ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಇಂದಿನ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಭಾರತ ತಂಡ ಭರ್ಜರಿಯಾಗಿ ಮಣಿಸಿದ್ದು, ಸೆಮಿ ಫೈನಲ್ ನಲ್ಲಿ ಪ್ರಬಲ ಆಸ್ಟ್ಕೇಲಿಯಾ ವಿರುದ್ಧ ಸೆಣಸಲಿದೆ.
ದುಬೈನ ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 249ರನ್ ಕಲೆಹಾಕಿ ನ್ಯೂಜಿಲೆಂಡ್ ಗೆ ಗೆಲ್ಲಲು 250ರನ್ ಗುರಿ ನೀಡಿತ್ತು. ಈ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ನ್ಯೂಜಿಲೆಂಡ್ ದುಬೈನ ಸ್ಲೋ ಟ್ರಾಕ್ ಪಿಚ್ ನಲ್ಲಿ ರನ್ ಗಳಿಸಲು ಪರದಾಡಿತು. 45.3 ಓವರ್ ನಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 44 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು.
ಕೇನ್ ವಿಲಿಯಮ್ಸನ್ ಏಕಾಂಗಿ ಹೋರಾಟ
ಇನ್ನು ಈ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಕೇನ್ ವಿಲಿಯಮ್ಸನ್ ಭಾರತೀಯ ಬೌಲರ್ ಗಳನ್ನು ಸಮರ್ಥವಾಗಿ ಎದುರಿಸಿದರು. 120 ಎಸೆತಗಳನ್ನು ಎದುರಿಸಿದ ವಿಲಿಯಮ್ಸನ್ 7 ಬೌಂಡರಿಗಳ ನೆರವಿನಿಂದ 81 ರನ್ ಗಳಿಸಿದರು. ಆದರೆ ಅವರಿಗೆ ಇತರೆ ಆಟಗಾರರಿಂದ ಸೂಕ್ತ ಸಾಥ್ ದೊರೆಯಲಿಲ್ಲ. ಅಂತಿಮವಾಗಿ ನ್ಯೂಜಿಲೆಂಡ್ ತಂಡ 45.3 ಓವರ್ ನಲ್ಲಿ 205 ರನ್ ಗಳಿಸಿ ಆಲೌಟ್ ಆಯಿತು. ಆ ಮೂಲಕ 44 ರನ್ ಗಳ ಅಂತರದಲ್ಲಿ ಪಂದ್ಯ ಸೋತಿತು.
ವರುಣ್ ಚಕ್ರವರ್ತಿ ಭರ್ಜರಿ ಬೌಲಿಂಗ್
ಇನ್ನು ಈ ಪಂದ್ಯದಲ್ಲಿ ಭಾರತದ ಸ್ಪಿನ್ನರ್ ವರುಣ್ ಚಕ್ರವರ್ತಿ ಗೆಲುವಿನ ರೂವಾರಿಯಾದರು. ಆರಂಭದಿಂದಲೂ ತಮ್ಮ ಮಿಸ್ಟ್ರಿ ಸ್ಪಿನ್ ಬೌಲಿಂಗ್ ಮೂಲಕ ಕಿವೀಸ್ ಆಟಗಾರರನ್ನು ಕಾಡಿದ ವರುಣ್ ಚಕ್ರವರ್ತಿ ನಿಯಮಿತವಾಗಿ ವಿಕೆಟ್ ಪಡೆಯುತ್ತಾ ಸಾಗಿದರು. ತಮ್ಮ ಪಾಲಿನ 10 ಓವರ್ ಪೂರ್ಣಗೊಳಿಸಿದ ವರುಣ್ ಚಕ್ರವರ್ತಿ 4.20 ಸರಾಸರಿಯಲ್ಲಿ 42 ರನ್ ನೀಡಿ 5 ವಿಕೆಟ್ ಪಡೆದರು.
ಸೆಮೀಸ್ ನಲ್ಲಿ ಆಸಿಸ್ ಜೊತೆ ಸೆಣಸು
ಇನ್ನು ಈ ಪಂದ್ಯದ ಗೆಲುವಿನೊಂದಿಗೆ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನಕ್ಕೇರಿದ್ದು, ಬಿ ಗ್ರೂಪ್ ನಲ್ಲಿ 2ನೇ ಸ್ಥಾನದಲ್ಲಿರುವ ಆಸ್ಟ್ರೇಲಿಯಾದೊಂದಿಗೆ ಪ್ರಶಸ್ತಿಗೆ ಸುತ್ತಿಗೆ ಹಣಾಹಣಿ ನಡೆಸಲಿದೆ. ಭಾರತ ಒಟ್ಟು 3 ಪಂದ್ಯಗಳ ಪೈಕಿ ಮೂರರಲ್ಲೂ ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಟೇಬಲ್ ಟಾಪರ್ ಆಗಿ ಲೀಗ್ ಹಂತ ಪೂರ್ಣಗೊಳಿಸಿದೆ.
ಮಾರ್ಚ್ 4ರಂದು ಮೊದಲ ಸೆಮಿಫೈನಲ್ ಪಂದ್ಯ ಇದೇ ದುಬೈ ಮೈದಾನದಲ್ಲಿ ನಡೆಯಲಿದ್ದು, ಅಂದು ಭಾರತ ಮತ್ತು ಆಸ್ಟ್ಕೇಲಿಯಾ ಸೆಣಸಾಡಲಿವೆ. ಮಾರ್ಚ್ 5ರಂದು ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಸೆಣಸಲಿವೆ.