ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಲಾಹೋರ್ ನ ಐತಿಹಾಸಿಕ ಗಡಾಫಿ ಕ್ರೀಡಾಂಗಣವನ್ನು ನವೀಕರಣ ಮಾಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಮತ್ತೆ ಜಾಗತಿಕ ಮಟ್ಟದಲ್ಲಿ ಮುಜುಗರವಾಗಿದ್ದು, ನವೀಕರಣವಾದ 2 ವಾರದಲ್ಲಿ ಕ್ರೀಡಾಂಗಣದಲ್ಲಿ ನೀರು ಸೋರಿಕೆಯಾಗುತ್ತಿದೆ.
ಹೌದು.. ಸುಮಾರು 18 ಬಿಲಿಯನ್ ಹಣ ಖರ್ಚು ಮಾಡಿ ನವೀಕರಣ ಮಾಡಲಾಗಿದ್ದ ಲಾಹೋರ್ ನ ಗಡಾಫಿ ಕ್ರೀಡಾಂಗಣದ ವಿಚಾರವಾಗಿ 'Pride of Pakistan' ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪಾಕಿಸ್ತಾನ ಕ್ರಿಕೆಟ್ ಅಭಿಮಾನಿಗಳು ಇದೀಗ ಹ್ಯಾಪುಮೊರೆ ಹಾಕಿಕೊಂಡಿದ್ದು, ಒಂದೇ ಮಳೆಗೆ ಗಡಾಫಿ ಕ್ರೀಡಾಂಗಣ ನೀರಿನಲ್ಲಿ ಮುಳುಗಿದ್ದು ಮಾತ್ರವಲ್ಲದೇ ಇಡೀ ಕ್ರೀಡಾಂಗಣದಲ್ಲಿ ನೀರು ಸೋರಿಕೆಯಾಗುತ್ತಿದೆ.
ಈ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಆ ಮೂಲಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮತ್ತೆ ಜಾಗತಿಕ ವೇದಿಕೆಯಲ್ಲಿ ಬೆತ್ತಲಾಗಿದೆ. ಅಷ್ಟು ಖರ್ಚು ಮಾಡಿ ನವೀಕರಣ ಮಾಡಲಾಗಿದ್ದ ಕ್ರೀಡಾಂಗಣ ಇದೀಗ ಒಂದೇ ಮಳೆಗೆ ಸೋರಿಕೆಯಾಗುತ್ತಿದೆ.
"ಕೆಟ್ಟ ಜಾಹೀರಾತು": ಮದನ್ ಲಾಲ್ ಕಿಡಿ
ಇನ್ನು ಈ ಕುರಿತ ವಿಡಿಯೋಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಭಾರತದ ಮಾಜಿ ಕ್ರಿಕೆಟಿಗ ಕ್ರಿಕೆಟ್ ಬೆಳವಣಿಗೆ ವಿಚಾರವಾಗಿ ಇದು "ಕೆಟ್ಟ ಜಾಹೀರಾತು" ಎಂದು ಹೇಳಿದ್ದಾರೆ. ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಚಾಂಪಿಯನ್ಸ್ ಟ್ರೋಫಿ ಪಂದ್ಯದ ಸಮಯದಲ್ಲಿ ಪ್ರದರ್ಶನಗೊಂಡಿದ್ದ ಕಳಪೆ ಒಳಚರಂಡಿ ವ್ಯವಸ್ಥೆ ಬಗ್ಗೆಯೂ ಮದನ್ ಲಾಲ್ ಕಿಡಿಕಾರಿದ್ದು, ಪಾಕಿಸ್ತಾನ ಕಳಪೆ ನಿರ್ವಹಣೆ ಇದೀಗ ಜಗಜ್ಜಾಹಿರಾಗಿದೆ. ಇದು ಪಾಕಿಸ್ತಾನದಲ್ಲಿ ಕ್ರಿಕೆಟ್ ಬೆಳವಣಿಗೆಗೆ ಅಪಾಯ ಎಂದು ಅಭಿಪ್ರಾಯಪಟ್ಟಿದ್ದಾರೆ.
'ಇದು ಪಾಕಿಸ್ತಾನಕ್ಕೆ ಕೆಟ್ಟ ಜಾಹೀರಾತು. ಕ್ರೀಡಾಂಗಣವನ್ನು ನವೀಕರಿಸುವುದು ಸರಿ, ಆದರೆ ಒಳಚರಂಡಿ ವ್ಯವಸ್ಥೆ ಮತ್ತು ಸೂಪರ್ ಸೋಪರ್ ಮೊದಲ ಆದ್ಯತೆಯಾಗಿರಬೇಕು. ಇದು ಪಾಕಿಸ್ತಾನಕ್ಕೆ ಒಳ್ಳೆಯದಲ್ಲ. ನಿನ್ನೆಯ ಪಂದ್ಯ ಮತ್ತು ನೀರನ್ನು ಹೊರಹಾಕುವ ಅವರ ವಿಧಾನವನ್ನು ನಾನು ನೋಡಿದೆ. ಸಾಕಷ್ಟು ಟೀಕೆಗಳು ಬಂದವು' ಎಂದು ಮದನ್ ಲಾಲ್ ಅಭಿಪ್ರಾಯಪಟ್ಟಿದ್ದಾರೆ.
ಅಂದಹಾಗೆ ಗಡಾಫಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ ಮತ್ತು ಆಸ್ಟ್ರೇಲಿಯಾ ನಡುವಿನ ಗ್ರೂಪ್ ಬಿ ಮುಖಾಮುಖಿಯ ಸಮಯದಲ್ಲಿ, 12.5 ಓವರ್‌ಗಳ ನಂತರ ಮಳೆಯು ಮೈದಾನದ ಕಾರ್ಯಕ್ಕೆ ಅಡ್ಡಿಯಾಯಿತು. ಬಳಿಕ ಮಳೆ ನಿಂತಿತಾದರೂ ಮೈದಾನದಾದ್ಯಂತ ಸಾಕಷ್ಟು ನೀರು ತುಂಬಿದ್ದರಿಂದ ಅದನ್ನು ಹೊರ ಹಾಕುವುದೇ ಸವಾಲಾಗಿದ್ದು. ಮೈದಾನದಲ್ಲಿ ನೀರು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಸಿಬ್ಬಂದಿ ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದರು.
ಕ್ರೀಡಾಂಗಣದಲ್ಲೂ ನೀರು ಸೋರಿಕೆ
ಅತ್ತ ಮೈದಾನದಲ್ಲಿ ಮಾತ್ರವಲ್ಲ ಕ್ರೀಡಾಂಗಣದಲ್ಲೂ ನೀರು ಸೋರಿಕೆಯಾಗಿ ಅವ್ಯವಸ್ಥೆ ಉಂಟಾಗಿತ್ತು. ಪ್ರೇಕ್ಷಕರ ಗ್ಯಾಲರಿ ಮೇಲಿಂದ ನೀರು ಸೋರಿಕೆಯಾಗಿ ಪ್ರೇಕ್ಷಕರು ತೊಂದರೆ ಅನುಭವಿಸಿದರು. ಪ್ರೇಕ್ಷಕರ ಗ್ಯಾಲರಿ ಮೇಲೆ ಮಾತ್ರವಲ್ಲದೇ ಸಿಬ್ಬಂದಿಗಳಿದ್ದ ಸ್ಥಳದಲ್ಲೂ ನೀರು ಸೋರಿಕೆಯಾಗುತ್ತಿತ್ತು.