ಕಪಿಲ್ ದೇವ್ 
ಕ್ರಿಕೆಟ್

'ನಿಮಗೆ ಕುಟುಂಬ ಬೇಕು ಆದರೆ...': ಬಿಸಿಸಿಐ ರೂಲ್ಸ್ ಟೀಕಿಸಿದ ವಿರಾಟ್ ಕೊಹ್ಲಿ; ಕಪಿಲ್ ದೇವ್ ಹೇಳಿದ್ದೇನು?

ಟೀಂ ಇಂಡಿಯಾ ಆಟಗಾರರಿಗೆ ಬಿಸಿಸಿಐ ಹೊಸ ನಿಯಮ ಜಾರಿಗೆ ತಂದಿರುವುದನ್ನು ವಿರಾಟ್ ಕೊಹ್ಲಿ ಟೀಕಿಸಿರುವ ಬೆನ್ನಲ್ಲೇ ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಪ್ರತಿಕ್ರಿಯೆ ನೀಡಿದ್ದಾರೆ.

ಜನವರಿಯಲ್ಲಿ ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಭಾರತ 3-1 ಅಂತರದಲ್ಲಿ ಸೋಲು ಕಂಡಿದ್ದು, ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಟಗಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದೆ. ಪ್ರವಾಸದ ವೇಳೆಯಲ್ಲಿ ಆಟಗಾರರ ಪತ್ನಿ ಹಾಗೂ ಕುಟುಂಬ ಸದಸ್ಯರ ಜೊತೆಗಿರುವಿಕೆಯ ಕಾಲಮಿತಿಯನ್ನು ಕಡಿತಗೊಳಿಸಿದೆ. ಬಿಸಿಸಿಐನ ಈ ಕ್ರಮ ಕುರಿತು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿದ್ದು, ಮಾಜಿ ಕ್ರಿಕೆಟಿಗ ಕಪಿಲ್ ದೇವ್ ಸಮತೋಲಿದ ವಿಧಾನವನ್ನು ಅನುಸರಿಸುವಂತೆ ಕರೆ ನೀಡಿದ್ದಾರೆ.

ಪ್ರವಾಸದ ಸಮಯದಲ್ಲಿ ಆಟಗಾರರು ಕುಟುಂಬಗಳೊಂದಿಗೆ ಪ್ರಯಾಣಿಸಲು ಇಷ್ಟಪಡುತ್ತಾರೆ. ಆದರೆ, ವಿಭಿನ್ನ ಅಭಿಪ್ರಾಯಗಳು ಕೇಳಿಬಂದಿರುವ ಈ ಸಮಸ್ಯೆಯನ್ನು ನಿಭಾಯಿಸುವಲ್ಲಿ ಸಮತೋಲಿತ ವಿಧಾನವನ್ನು ಕಂಡುಕೊಳ್ಳಬೇಕು ಎಂದಿದ್ದಾರೆ.

'ನಿಯಮ ಜಾರಿಗೆ ತಂದಿರುವುದರ ಬಗ್ಗೆ ನನಗೆ ಗೊತ್ತಿಲ್ಲ, ಅದು ವೈಯಕ್ತಿಕ. ಇದು ಕ್ರಿಕೆಟ್ ಮಂಡಳಿಯ ನಿರ್ಧಾರ ಎಂದು ನಾನು ಭಾವಿಸುತ್ತೇನೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯವೆಂದರೆ, ಹೌದು, ನಿಮಗೆ ಕುಟುಂಬ ಬೇಕು. ಆದರೆ ನಿಮಗೆ ಯಾವಾಗಲೂ ತಂಡವೂ ಬೇಕು' ಎಂದು 1983 ರ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಕಪಿಲ್ ದೇವ್ ಹೇಳಿದ್ದಾರೆ.

ಇತ್ತೀಚೆಗೆ ಮುಕ್ತಾಯಗೊಂಡ ಚಾಂಪಿಯನ್ಸ್ ಟ್ರೋಫಿಯ ಸಮಯದಲ್ಲಿ, ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಮತ್ತು ಮೊಹಮ್ಮದ್ ಶಮಿಯಂತಹ ಆಟಗಾರರು ದುಬೈನಲ್ಲಿ ತಮ್ಮ ಕುಟುಂಬಗಳೊಂದಿಗೆ ಇದ್ದರು. ಇವರು ತಂಡ ತಂಗಿದ್ದ ಹೋಟೆಲ್‌ನಲ್ಲಿ ತಂಗಿರಲಿಲ್ಲ. ಅವರ ವಾಸ್ತವ್ಯದ ವೆಚ್ಚವನ್ನು ಆಟಗಾರರೇ ಭರಿಸುತ್ತಿದ್ದರು.

