ಅಡಿಲೇಡ್: ಕ್ರಿಕೆಟ್ ಮೈದಾನದಲ್ಲೇ ಪಾಕಿಸ್ತಾನ ಮೂಲದ ಆಟಗಾರನೋರ್ವ ಕುಸಿದು ಸಾವನ್ನಪ್ಪಿರುವ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.
ಪಂದ್ಯದ ವೇಳೆ ಪಾಕಿಸ್ತಾನ ಮೂಲದ ಕ್ರಿಕೆಟಿಗ 40 ವರ್ಷದ ಜುನೈದ್ ಜಾಫರ್ ಖಾನ್ (Junaid Jaffer Khan) ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿರುವ (Adiled) ಕಾನ್ಕಾರ್ಡಿಯಾ ಕಾಲೇಜು ಓವಲ್ ಮೈದಾನದಲ್ಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆಟಗಾರ ಕುಸಿಯುತ್ತಲೇ ತಕ್ಷಣವೇ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಯಿತು ಮತ್ತು ವೈದ್ಯಕೀಯ ಸಿಬ್ಬಂದಿ ಸಿಪಿಆರ್ ಮಾಡಿದರು, ಆದರೆ ಜುನೈದ್ ಅವರನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದು ಹೇಳಲಾಗಿದೆ.
ಹೀಟ್ ಸ್ಟ್ರೋಕ್ ಕಾರಣ?
ಅಡಿಲೇಡ್’ ನ ಕಾಂಕಾರ್ಡಿಯಾ ಕಾಲೇಜಿನಲ್ಲಿ ಪ್ರತಿಸ್ಪರ್ಧಿ ಪ್ರಿನ್ಸ್ ಆಲ್ಫ್ರೆಡ್ ಓಲ್ಡ್ ಕೊಲಿಜಿಯನ್ಸ್ ವಿರುದ್ಧ 40 ಓವರ್ಗಳಲ್ಲಿ ಫೀಲ್ಡಿಂಗ್ ಮಾಡಿದ್ದ ಓಲ್ಡ್ ಕಾಂಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್ ಆಟಗಾರ ಜುನೈದ್ ಅಜೇಯ 16 ರನ್ ಗಳಿಸಿದ್ದರು. ಜುನೈದ್ ಜಾಫರ್ ಖಾನ್ ಮೊದಲ 40 ಓವರ್‌ಗಳು ಫೀಲ್ಡಿಂಗ್ ಮಾಡಿದ್ದರು ಮತ್ತು 7 ಓವರ್ ಬ್ಯಾಟಿಂಗ್ ಮಾಡಿದ್ದರು.
ಪಂದ್ಯದ ವೇಳೆ ಮೈದಾನದಲ್ಲಿ ತಾಪಮಾನ 41.7 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿತ್ತು. ಇದೇ ಸಂದರ್ಭದಲ್ಲಿ ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಂತೆಯೇ ಕ್ಲಬ್ ತಮ್ಮ ಆಟಗಾರನ ನಷ್ಟಕ್ಕೆ ದುಃಖ ವ್ಯಕ್ತಪಡಿಸಿ, ಅರೆವೈದ್ಯರ ಪ್ರಯತ್ನಗಳನ್ನು ಶ್ಲಾಘಿಸಿ ಹೇಳಿಕೆಯನ್ನು ಬಿಡುಗಡೆ ಮಾಡಿದೆ.
ರಂಜಾನ್ ಉಪವಾಸ ಮಾಡುತ್ತಿದ್ದ ಜುನೈದ್
ಅಂದಹಾಗೆ ಕ್ರಿಕೆಟಿಗ ಜುನೈದ್ ಅವರ ಸ್ನೇಹಿತರೊಬ್ಬರು ರಂಜಾನ್ ಉಪವಾಸದ ಕುರಿತು ಮಾಹಿತಿ ನೀಡಿದ್ದು, ಜುನೈದ್ ಅವರು ರಂಜಾನ್ ಉಪವಾಸ ಆಚರಿಸುತ್ತಿದ್ದರು. ಪಂದ್ಯದ ಸಂದರ್ಭದಲ್ಲಿ ಅವರು ನೀರು ಮಾತ್ರ ಕುಡಿಯುತ್ತಿದ್ದರು ಎಂದು ಹೇಳಿದ್ದಾರೆ.
ಇಸ್ಲಾಮಿಕ್ ಸೊಸೈಟಿಯ ಅಧ್ಯಕ್ಷರು ಜುನೈದ್ ಜಾಫರ್ ಖಾನ್ ಅವರ ಸಾವಿಗೆ ಯಾವುದೇ ಅಧಿಕೃತ ಕಾರಣವನ್ನು ನಿರ್ಧರಿಸಲಾಗಿಲ್ಲ ಮತ್ತು ವೈದ್ಯಕೀಯ ಘಟನೆಗೆ ಉಪವಾಸ ಕಾರಣ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಕ್ರಿಕೆಟ್ ನಿಯಮ ಏನು?
ಅಡಿಲೇಡ್ ಟರ್ಫ್ ಕ್ರಿಕೆಟ್ ಅಸೋಸಿಯೇಷನ್‌ನ ನಿಯಮಗಳು ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಮೀರಿದರೆ ಪಂದ್ಯಗಳನ್ನು ರದ್ದುಗೊಳಿಸಲಾಗುತ್ತದೆ ಮತ್ತು 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನಕ್ಕೆ ವಿಶೇಷ ಮುನ್ನೆಚ್ಚರಿಕೆಗಳನ್ನು ನೀಡಲಾಗುತ್ತದೆ ಎಂದು ಹೇಳುತ್ತದೆ.