ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿ ಮುಕ್ತಾಯವಾಗಿ 48 ಗಂಟೆಗಳೇ ಕಳೆದರೂ ಅದರ ಕುರಿತಾದ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಳಲು ಮಾತ್ರ ಇನ್ನೂ ನಿಲ್ಲುವಂತೆ ಕಾಣುತ್ತಿಲ್ಲ.
ಇಷ್ಟು ದಿನ ಭಾರತ ತಂಡಕ್ಕೆ ಒಂದೇ ಮೈದಾನದಲ್ಲಿ ಆಡುವ ಅಡ್ವಾಂಟೇಜ್ ಸಿಗುತ್ತಿದೆ ಎಂದು ಕ್ಯಾತೆ ತೆಗೆಯುತ್ತಿದ್ದ ಪಾಕಿಸ್ತಾನ ಇದೀಗ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಸಮಾರಂಭದ ಕುರಿತು ಅಸಮಾಧಾನ ಹೊರಹಾಕಿದೆ.
ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೋಸ್ಟ್ ಆಗಿದ್ದರೂ ಪಾಕಿಸ್ತಾನ ಒಬ್ಬೇ ಒಬ್ಬ ಪ್ರತಿನಿಧಿಯೂ ವೇದಿಕೆಯಲ್ಲಿ ಭಾಗಿಯಾಗಿರಲಿಲ್ಲ. ಐಸಿಸಿ ಅಧ್ಯಕ್ಷ ಜಯ್ ಶಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾರ್ಯದರ್ಶಿ ದೇವಜಿತ್ ಸೈಕಿಯಾ ಆಟಗಾರರಿಗೆ ಪದಕ, ಟ್ರೋಫಿ ಮತ್ತು ಜಾಕೆಟ್‌ಗಳನ್ನು ಹಸ್ತಾಂತರಿಸಿದರು.
ಸಿಇಒ ಇದ್ದರೂ ವೇದಿಕೆ ಮೇಲೆ ಕರೆದಿಲ್ಲ..
ಇನ್ನು ಇದೇ ವಿಚಾರವಾಗಿ ಪಿಸಿಪಿ ಕ್ಯಾತೆ ತೆಗೆದಿದ್ದು, ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ನಿರ್ದೇಶಕರೂ ಆಗಿದ್ದ ಪಾಕ್ ಕ್ರಿಕೆಟ್ ಮಂಡಳಿಯ ಸಿಇಒ ಸುಮೈರ್ ಅಹ್ಮದ್ ಫೈನಲ್ ಪಂದ್ಯದ ಸಂದರ್ಭದಲ್ಲಿದ್ದರೂ, ಅವರನ್ನು ಪ್ರಶಸ್ತಿ ವಿತರಣಾ ಸಮಾರಂಭಕ್ಕೆ ಆಹ್ವಾನಿಸಿರಲಿಲ್ಲ ಎಂದು ಪಿಸಿಬಿ ಆರೋಪಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಕ್ವಿ ಫೆಡರಲ್ ಸಚಿವರಾಗಿರುವುದರಿಂದ ಬೇರೆ ಕೆಲಸಗಳಿಂದಾಗಿ ದುಬೈಗೆ ಹೋಗಿರಲಿಲ್ಲ. ಆದರೆ ಸಿಇಒ ಸುಮೈರ್ ಅಹ್ಮದ್ ಪಾಕಿಸ್ತಾನದ ಪ್ರತಿನಿಧಿಯಾಗಿ ಫೈನಲ್ ಪಂದ್ಯದಲ್ಲಿ ಹಾಜರಿದ್ದರು. ಹೀಗಿದ್ದರೂ ವೇದಿಕೆಗೆ ಯಾಕೆ ಆಹ್ವಾನಿಸಿಲ್ಲ ಎಂದು ಪಿಸಿಬಿ ಪ್ರಶ್ನಿಸಿದೆ.
ಪಿಸಿಬಿ ದೂರು
ಚಾಂಪಿಯನ್ಸ್ ಟ್ರೋಫಿ ಪ್ರಶಸ್ತಿ ವಿತರಣಾ ವೇದಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯ ಪ್ರತಿನಿಧಿಗಳಿಗೆ ಐಸಿಸಿ ಆಹ್ವಾನ ನೀಡಿಲ್ಲ ಎಂದು ಆತಿಥೇಯ ಪಾಕಿಸ್ತಾನ ಅಸಮಾಧಾನ ಹೊರಹಾಕಿದೆ. ಸಮಾರೋಪ ಕಾರ್ಯಕ್ರಮ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದ ಐಸಿಸಿ ಪ್ರತಿನಿಧಿಗಳೊಂದಿಗೆ ಪಿಸಿಬಿ ಸಿಇಒ ಸುಮೈರ್ ಅಹ್ಮದ್ ಅವರಿಗೆ ಸಮರ್ಪಕವಾಗಿ ಸಂವಹನ ನಡೆಸಲು ಅಸಾಧ್ಯವಾಗಿರಬಹುದು. ಹೀಗಾಗಿ ಸಮಾರಂಭದಲ್ಲಿ ಭಾಗವಹಿಸುವ ಅವಕಾಶ ತಪ್ಪಿರಬಹುದು ಎಂದು ಅಂದಾಜಿಸಲಾಗಿದೆ. ಈ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯನ್ನು ಪ್ರಶ್ನಿಸಲು ಮತ್ತು ದೂರು ನೀಡಲು ಪಿಸಿಬಿ ಮುಂದಾಗಿದೆ ಎನ್ನಲಾಗಿದೆ.
ಅಂದಹಾಗೆ 1996ರ ವಿಶ್ವಕಪ್ ಬಳಿಕ ಪಾಕಿಸ್ತಾನಕ್ಕೆ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿ ಆಯೋಜಿಸುವ ಅವಕಾಶ ಸಿಕ್ಕಿತ್ತು. ಆದರೆ ಭದ್ರತೆಯ ಕಾರಣ ಮುಂದಿಟ್ಟು ಟೀಂ ಇಂಡಿಯಾ ಪಾಕಿಸ್ತಾನ ಪ್ರವೇಶಿಸಲು ಒಪ್ಪಿರಲಿಲ್ಲ. ಹೀಗಾಗಿ ಭಾರತದ ಪಂದ್ಯಗಗಳು ದುಬೈನಲ್ಲಿ ಆಯೋಜನೆಗೊಂಡಿದ್ದವು.
ಭಾರತ ಫೈನಲ್ ಪ್ರವೇಶಿಸಿದ್ದರಿಂದ ಅಂತಿಮವಾಗಿ, ಫೈನಲ್ ಪಂದ್ಯವೂ ದುಬೈನಲ್ಲೇ ನಡೆಯಿತು. ಇದು ಪಾಕ್ ಕ್ರಿಕೆಟ್ ಮಂಡಳಿಗೆ ಬಹುದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು. ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸುವ ಮೂಲಕ ಭಾರತ 9ನೇ ಆವೃತ್ತಿಯ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿತು.