ಭಾನುವಾರ ದುಬೈನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಕೊನೆಯ ಲೀಗ್ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 44 ರನ್‌ಗಳ ಭರ್ಜರಿ ಗೆಲುವು ಸಾಧಿಸಿದ್ದು, ಎ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿದೆ. ಈ ಬಾರಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಮೊದಲ ಪಂದ್ಯ ಆಡಿದ ವರುಣ್ ಚಕ್ರವರ್ತಿ 5 ವಿಕೆಟ್ ಪಡೆಯುವ ಮೂಲಕ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಭಾರತ ಮುಂದಿನ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲಿದ್ದು, ನಾಕೌಟ್ ಘರ್ಷಣೆಗೂ ಮುನ್ನ ಫೀಲ್ಡಿಂಗ್ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕಾಗಿದೆ.
ಮಾರ್ಚ್ 4 ರಂದು ಮಂಗಳವಾರ ನಡೆಯುವ ಮೊದಲನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಆಸ್ಟ್ರೇಲಿಯಾವನ್ನು ಎದುರಿಸಲಿದೆ. ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲೇ ಈ ಪಂದ್ಯ ನಡೆಯಲಿದೆ. ಮಾರ್ಚ್ 5ರಂದು ಎರಡನೇ ಸೆಮಿಫೈನಲ್ ಪಂದ್ಯ ನಡೆಯಲಿದ್ದು, ದಕ್ಷಿಣ ಆಫ್ರಿಕಾ ನ್ಯೂಜಿಲೆಂಡ್ ವಿರುದ್ಧ ಸೆಣೆಸಲಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ವಿಕೆಟ್ ಕೀಪರ್ ಕೆಎಲ್ ರಾಹುಲ್ ಮಾಡಿದ ಎಡವಟ್ಟುಗಳು ಬ್ಯಾಟರ್ ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಅವರ ಕಣ್ಣು ಕೆಂಪಾಗಿಸಿದೆ.
ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಕೆಎಲ್ ರಾಹುಲ್ ತಂಡದ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದಾರೆ ಎಂದು ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟಪಡಿಸಿದ್ದರು. ವಿಕೆಟ್ ಕೀಪಿಂಗ್ ಮಾಡುತ್ತಿದ್ದ ರಾಹುಲ್ ಹಲವಾರು ಕ್ಯಾಚ್‌ಗಳನ್ನು ಕೈಚೆಲ್ಲಿದ್ದಾರೆ. ಈ ವೇಳೆ ಹಲವು ಬಾಲ್‌ಗಳು ಬೌಂಡರಿಯತ್ತ ಓಡಿವೆ. ಇದರಿಂದ ವಿರಾಟ್ ಮತ್ತು ರೋಹಿತ್ ಸಿಟ್ಟಾಗಿದ್ದಾರೆ.
'ಅಂತಿಮವಾಗಿ, ಆಟಗಾರರ ಬಗ್ಗೆ ಮಾತನಾಡುವುದು ತುಂಬಾ ಕಷ್ಟ. ಆದರೆ, ಅವರು ತಂಡದ ಭಾಗವಾಗಿದ್ದರೆ, ಸಮಯ ಬಂದಾಗ ಅವರಿಗೆ ಅವಕಾಶ ಸಿಗಬಹುದು ಎಂದು ನಾನು ಹೇಳಬಲ್ಲೆ. ಆದರೆ, ಈ ಸಮಯದಲ್ಲಿ, ನಿಸ್ಸಂಶಯವಾಗಿ ಕೆಎಲ್ ರಾಹುಲ್ ನಂಬರ್ 1 ವಿಕೆಟ್ ಕೀಪರ್ ಮತ್ತು ಅವರು ತಂಡದಲ್ಲಿ ಆಡುತ್ತಾರೆ' ಎಂದು ಗಂಭೀರ್ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.
ಈಮಧ್ಯೆ, ಸದ್ಯ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ಗುಂಪು ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆದ್ದ ನಂತರ ಟೀಂ ಇಂಡಿಯಾವನ್ನು ಶ್ಲಾಘಿಸಿದ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಭಾರತ ಯಾರನ್ನಾದರೂ ಸೋಲಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಹೇಳಿದರು.