ಮುಂಬೈ: ಐಪಿಎಲ್ 2025 ಕ್ರಿಕೆಟ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೂರ್ಯ ಕುಮಾರ್ ಯಾದವ್ (Suryakumar Yadav) ನಾಯಕರಾಗಿದ್ದಾರೆ.
ಅಚ್ಚರಿಯಾದರೂ ಸತ್ಯ... ಚೆನ್ನೈನಲ್ಲಿ ಇದೇ ಮಾರ್ಚ್ 23, ಭಾನುವಾರ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಐಪಿಎಲ್ 2025ರ ತಮ್ಮ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಲಿದ್ದಾರೆ. ಈ ಬಗ್ಗೆ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಬುಧವಾರ ದೃಢಪಡಿಸಿದ್ದಾರೆ.
ತಂಡದಲ್ಲಿ ರೋಹಿತ್ ಶರ್ಮಾ ಮತ್ತು ಹಾರ್ದಿಕ್ ಪಾಂಡ್ಯ ಇದ್ದರೂ ಸೂರ್ಯಕುಮಾರ್ ಯಾದವ್ ರನ್ನು ನಾಯಕನಾಗಿ ಆಯ್ಕೆ ಮಾಡಲು ಪ್ರಮುಖ ಕಾರಣವೊಂದಿದೆ.
ಕಳೆದ ಬಾರಿಯ ಅಂದರೆ ಐಪಿಎಲ್ 2024 ರ ಕೊನೆಯ ಪಂದ್ಯದಲ್ಲಿ ಅಂದಿನ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ನಿಷೇಧದ ಶಿಕ್ಷೆಗೆ ಗುರಿಯಾಗಿದ್ದರು. ನಿಧಾನಗತಿ ಓವರ್ ಅಪರಾಧಕ್ಕಾಗಿ ಪಾಂಡ್ಯಾ ಮೇಲೆ ಒಂದು ಪಂದ್ಯದ ನಿಷೇಧ ಹೇರಲಾಗಿತ್ತು. ಹೀಗಾಗಿ ಓವರ್ ರೇಟ್ ನಿಷೇಧಕ್ಕೊಳಗಾಗಿರುವ ಕಾರಣ ಹಾರ್ದಿಕ್ ಈ ಋತುವಿನ ಮೊದಲ ಪಂದ್ಯವನ್ನು ಕಳೆದುಕೊಳ್ಳಲಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರ ನಿಷೇಧದ ಬಗ್ಗೆ ಮುಂಬೈ ಇಂಡಿಯನ್ಸ್ ಕ್ಯಾಂಪ್ ಗೆ ಅಧಿಕೃತವಾಗಿ ತಿಳಿಸಲಾಗಿದೆ ಎಂದು ಮುಖ್ಯ ಕೋಚ್ ಮಹೇಲ ಜಯವರ್ಧನೆ ದೃಢಪಡಿಸಿದ್ದು, ಆಲ್‌ರೌಂಡರ್ ಚೆನ್ನೈನಲ್ಲಿ ನಡೆಯಲಿರುವ ಮೊದಲ ಪಂದ್ಯದಿಂದ ಹೊರಗುಳಿಯುತ್ತಾರೆ ಎಂದು ದೃಢಪಡಿಸಿದ್ದಾರೆ.
ಹಾರ್ದಿಕ್ ಅನುಪಸ್ಥಿತಿಯಲ್ಲಿ ಸೂರ್ಯಗೆ ತಂಡದ ಸಾರಥ್ಯ
ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಆಡದ ಕಾರಣ ಸೂರ್ಯ ಕುಮಾರ್ ಯಾದವ್ ಅವರು ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಾರೆ. ಈ ಬಗ್ಗೆ ಮಾತನಾಡಿರುವ ಹಾರ್ದಿಕ್ ಪಾಂಡ್ಯ, 'ನಾನು ಇಲ್ಲದಿರುವಾಗ, ಈ ಸ್ವರೂಪದಲ್ಲಿ ನಾಯಕತ್ವ ವಹಿಸಲು ಅವರು ಸೂಕ್ತ ಆಯ್ಕೆ. ಅವರು ಒಂದು ರೋಮಾಂಚಕಾರಿ ಆಯ್ಕೆಯೂ ಹೌದು” ಎಂದು ಹೇಳಿದ್ದಾರೆ.