ಲಾಹೋರ್: 29 ವರ್ಷಗಳ ಬಳಿಕ ತನ್ನ ನೆಲದಲ್ಲಿ ಐಸಿಸಿ ಟೂರ್ನಿ ಆಯೋಜಿಸುತ್ತಿದ್ದೇವೆ ಎಂದು ಬೀಗುತ್ತಿದ್ದ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಆರಂಭದ ಬಳಿಕ ಬರೀ ಮುಜುಗರವಾಗುವ ಸಂಗತಿಗಳೇ ನಡೆಯುತ್ತಿವೆ.
ಹೌದು.. ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿ ಆರಂಭವಾದಾಗಿನಿಂದ ಒಂದಿಲ್ಲೊಂದು ಕಾರಣಕ್ಕೆ ಪಾಕಿಸ್ತಾನ ಜಾಗತಿಕವಾಗಿ ಮುಜುಗರ ಎದುರಿಸುತ್ತಿದ್ದು, ಮೊದಲು ಟೂರ್ನಿ ಆಯೋಜಿತ ಪಾಕಿಸ್ತಾನ ತಂಡ ಸೋತು ಸುಣ್ಣವಾಗಿ ಟೂರ್ನಿಯಿಂದ ಹೊರಬಿದ್ದಿದೆ. ಆತಿಥೇಯ ರಾಷ್ಟ್ರವಾಗಿ ಒಂದೇ ಒಂದು ಪಂದ್ಯವನ್ನು ಗೆಲ್ಲಲಾಗದೆ ಹೊರಬಿದ್ದಿದೆ.
ಬಳಿಕ ವಿದೇಶ ಆಟಗಾರರ ಕಿಟ್ ಬ್ಯಾಗ್ ಗಳ ಕಳವು ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿತ್ತು. ಬಳಿಕ ಮೈದಾನಗಳಲ್ಲಿ ಮಳೆ ನೀರು ನಿರ್ವಹಣೆ ಕುರಿತು ಪಿಸಿಬಿ ವ್ಯಾಪಕ ಟೀಕೆ ಎದುರಿಸಿತ್ತು. 1200 ಕೋಟಿ ವೆಚ್ಚ ಮಾಡಿ ಮೈದಾನ ನವೀಕರಣಗೊಂಡರೂ ಮೈದಾನದಲ್ಲಿ ಮಳೆ ನೀರು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇಲ್ಲದೇ ಪಿಸಿಬಿ ತೀವ್ರ ಮುಜುಗರ ಎದುರಿಸಿತ್ತು.
ಬಳಿಕ ಭಾರತ ತಂಡ ಸೆಮಿ ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿ ಪಾಕಿಸ್ತಾನಕ್ಕೆ ಫೈನಲ್ ಭಾಗ್ಯ ಕೂಡ ಇಲ್ಲದಂತೆ ಮಾಡಿದೆ. 29 ವರ್ಷಗಳ ನಂತರ ಐಸಿಸಿ ಟೂರ್ನಮೆಂಟ್ ಆತಿಥ್ಯ ವಹಿಸಿದ್ದು, ಪಾಕಿಸ್ತಾನಕ್ಕೆ ತಮ್ಮದೇ ದೇಶದಲ್ಲಿ ಫೈನಲ್ ಆತಿಥ್ಯ ವಹಿಸಲು ಸಾಧ್ಯವಾಗಿಲ್ಲ.
ಇದೀಗ ಗಾಯದ ಮೇಲೆ ಬರೆ ಎಂಬಂತೆ ತನ್ನದೇ ಪ್ರಜೆಗಳ ವಿಚಾರವಾಗಿ ಮತ್ತೆ ಪಾಕಿಸ್ತಾನ ಮುಜುಗರಕ್ಕೀಡಾಗಿದೆ.
ಸಿಕ್ಸರ್ ಹೋದ ಚೆಂಡನ್ನೇ ಕದ್ದರೇ ಪಾಕಿಸ್ತಾನಿಯರು?
