ಶುಕ್ರವಾರ ಚೆಪಾಕ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ 2025ನೇ ಆವೃತ್ತಿಯ 8ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ಧ ಹೀನಾಯ ಸೋಲು ಕಂಡಿದೆ. ಸಿಎಸ್‌ಕೆ ತವರಿನಲ್ಲೇ 17 ವರ್ಷಗಳ ಬಳಿಕ ಆರ್‌ಸಿಬಿ 50 ರನ್‌ಗಳ ಭರ್ಜರಿ ಗೆಲುವು ಕಂಡಿದ್ದು, ಸಿಎಸ್‌ಕೆ ಅಭಿಮಾನಿಗಳನ್ನು ಕೆರಳಿಸಿದೆ.
ಆರ್‌ಸಿಬಿ ನೀಡಿದ್ದ 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಲೇ ಇತ್ತು. ಇಂಪ್ಯಾಕ್ಟ್ ಪ್ಲೇಯರ್ ಆಗಿ ಬಂದ ಶಿವಂ ದುಬೆ 13ನೇ ಓವರ್‌ನಲ್ಲಿ ಔಟಾದರು. ಆಗ ಧೋನಿ ಬ್ಯಾಟಿಂಗ್‌ಗೆ ಬರುತ್ತಾರೆ ಎಂಬ ನಿರೀಕ್ಷೆ ಇತ್ತು. ಆದರೆ, ರವೀಂದ್ರ ಜಡೇಜಾ ಮತ್ತು ಆರ್ ಅಶ್ವಿನ್ ಬಂದರು. 16 ನೇ ಓವರ್‌ನಲ್ಲಿ ಧೋನಿ ಕ್ರೀಸ್‌ಗೆ ಬರುವಷ್ಟರಲ್ಲಿ ಪಂದ್ಯ ಸಿಎಸ್‌ಕೆ ಕೈಯಿಂದ ಬಹುತೇಕ ಜಾರಿತ್ತು.
ಟೀಂ ಇಂಡಿಯಾದ ಮಾಜಿ ನಾಯಕ 16 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗುಳಿದರು. ಆದರೆ, ತಂಡವನ್ನು ಸೋಲಿನಿಂದ ತಪ್ಪಿಸಲು ಸಾಧ್ಯವಾಗಲಿಲ್ಲ. ಇಷ್ಟು ದಿನ ಧೋನಿ ಬ್ಯಾಟಿಂಗ್ ಮಾಡಲು ಬಂದರೆ ಸಾಕು ಎಂದು ಕಾಯುತ್ತಿದ್ದ ಅಭಿಮಾನಿಗಳು ಧೋನಿ ಬಂದರು ಅಷ್ಟೇನು ಸಂತೋಷಪಡಲಿಲ್ಲ. ಧೋನಿ ನಿಧಾನವಾಗಿ ಬ್ಯಾಟಿಂಗ್ ಮಾಡಲು ಬಂದಿದ್ದಕ್ಕೆ ಕೆರಳಿರುವ ಅಭಿಮಾನಿಗಳು, ಸಾಮಾಜಿಕ ಮಾಧ್ಯಮಗಳಲ್ಲಿ ಧೋನಿ ವಿರುದ್ಧ ಕಿಡಿಕಾರಿದ್ದಾರೆ.
ಟಾಸ್ ಗೆದ್ದ ಸಿಎಸ್‌ಕೆ ತಂಡದ ನಾಯಕ ರುತುರಾಜ್ ಗಾಯಕ್ವಾಡ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 196 ರನ್ ಗಳಿಸಿತು. 197 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸಿಎಸ್‌ಕೆ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ ಕೇವಲ 146 ರನ್‌ಗಳಿಸಲಷ್ಟೇ ಶಕ್ತವಾಯಿತು. 2008ರ ನಂತರ ಚೆಪಾಕ್‌ನಲ್ಲಿ ಆರ್‌ಸಿಬಿ ವಿರುದ್ಧದ ಮೊದಲ ಸೋಲು ಇದಾಗಿದೆ.
ಸಿಎಸ್‌ಕೆ ಪರ ಆರಂಭಿಕ ಆಟಗಾರ ರಚಿನ್ ರವೀಂದ್ರ 41 ರನ್ ಗಳಿಸಿ ಗರಿಷ್ಠ ಸ್ಕೋರ್ ಗಳಿಸಿದರೆ, ಮಾಜಿ ನಾಯಕ ಎಂಎಸ್ ಧೋನಿ 16 ಎಸೆತಗಳಲ್ಲಿ 30 ರನ್ ಗಳಿಸಿ ಅಜೇಯರಾಗಿ ಉಳಿದರು.
ಜೋಶ್ ಹೇಜಲ್‌ವುಡ್ (3/21), ಯಶ್ ದಯಾಳ್ (2/18) ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ (2/28) ಆರ್‌ಸಿಬಿ ಪರ ಪ್ರಮುಖ ವಿಕೆಟ್ ಪಡೆದ ಆಟಗಾರರಾದರು.
ಆರ್‌ಸಿಬಿ ಪರ ನಾಯಕ ರಜತ್ ಪಾಟೀದಾರ್ 32 ಎಸೆತಗಳಲ್ಲಿ 51 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು. ಆರಂಭಿಕರಾದ ಫಿಲ್ ಸಾಲ್ಟ್ (16 ಎಸೆತಗಳಲ್ಲಿ 32), ವಿರಾಟ್ ಕೊಹ್ಲಿ (30 ಎಸೆತಗಳಲ್ಲಿ 31) ಮತ್ತು ಟಿಮ್ ಡೇವಿಡ್ (8 ಎಸೆತಗಳಲ್ಲಿ ಔಟಾಗದೆ 22) ಗಮನಾರ್ಹ ಕೊಡುಗೆ ನೀಡಿದರು.
ಸಿಎಸ್‌ಕೆ ಪರ ನೂರ್ ಅಹ್ಮದ್ (3/36), ಮತೀಷ ಪತಿರಾಣ (2/36), ಅನುಭವಿ ರವಿಚಂದ್ರನ್ ಅಶ್ವಿನ್ (1/22) ಮತ್ತು ವೇಗಿ ಖಲೀಲ್ ಅಹ್ಮದ್ (1/28) ವಿಕೆಟ್ ಪಡೆದರು.