ನವದೆಹಲಿ: ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಭರ್ಜರಿ ಶತಕ ಸಿಡಿಸಿದ ರಿಷಬ್ ಪಂತ್ (Rishabh Pant) ಕುರಿತು ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೊಯೆಂಕಾ (Sanjiv Goenka) ಟ್ವೀಟ್ ಮಾಡಿದ್ದಾರೆ.
ಇಂಗ್ಲೆಂಡ್ ನ ಲೀಡ್ಸ್ ನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ಭಾರತ ತನ್ನ ಭರ್ಜರಿ ಬ್ಯಾಟಿಂಗ್ ಮುಂದವರೆಸಿದ್ದು, 4 ವಿಕೆಟ್ ನಷ್ಟಕ್ಕೆ 301 ರನ್ ಕಲೆಹಾಕಿದೆ. ಅಂತೆಯೇ ಒಟ್ಟಾರೆ 307 ರನ್ ಮುನ್ನಡೆ ಸಾಧಿಸಿದೆ. ಈ ಪೈಕಿ ಭಾರತದ ಪರ ಕೆಎಲ್ ರಾಹುಲ್ ಮತ್ತು ರಿಷಬ್ ಪಂತ್ ಶತಕ ಸಿಡಿಸಿ ಭಾರತ ತಂಡದ ಬೃಹತ್ ಗುರಿಗೆ ನೆರವಾಗಿದ್ದಾರೆ.
2ನೇ ಇನ್ನಿಂಗ್ಸ್ ನಲ್ಲಿ ಭಾರತದ ಪರ 5ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ರಿಷಬ್ ಪಂತ್ 140 ಎಸೆತಗಳಲ್ಲಿ 3 ಸಿಕ್ಸರ್ ಮತ್ತು 15 ಬೌಂಡರಿಗಳ ನೆರವಿನಿಂದ 118 ರನ್ ಕಲೆಹಾಕಿದರು. ಆ ಮೂಲಕ 2ನೇ ಇನ್ನಿಂಗ್ಸ್ ನಲ್ಲೂ ಶತಕ ಸಿಡಿಸುವ ಮೂಲಕ ಟೆಸ್ಟ್ ನಲ್ಲಿ 8ನೇ ಶತಕ ಸಿಡಿಸಿದರು.
LSG ಮಾಲೀಕ Sanjiv Goenka ಹೇಳಿದ್ದೇನು?
ಅತ್ತ ಪಂತ್ ಶತಕ ಸಿಡಿಸಿ ಹಲವು ದಾಖಲೆಗಳನ್ನು ಛಿದ್ರ ಮಾಡುತ್ತಲೇ ಇತ್ತ ಪಂತ್ ಆಟದ ಕುರಿತು ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಎಕ್ಸ್ ನಲ್ಲಿ ಟ್ವೀಟ್ ಮಾಡಿರುವ ಸಂಜೀವ್ ಗೊಯೆಂಕಾ, 'ಎರಡು ಉತ್ತಮ ಆಟ! ಸತತ ಸತತ ಶತಕಗಳು. ಆಕ್ರಮಣಕಾರಿ, ದಿಟ್ಟ, ಅದ್ಭುತ. ಟೆಸ್ಟ್ ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ ಶತಕ ಗಳಿಸಿದ ಇತಿಹಾಸದಲ್ಲಿ ಎರಡನೇ ವಿಕೆಟ್ ಕೀಪರ್' ಎಂದು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ. ಅಲ್ಲದೆ ಇದೇ ಪಂದ್ಯದ 2ನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿದ ಕೆಎಲ್ ರಾಹುಲ್ ಗೂ ಅಭಿನಂದನೆ ಸಲ್ಲಿಸಿದ್ದಾರೆ.
ಐಪಿಎಲ್ ನಲ್ಲಿ ವಿಫಲರಾಗಿದ್ದ ಪಂತ್
ಇನ್ನು ಇತ್ತೀಚೆಗೆ ಮುಕ್ತಾಯವಾದ ಐಪಿಎಲ್ 2025ಟೂರ್ನಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ರಿಷಬ್ ಪಂತ್ ಸತತ ವೈಫಲ್ಯ ಅನುಭವಸಿದ್ದರು. ಪಂತ್ ಆಟ ಸಾಕಷ್ಟು ಬಾರಿ ತಂಡ ಮಾಲೀಕ ಸಂಜೀವ್ ಗೋಯೆಂಕಾ ಕೆಂಗಣ್ಣಿಗೆ ಗುರಿಯಾಗಿತ್ತು. ಆದರೆ ಇದೀಗ ಇದೇ ಪಂತ್ ಭಾರತ ತಂಡದ ಪರ ಭರ್ಜರಿ ಬ್ಯಾಟಿಂಗ್ ನಡೆಸುತ್ತಿರುವುದು ಸಂಜೀವ್ ಗೋಯೆಂಕಾ ಸಂತಸಕ್ಕೆ ಕಾರಣವಾಗಿದೆ.