ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಫೈನಲ್‌ಗೆ ಪ್ರವೇಶಿಸಿದೆ. ಐಸಿಸಿ ಏಕದಿನ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ 265 ರನ್‌ಗಳ ಗುರಿಯನ್ನು ತಂಡವು ಬೆನ್ನಟ್ಟಿತು. ವಿರಾಟ್ ಕೊಹ್ಲಿ (84) ಮತ್ತು ಶ್ರೇಯಸ್ ಅಯ್ಯರ್ (45) ತಂಡಕ್ಕೆ ನೆರವಾದರೂ, ತಂಡವನ್ನು ಗೆಲುವಿನ ದಡ ಮುಟ್ಟಿಸುವ ಒತ್ತಡ ಹಾರ್ದಿಕ್ ಪಾಂಡ್ಯ ಮತ್ತು ಕೆಎಲ್ ರಾಹುಲ್ ಅವರ ಹೆಗಲ ಮೇಲಿತ್ತು. ಈ ವೇಳೆ ಮೂರು ಸಿಕ್ಸರ್ ಸಿಡಿಸುವ ಮೂಲಕ ಪಾಂಡ್ಯ ಭಾರತ ಗೆಲುವಿನ ದಡ ಸೇರಲು ಸಹಾಯ ಮಾಡಿದರು. ಕೆಎಲ್ ರಾಹುಲ್ 34 ಎಸೆತಗಳಲ್ಲಿ 42 ರನ್ ಗಳಿಸಿ ಅಜೇಯರಾಗಿ ಉಳಿದರು.
ಆದರೆ, ಒಂದು ಬಾಲ್‌ಗೆ ಒಂದು ರನ್‌ಗಿಂತ ಹೆಚ್ಚಿನ ಅಗತ್ಯ ಇದ್ದದ್ದರಿಂದ ಡ್ರೆಸ್ಸಿಂಗ್ ರೂಂನಲ್ಲಿ ಆತಂಕ ಮನೆಮಾಡಿತ್ತು. ಹೀಗಿದ್ದರೂ ಔಟ್ ಆದ ಬಳಿಕ ಹಾರ್ದಿಕ್ ಪಾಂಡ್ಯ ನಗುತ್ತಲೇ ಮೈದಾನದಿಂದ ಹೊರಬಂದಿದ್ದರು.
ಆದರೆ, ಹಾರ್ದಿಕ್ ಪಾಂಡ್ಯ 24 ಎಸೆತಗಳಲ್ಲಿ ಮೂರು ಭರ್ಜರಿ ಸಿಕ್ಸರ್ ಮತ್ತು ಒಂದು ಬೌಂಡರಿ ಸಹಿತ 28 ರನ್ ಗಳಿಸಿದರು. ಇದರಿಂದ ತಂಡದ ಮೇಲಿದ್ದ ಒತ್ತಡ ಕಡಿಮೆಯಾಗಿತ್ತು. ಭಾರತ ಗೆಲ್ಲಲು ಕೇವಲ ಆರು ರನ್‌ಗಳ ಅವಶ್ಯಕತೆಯಿದ್ದಾಗ ಔಟಾದರೂ ಪಾಂಡ್ಯ ನಗುತ್ತಲೇ ಡ್ರೆಸ್ಸಿಂಗ್ ರೂಂಗೆ ಪ್ರವೇಶಿಸಿದ್ದರು. ಇದಕ್ಕೆ ಕಾರಣ ಏನೆಂಬುದನ್ನು ಪಂದ್ಯದ ನಂತರ ಮಾತನಾಡಿದ ಪಾಂಡ್ಯ, ಸಹ ಆಟಗಾರ ಅಕ್ಷರ್ ಪಟೇಲ್ ಅವರೊಂದಿಗೆ ಹಂಚಿಕೊಂಡಿದ್ದಾರೆ.
'ನಾನು ನಗುತ್ತಿದ್ದೆ. ಅಂದರೆ, ನಾನು ಎರಡು ಸಿಕ್ಸರ್‌ಗಳನ್ನು ಹೊಡೆಯುವ ಬಗ್ಗೆ ಯೋಚಿಸಿರಲಿಲ್ಲ. ಅದು ಯಾವುದೇ ಸಮಯದಲ್ಲಿ ಬೇಕಾದರೂ ಸಂಭವಿಸುತ್ತದೆ ಎಂಬುದು ನನಗೆ ತಿಳಿದಿತ್ತು. ಆದರೆ, ಡ್ರೆಸ್ಸಿಂಗ್ ಕೋಣೆಯಲ್ಲಿ ಒತ್ತಡ ಹೆಚ್ಚುತ್ತಿದೆ ಎಂಬುದು ನನಗೆ ತಿಳಿದಿತ್ತು. ಆದರೆ, ಫಲಿತಾಂಶದ ಬಗ್ಗೆ ನನಗೆ ಖಾತರಿಯಿತ್ತು. ಹೀಗಾಗಿಯೇ ನಾನು ಒಳಗೊಳಗೆ ನಗುತ್ತಿದ್ದೆ' ಎಂದು ಪಾಂಡ್ಯ ಭಾರತೀಯ ಕ್ರಿಕೆಟ್ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿದ್ದಾರೆ.
ನಂತರ ಅಕ್ಷರ್ ಪಟೇಲ್ ಡ್ರೆಸ್ಸಿಂಗ್ ರೂಂನೊಳಗಿನ ಆತಂಕ ಮತ್ತು ಅಲ್ಲಿದ್ದವರು ಏನನ್ನು ಯೋಚಿಸುತ್ತಿದ್ದರು ಎಂಬುದರ ಬಗ್ಗೆ ವಿವರಿಸಿದರು.
'ಒಳಗೆ ಏನಾಗುತ್ತದೆ ಎಂದು ನೀವು (ಪಾಂಡ್ಯ) ಯೋಚಿಸಿರಲಿಲ್ಲವೇ? ಅಲ್ಲಿದ್ದವರು 'ಹೇ, ಎರಡು ರನ್, ಸಿಂಗಲ್ಸ್ ರನ್‌ಗೆ ಓಡು' ಎಂದು ಯೋಚಿಸುತ್ತಿದ್ದರು. ಆದರೆ, ನನಗೆ ಗೊತ್ತಿತ್ತು. ನನಗೆ ನಿಮ್ಮ ಮೇಲೆ ನಂಬಿಕೆ ಇತ್ತು. ನಾನು ನನ್ನ ಸುತ್ತಲಿನ ಪರಿಸರವನ್ನು ಗಮನಿಸುತ್ತಿದ್ದೆ' ಎಂದು ಅಕ್ಷರ್ ಪಾಂಡ್ಯಗೆ ಹೇಳಿದರು.
ಮಾರ್ಚ್ 9ರ ಭಾನುವಾರದಂದು ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಟೀಂ ಇಂಡಿಯಾ ಗೆದ್ದರೆ, ಅದು ಅವರಿಗೆ ದಾಖಲೆಯ ಮೂರನೇ ಪ್ರಶಸ್ತಿಯಾಗಲಿದೆ.