ಇನ್ನು ನಿನ್ನೆ ಲಾಹೋರ್ ನ ಗಡಾಫಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲೂ ಪಾಕಿಸ್ತಾನಕ್ಕೆ ಅವಮಾನವಾಗುವ ಘಟನೆ ನಡೆದಿದ್ದು, ಪಂದ್ಯದ ಅಂತಿಮ ಹಂತದಲ್ಲಿ ದಕ್ಷಿಣ ಆಫ್ರಿಕಾದ ಬ್ಯಾಟರ್ ಡೇವಿಡ್ ಮಿಲ್ಲರ್ ಭಾರಿಸಿದ ಸಿಕ್ಸರ್ ಚೆಂಡನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಪಾಕಿಸ್ತಾನಿ ಕ್ರಿಕೆಟ್ ಅಭಿಮಾನಿಗಳು ಕದ್ದು ಪರಾರಿಯಾಗಿದ್ದಾರೆ ಎನ್ನುವ ಸುದ್ದಿ ಇದೀಗ ವ್ಯಾಪಕ ವೈರಲ್ ಆಗುತ್ತಿದೆ.
ಮಿಲ್ಲರ್ ಸಿಕ್ಸರ್ ಸಿಡಿಸುತ್ತಿದ್ದಂತೆಯೇ ಗ್ಯಾಲರಿಯಲ್ಲಿದ್ದ ಇಬ್ಬರು ಪ್ರೇಕ್ಷಕರು ಚೆಂಡನ್ನು ಕೈಗೆತ್ತಿಕೊಂಡು ಭದ್ರತಾ ಸಿಬ್ಬಂದಿ ನೋಡುತ್ತಿರುವಂತೆಯೇ ಅಲ್ಲಿಂದ ಓಡಿ ಪರಾರಿಯಾಗಿದ್ದಾರೆ. ಈ ಪಂದ್ಯದಲ್ಲಿ ಅಷ್ಟೇನೂ ಪ್ರೇಕ್ಷಕರು ಇಲ್ಲದ ಕಾರಣ ಚೆಂಡು ಕದ್ದವರು ಪರಾರಿಯಾಗಲು ನೆರವಾಗಿದೆ.
ಕೊನೆಗೂ ಸಿಕ್ಕ ಚೆಂಡು
ಕಣ್ಣ ಮುಂದೆಯೇ ಚೆಂಡನ್ನು ಕದ್ದು ಪರಾರಿಯಾಗುತ್ತಿದ್ದರೂ ಭದ್ರತಾ ಸಿಬ್ಬಂದಿ ಅಸಹಾಯಕಾರಿಗಿ ನಿಂತಿರುವುದು ಕಾಣುತ್ತದೆ. ಈ ಘಟನೆಯಿಂದಾಗಿ ಪಂದ್ಯ ಕೆಲಕಾಲ ಸ್ಥಗಿತಗೊಂಡಿತ್ತು. ಬಳಿಕ ಮೈದಾನದ ಗೇಟ್ ಬಳಿಕ ಸಿಬ್ಬಂದಿ ಅವರಿಂದ ಚೆಂಡು ಕಸಿದು ವಾಪಸ್ ತಂದು ಕೊಟ್ಟಿದ್ದಾರೆ. ಬಳಿಕ ಪಂದ್ಯ ಮುಂದುವರೆದಿದೆ.
ಸಾಮಾನ್ಯವಾಗಿ ಕ್ರಿಕೆಟ್ ಆಡುವಾಗ ಪ್ರೇಕ್ಷಕರ ಗ್ಯಾಲರಿಗೆ ಚೆಂಡು ಬಂದು ಬೀಳುವುದು ಸಾಮಾನ್ಯ. ಈ ವೇಳೆ ಚೆಂಡು ಕೈಗೆತ್ತಿಕೊಳ್ಳುವ ಪ್ರೇಕ್ಷಕರು ಕೆಲ ಹೊತ್ತಿನ ಬಳಿಕ ಅದನ್ನು ಆಟಗಾರರಿಗೆ ಮರಳಿಸುತ್ತಾರೆ. ಆದರೆ ಇದೇ ಮೊದಲ ಬಾರಿಗೆ ಪ್ರೇಕ್ಷಕರು ಚೆಂಡನ್ನೇ ಹೊತ್ತೊಯ್ದಿದ್ದಾರೆ.