ದುಬೈ: ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬೆನ್ನಲ್ಲೇ ಐಸಿಸಿ ಏಕದಿನ ಆಟಗಾರರ ರ‍್ಯಾಂಕಿಂಗ್ ಪಟ್ಟಿ ಪರಿಷ್ಕರಣೆ ಮಾಡಿದ್ದು, ಕಳಪೆ ಫಾರ್ಮ್ ನಿಂದ ಕುಸಿದಿದ್ದ ಭಾರತದ ನಾಯಕ ರೋಹಿತ್ ಶರ್ಮಾ ಪುಟಿದೆದ್ದಿದ್ದಾರೆ.
ಹೌದು.. ನಿರೀಕ್ಷೆಯಂತೆಯೇ ಅಂತಾರಾಷ್ಚ್ರೀಯ ಕ್ರಿಕೆಟ್ ಸಮಿತಿ ಐಸಿಸಿ ಏಕದಿನ ಕ್ರಿಕೆಟ್ ಆಟಗಾರರ ರ‍್ಯಾಂಕಿಂಗ್ ಪಟ್ಟಿಯನ್ನು ಪರಿಷ್ಕರಿಸಿದ್ದು, ಹಲವು ಆಟಗಾರರ ರ್ಯಾಂಕಿಂಗ್ ಸ್ಥಾನ ಬದಲಾಗಿದೆ. ಪ್ರಮುಖವಾಗಿ ಭಾರತ ಮತ್ತು ನ್ಯೂಜಿಲೆಂಡ್ ವಿರುದ್ಧದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಐಸಿಸಿ ರ‍್ಯಾಂಕಿಂಗ್ ಪಟ್ಟಿ ಪರಿಷ್ಕರಣೆ ಮಾಡಿದೆ.
ಚಾಂಪಿಯನ್ಸ್ ಟ್ರೋಫಿ ಟೂರ್ನಿಯುದ್ದಕ್ಕೂ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿದ ಭಾರತೀಯ ಆಟಗಾರರು ಪಟ್ಟಿಯಲ್ಲಿ ಗಮನಾರ್ಹ ಬದಲಾವಣೆ ಕಂಡಿದ್ದಾರೆ. ಬ್ಯಾಟ್ಸಮನ್ ಗಳ ಪಟ್ಟಿಯಲ್ಲಿ ಭಾರತದ ಶುಭ್ ಮನ್ ಗಿಲ್ ಅಗ್ರ ಸ್ಥಾನದಲ್ಲಿ ಮುಂದುವರೆದಿದ್ದು, 784 ಅಂಕಗಳೊಂದಿಗೆ ಗಿಲ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ. 770 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿ ಪಾಕಿಸ್ತಾನದ ಬಾಬರ್ ಆಜಂ ಇದ್ದಾರೆ.
ಉಳಿದಂತೆ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿ ತಂಡದ ಗೆಲುವಿನ ರೂವಾರಿಯಾದ ನಾಯಕ ರೋಹಿತ್ ಶರ್ಮಾ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭರ್ಜರಿ ಬಡ್ತಿ ಪಡೆದಿದ್ದು, ಅವರು 756 ಅಂಕಗಳೊಂದಿಗೆ 2 ಸ್ಥಾನ ಮೇಲೇರಿ 3ನೇ ಸ್ಥಾನಕ್ಕೆ ತಲುಪಿದ್ದಾರೆ.
3ನೇ ಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸನ್ (744 ಅಂಕ) 4ನೇ ಸ್ಥಾನದಲ್ಲಿದ್ದು, ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಪಂದ್ಯಗಳಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಫೈನಲ್ ನಲ್ಲಿ ಎಡವಿದ್ದ ವಿರಾಟ್ ಕೊಹ್ಲಿ 1 ಸ್ಥಾನ ಕುಸಿದು 736 ಅಂಕಗಳೊಂದಿಗೆ 5ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಉಳಿದಂತೆ ಭಾರತ ತಂಡದ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರ ಶ್ರೇಯಸ್ ಅಯ್ಯರ್ 704 ಅಂಕಗಳೊಂದಿಗೆ 8ನೇ ಸ್ಥಾನದಲ್ಲಿ ಮುಂದುವರೆದಿದ್ದಾರೆ. ಉಳಿದಂತೆ ಭಾರತದ ಕೆಎಲ್ ರಾಹುಲ್ ಒಂದು ಸ್ಥಾನ ಕುಸಿದು 16ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಉಳಿದಂತೆ ಬೌಲಿಂಗ್ ನಲ್ಲಿ ಶ್ರೀಲಂಕಾದ ಮಹೀಶ್ ತೀಕ್ಷಣ ಅಗ್ರಸ್ಥಾನದಲ್ಲಿದ್ದು, ನ್ಯೂಜಿಲೆಂಡ್ ನಾಯಕ ಮೆಚೆಲ್ ಸ್ಯಾಂಥ್ನರ್ 2ನೇ ಸ್ತಾನಕ್ಕೆ ಬಡ್ತಿ ಪಡೆದಿದ್ದಾರೆ. ಭಾರತದ ಕುಲದೀಪ್ ಯಾದವ್ 3 ಸ್ಥಾನ ಮೇಲೇರಿ ಮೂರನೇ ಸ್ಥಾನಕ್ಕೇರಿದ್ದಾರೆ.
ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ 2 ಸ್ಥಾನ ಕುಸಿದು 4ನೇ ಸ್ಥಾನದಲ್ಲಿದ್ದಾರೆ. ರವೀಂದ್ರ ಜಡೇಜಾ ಕೂಡ 3 ಸ್ಥಾನ ಮೇಲೇರಿ ಬೌಲರ್ ಗಳ ಅಗ್ರ 10ರ ಪಟ್ಟಿಯಲ್ಲಿ 10ನೇಯವರಾಗಿ ಸ್ಥಾನ ಪಡೆದಿದ್ದಾರೆ. ಮಹಮದ್ ಶಮಿ 2 ಸ್ಥಾನ ಕುಸಿದು 13ನೇ ಸ್ಥಾನದಲ್ಲಿದ್ದಾರೆ.
ಆಲ್ರೌಂಡರ್ ಗಳ ಪಟ್ಟಿಯಲ್ಲಿ ಭಾರತದ ರವೀಂದ್ರ ಜಡೇಜಾ 1 ಸ್ಥಾನ ಕುಸಿದು 10ನೇ ಸ್ಥಾನದಲ್ಲಿದ್ದು, ಅಫ್ಘಾನಿಸ್ತಾನದ ಅಜ್ಮತುಲ್ಲಾ ಓಮರ್ಝೈ ಮತ್ತು ಮಹಮದ್ ನಬಿ ಅಗ್ರ 2 ಸ್ಥಾನಗಳಲ್ಲಿದ್ದಾರೆ.