ಲಾಹೋರ್: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡ ಪ್ರಶಸ್ತಿ ಗೆದ್ದಿದ್ದೇ ತಡ ಪಾಕಿಸ್ತಾನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದ್ದು, ಒಂದಲ್ಲಾ ಒಂದು ಕಾರಣ ಮುಂದಿಟ್ಟುಕೊಂಡು ಪಾಕಿಸ್ತಾನಿಯರು ಭಾರತದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಹೌದು.. ಈ ಪಟ್ಟಿಗೆ ಇದೀಗ ಹೊಸ ಸೇರ್ಪಡೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ, ಮಾಜಿ ನಾಯಕ ಇಂಜಮಾಮ್ ಉಲ್ ಹಕ್... ಇಂಜಮಾಮ್ ಈ ಬಾರಿ ಭಾರತದ ಮಾಜಿ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ ಅವರ ಹೇಳಿಕೆಯನ್ನು ಮುಂದಿಟ್ಟುಕೊಂಡು ವಾಗ್ದಾಳಿ ನಡೆಸಿದ್ದು, ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
ಪಾಕಿಸ್ತಾನದಿಂದ ತಪ್ಪಿಸಿಕೊಳ್ಳಲು ಜಾರ್ಜಾದಿಂದ ಪರಾರಿಗೆ ಯತ್ನಿಸಿದ್ದ Sunil Gavaskar
ಗವಾಸ್ಕರ್ ಹೇಳಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಇಂಜಮಾಮ್, 'ಭಾರತ ತಂಡವು ಪಂದ್ಯವನ್ನು ಗೆದ್ದಿತು ನಿಜ. ಏಕೆಂದರೆ ಉತ್ತಮವಾಗಿ ಆಡಿದರು. ಇದನ್ನು ಒಪ್ಪುತ್ತೇವೆ. ಆದರೆ ಗವಾಸ್ಕರ್ ಅವರು ಈ ಹಿಂದಿನ ಅಂಕಿಅಂಶಗಳನ್ನು ಗಮನಿಸಬೇಕು. ಈಗ ಪಾಕಿಸ್ತಾನದ ಕುರಿತು ಮಾತನಾಡುವ ಇದೇ ಸುನಿಲ್ ಗವಾಸ್ಕರ್ ಪಾಕಿಸ್ತಾನ ತಂಡದಿಂದ ತಪ್ಪಿಸಿಕೊಳ್ಳಲು ಒಮ್ಮೆ ಶಾರ್ಜಾದಿಂದ ಪರಾರಿಗೆ ಯತ್ನಿಸಿದ್ದರು.
ಅವರು ನಮಗಿಂತ ದೊಡ್ಡವರು; ಅವರು ನಮ್ಮ ಹಿರಿಯರು. ನಾವು ಅವರನ್ನು ತುಂಬಾ ಗೌರವಿಸುತ್ತೇವೆ. ಹಾಗಂತ ಅವರು ಮನಬಂದಂತೆ ಮಾತನಾಡುವುದು ಸರಿಯಲ್ಲ. ನಿಮ್ಮ ತಂಡವನ್ನು ನೀವು ಎಷ್ಟು ಬೇಕಾದರೂ ಹೊಗಳಿ.. ಆ ಹಕ್ಕು ನಿಮಗಿದೆ. ಆದರೆ ಇತರ ತಂಡಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವುದು ಕೆಟ್ಟ ಅಭಿರುಚಿಯಾಗಿದೆ ಎಂದು ಹೇಳಿದ್ದಾರೆ.
ಅಂತೆಯೇ ನೀವು ಈ ಹಿಂದಿನ ಭಾರತ ಪಾಕ್ ಕ್ರಿಕೆಟ್ ನ ಅಂಕಿ ಅಂಶ ಗಮನಿಸಿದರೆ, ಆಗ ಪಾಕಿಸ್ತಾನ ಎಲ್ಲಿತ್ತು ಎಂಬುದು ನಿಮಗೆ ತಿಳಿಯುತ್ತದೆ. ಗವಾಸ್ಕರ್ ರಂತಹ ಹಿರಿಯರು ಇಂತಹ ಹೇಳಿಕೆ ನೀಡಿರುವುದು ನನಗೆ ತೀವ್ರ ನೋವುಂಟು ಮಾಡಿದೆ. ಅವರು ಶ್ರೇಷ್ಠ, ಗೌರವಾನ್ವಿತ ಕ್ರಿಕೆಟಿಗರು ಎಂದು ಭಾವಿಸಿದ್ದೇನೆ. ಆದರೆ ಅಂತಹ ಹೇಳಿಕೆಗಳನ್ನು ನೀಡುವ ಮೂಲಕ ಅವರು ತಮ್ಮ ಪರಂಪರೆಯನ್ನು ಅವಮಾನಿಸುತ್ತಿದ್ದಾರೆ. ಅವರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು ಎಂದು ಇಂಜಮಾಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಷ್ಟಕ್ಕೂ ಗವಾಸ್ಕರ್ ಏನು ಹೇಳಿದ್ದರು?
