರ್ಮಾನಿ ಆಘಾತ ವ್ಯಕ್ತಪಡಿಸಿದ್ದಾರೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದ ಆರ್ ಸಿಬಿ ಸಂಭ್ರಮಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಧಾವಿಸಿದ್ದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ವೇಳೆ 11 ಮಂದಿ ಸಾವನ್ನಪ್ಪಿ 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಈ ಘಟನೆ ಇಡೀ ಕ್ರಿಕೆಟ್ ಜಗತ್ತನ್ನು ಆಘಾತಕ್ಕೀಡು ಮಾಡಿದ್ದು, ಇದೇ ವಿಚಾರವಾಗಿ ಇದೀಗ ಮಾಜಿ ಕ್ರಿಕೆಟಿಗ ಸೈಯದ್ ಕಿರ್ಮಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಸೈಯದ್ ಕಿರ್ಮಾನಿ, 'ಚಾಂಪಿಯನ್‌ಗಳಿಗೆ ಇದೊಂದು ‘ಡೆಡ್ಲಿ ವೆಲ್‌ಕಮ್’.. ಇಂತಹದ್ದೆಲ್ಲ ಆಗುತ್ತೆ ಎನ್ನುವುದನ್ನು ನೋಡಿದರೆ ನಮ್ಮ ಕಾಲದಲ್ಲಿ ಆಗ ಯಾವುದೇ ಟಿ.ವಿ ಮಾಧ್ಯಮಗಳ ಚೀತ್ಕಾರಗಳಿರಲಿಲ್ಲ, ಸಮೂಹ ಸನ್ನಿಗಳಿರಲಿಲ್ಲ. ಅದಕ್ಕೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಒಂದು ಕಪ್ ಪಡೆಯಲು 18 ವರ್ಷ ಕಾದರು. ಆದರೆ, ಹರ್ಷೋತ್ಸವ ಮಾಡಲು ಇನ್ನೊಂದೆರಡು ದಿನ ಕಾಯಬಹುದಿತ್ತು. ವ್ಯವಸ್ಥಿತ ಕಾರ್ಯಕ್ರಮ ಆಯೋಜಿಸಿ ಆರ್‌ಸಿಬಿ ಹಿರೋಗಳನ್ನು ಸ್ವಾಗತಿಸಬಹುದಿತ್ತು ಎಂದು ಹೇಳಿದ್ದಾರೆ.
ಮಾಧ್ಯಮಗಳ ವಿರುದ್ಧ ಪರೋಕ್ಷ ಅಸಮಾಧಾನ
ಇದೇ ವೇಳೆ ಮಾಧ್ಯಮಗಳ ವಿರುದ್ಧ ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿರುವ ಕಿರ್ಮಾನಿ, 'ಇಂತಹದ್ದೆಲ್ಲ ಆಗುತ್ತೆ ಎನ್ನುವುದನ್ನು ನೋಡಿದರೆ ನಮ್ಮ ಕಾಲದಲ್ಲಿ ಆಗ ಯಾವುದೇ ಟಿ.ವಿ ಮಾಧ್ಯಮಗಳ ಚೀತ್ಕಾರಗಳಿರಲಿಲ್ಲ, ಸಮೂಹ ಸನ್ನಿಗಳಿರಲಿಲ್ಲ. ಅದಕ್ಕೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಆರ್‌ಸಿಬಿ ಅಭಿಮಾನಿಗಳ ಅಭಿಮಾನ ಹುಚ್ಚುತನಕ್ಕೆ ತಿರುಗಿರುವುದು ಸ್ಪಷ್ಟವಾಗಿದೆ ಎಂದರು.
RCB ಕಪ್ ಗೆದ್ದಾಗ ಬಂದವರು, ಕರ್ನಾಟಕ Ranji ಗೆದ್ದಾಗ ಬರ್ತಾರಾ?
ನಮ್ಮ ಕಾಲದಲ್ಲಿ ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳನ್ನು ನೋಡಲು ಸಾಧ್ಯವಿರಲಿಲ್ಲ. ಅದೂ ಸಹ ಇಂದಿನ ಐಪಿಎಲ್ ಅಭಿಮಾನಿಗಳ ಹುಚ್ಚು ವಿಪರೀತ ಎಂದ ಕಿರ್ಮಾನಿ, ಆರ್‌ಸಿಬಿ ಕಪ್ ಗೆದ್ದಾಗ ಬಂದಿರುವ ಅಭಿಮಾನಿಗಳು ಕರ್ನಾಟಕ ತಂಡ ರಣಜಿ ಟ್ರೋಫಿ ಗೆದ್ದಾಗ ಬರುತ್ತಾರೆಯೇ? ಎಂದು ರಣಜಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುತ್ತಿದ್ದ ಸೈಯದ್ ಕಿರ್ಮಾನಿ ಪ್ರಶ್ನಿಸಿದ್ದಾರೆ.
ಅಂದಹಾಗೆ ಸೈಯದ್ ಕಿರ್ಮಾನಿ ಅವರು 1983ರಲ್ಲಿ ವಿಶ್ವಕಪ್ ಗೆದ್ದಾಗ ಕಪಿಲ್ ದೇವ್ ನೇತೃತ್ವದ ಭಾರತ ತಂಡದ ಸದಸ್ಯರಾಗಿದ್ದರು.