'ನಮ್ಮ ಕಾಲದಲ್ಲಿ, ಪ್ರವಾಸದ ಮೊದಲಾರ್ಧ ಕ್ರಿಕೆಟ್ ಆಗಿರಬೇಕು ಮತ್ತು ದ್ವಿತೀಯಾರ್ಧದಲ್ಲಿ, ಕುಟುಂಬವು ಬಂದು ಅದನ್ನು ಆನಂದಿಸಬೇಕು ಎಂದು ನಾವು ನಮಗೆ ನಾವೇ ಹೇಳಿಕೊಳ್ಳುತ್ತಿದ್ದೆವು. ಕ್ರಿಕೆಟ್ ಮಂಡಳಿ ಹೇಳುತ್ತಿರಲಿಲ್ಲ. ಇವೆರಡು ಸಮತೋಲಿತವಾಗಿರಬೇಕು' ಎಂದು ಪ್ರಸ್ತುತ ವೃತ್ತಿಪರ ಗಾಲ್ಫ್ ಟೂರ್ ಆಫ್ ಇಂಡಿಯಾದ (ಪಿಜಿಟಿಐ) ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಕಪಿಲ್ ದೇವ್ ಹೇಳಿದರು.

ಐಪಿಎಲ್ 2025ನೇ ಆವೃತ್ತಿಗೂ ಮುನ್ನ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಇನೋವೇಶನ್ ಲ್ಯಾಬ್ ಇಂಡಿಯನ್ ಸ್ಪೋರ್ಟ್ಸ್ ಸಮಿಟ್‌ನಲ್ಲಿ ಮಾತನಾಡಿದ ವಿರಾಟ್, 'ಹೊರಗಿನ ಪ್ರಪಂಚದಲ್ಲಿ ತೀವ್ರವಾದ ಅಥವಾ ಸವಾಲಿನ ಅನುಭವಗಳನ್ನು ಎದುರಿಸಿದ ನಂತರ ಕುಟುಂಬದಿಂದ ಸಿಗುವ ಸಾಂತ್ವನ ಮತ್ತು ಭಾವನಾತ್ಮಕ ಬೆಂಬಲವು ಎಷ್ಟು ಮುಖ್ಯವಾಗಿರುತ್ತದೆ ಎಂಬುದನ್ನು ಜನರಿಗೆ ವಿವರಿಸುವುದು ಕಷ್ಟ. ಕಠಿಣ ಸಮಯದಲ್ಲಿ ಪ್ರೀತಿಪಾತ್ರರ ಜೊತೆ ಇರುವುದು ಧೈರ್ಯ ನೀಡುತ್ತದೆ' ಎಂದರು.

'ಪ್ರೀತಿಪಾತ್ರರ ಜೊತೆಗೆ ಇರುವುದರಿಂದ ಆಟಗಾರರಿಗೆ ಎಷ್ಟು ದೊಡ್ಡ ಪ್ರಮಾಣದ ಉಪಯೋಗವಾಗುತ್ತದೆ ಎಂಬುದರ ಬಗ್ಗೆ ಜನರಿಗೆ ತಿಳಿವಳಿಕೆ ಇದೆ ಎಂದು ನಾನು ಭಾವಿಸುವುದಿಲ್ಲ. ಆ ಬಗ್ಗೆ ನನಗೆ ಸಾಕಷ್ಟು ನಿರಾಶೆಯಾಗಿದೆ. ಪ್ರವಾಸದ ಸಮಯದಲ್ಲಿ ಕಳಪೆ ಪ್ರದರ್ಶನ ಮೂಡಿಬಂದರೆ ನಂತರ ಯಾವುದೇ ಆಟಗಾರನು 'ಒಂಟಿಯಾಗಿ ಕುಳಿತು ದುಃಖಿಸಲು' ಬಯಸುವುದಿಲ್ಲ' ಎಂದ ವಿರಾಟ್ ಕೊಹ್ಲಿ ಬಿಸಿಸಿಐ ನಿಯಮದ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದರು.

45 ದಿನಗಳಿಗಿಂತ ಹೆಚ್ಚಿನ ಪ್ರವಾಸದ ಮೊದಲ ಎರಡು ವಾರ ಮಾತ್ರ ಆಟಗಾರರ ಕುಟುಂಬದವರಿಗೆ ಅವರೊಂದಿಗೆ ಇರಲು ಅವಕಾಶವಿದೆ. ಕಡಿಮೆ ಪ್ರವಾಸಗಳಲ್ಲಿ, ಆಟಗಾರರು ತಮ್ಮ ಕುಟುಂಬಗಳೊಂದಿಗೆ ಒಂದು ವಾರದವರೆಗೆ ಇರಬಹುದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಸ್ಟಾಲಿನ್ ಶ್ಲಾಘಿಸಿದ ಭಗವಂತ್ ಮಾನ್, ಪಂಜಾಬ್ ನಲ್ಲೂ ಉಪಾಹಾರ ಯೋಜನೆ ಜಾರಿ ಬಗ್ಗೆ ಚಿಂತನೆ

Ragigudda Metro ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

SCROLL FOR NEXT