ಮಾಧ್ಯಮವೊಂದರ ಸಂದರ್ಶನ ವೇಳೆ ಭಾರತ ತಂಡದ ಪ್ರದರ್ಶನ ಶ್ಲಾಘಿಸಿದ್ದ ಗವಾಸ್ಕರ್, 'ಭಾರತದಲ್ಲಿ ಎಷ್ಟು ಪ್ರತಿಭೆಗಳಿವೆ ಎಂದರೆ ಹಿರಿಯರೊಂದಿಗೆ ಭಾರತ ಎ ತಂಡ ಮಾಡಿದರೆ, ಉಳಿದವರೊಂದಿಗೆ ಭಾರತ ಬಿ ತಂಡ ರಚಿಸಬಹುದು. ಪ್ರಸ್ತುತ ಪಾಕಿಸ್ತಾನ ಪರಿಸ್ಥಿತಿ ನೋಡಿದರೆ ಆ ತಂಡವನ್ನು ಭಾರತದ ಬಿ ತಂಡವು ಸೋಲಿಸಲಿದೆ ಎಂದು ಭಾವಿಸುತ್ತೇನೆ. ಸಿ ತಂಡದ ಬಗ್ಗೆ ನನಗೆ ಖಚಿತತೆ ಇಲ್ಲ. ಆದರೆ ಪ್ರಸ್ತುತ ಫಾರ್ಮ್ನಲ್ಲಿರುವುದನ್ನು ನೋಡಿದರೆ ಪಾಕಿಸ್ತಾನ ತಂಡವನ್ನು ಸೋಲಿಸುವುದು ತುಂಬಾ ಸುಲಭ ಎಂದು ಹೇಳಿದ್ದರು.
ಇದೇ ಹೇಳಿಕೆ ಇದೀಗ ವಿವಾದಕ್ಕೀಡಾಗಿದ್ದು, ಈ ಹೇಳಿಕೆ ಪಾಕಿಸ್ತಾನದ ಮಾಜಿ ಕೋಚ್ ಜೇಸನ್ ಗಿಲೆಸ್ಪಿ ಕೂಡ 'ಅಸಂಬದ್ಧ' ಎಂದು ಕಿಡಿಕಾರಿದ್ದಾರೆ.
ಅಂದಹಾಗೆ 1996ರ ವಿಶ್ವಕಪ್ ಟೂರ್ನಿಯ ಸಹ-ಆತಿಥ್ಯ ವಹಿಸಿದ್ದ ಪಾಕಿಸ್ತಾನ ಬರೊಬ್ಬರಿ 29 ವರ್ಷಗಳ ಬಳಿಕ ಚಾಂಪಿಯನ್ಸ್ ಟ್ರೋಫಿ ಆಯೋಜಿಸಿತ್ತು. ಆದರೆ ಈ ಟೂರ್ನಿಯಲ್ಲಿ ಪಾಕಿಸ್ತಾನ ಆರಂಭದಲ್ಲೇ ಸತತ ಎರಡು ಪಂದ್ಯಗಳನ್ನು ಸೋತು ಟೂರ್ನಿಯಿಂದಲೇ ಹೊರಬಿದ್ದಿತ್ತು. ಆ ಬಳಿಕ ಸೆಮಿ ಫೈನಲ್ ನಲ್ಲಿ ಭಾರತ ಗೆದ್ದಿದ್ದರಿಂದ ಹೈಬ್ರಿಡ್ ಮಾದರಿಯ ನಿಯಮಗಳನುಸಾರ ಫೈನಲ್ ಪಂದ್ಯ ದುಬೈನಲ್ಲಿ ನಡೆಯಿತು. ಅಲ್ಲಿಯೂ ಭಾರತ ಜಯಭೇರಿ ಭಾರಿಸಿ ಪ್ರಶಸ್ತಿ ಜಯಿಸಿತು.