ಮಂಗಳವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ವಿರಾಟ್ ಕೊಹ್ಲಿ ಮತ್ತೊಂದು ಉತ್ತಮ ಪ್ರದರ್ಶನ ನೀಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್ ನೀಡಿದ್ದ 228 ರನ್ ಗುರಿ ಬೆನ್ನಟ್ಟಿದ ಆರ್‌ಸಿಬಿ ದಂತಕಥೆ ಮತ್ತೊಂದು ಅರ್ಧಶತಕ ಸಿಡಿಸಿ ತಮ್ಮ ತಂಡವು ಕ್ವಾಲಿಫೈಯರ್ 1ಗೆ ಪ್ರವೇಶಿಸುವ ಅವಕಾಶಗಳನ್ನು ಹೆಚ್ಚಿಸಿದರು. ತಮ್ಮ ಅದ್ಭುತ ಬ್ಯಾಟಿಂಗ್ ಮೂಲಕ, ಕೊಹ್ಲಿ ಆರ್‌ಸಿಬಿ ಪರ 9,000 ರನ್‌ಗಳನ್ನು ಪೂರೈಸಿದರು. ಟಿ20 ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
36 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ ಐಪಿಎಲ್ ಪಂದ್ಯಾವಳಿ ಆರಂಭದಿಂದಲೂ ಆರ್‌ಸಿಬಿ ಜೊತೆಗಿದ್ದಾರೆ. ಆರ್‌ಸಿಬಿ ತಂಡದ ಪರ 9,000 ರನ್‌ಗಳನ್ನು ಗಳಿಸಿದ್ದಾರೆ. ವಿರಾಟ್ ತಮ್ಮ ಇಡೀ ವೃತ್ತಿಜೀವನದುದ್ದಕ್ಕೂ ಆರ್‌ಸಿಬಿ ಪರ ಆಡುತ್ತಿದ್ದಾರೆ ಮತ್ತು ಇತಿಹಾಸ ಪುಸ್ತಕಗಳಲ್ಲಿ ತಮ್ಮ ಹೆಸರನ್ನು ಬರೆದಿದ್ದಾರೆ. ರೋಹಿತ್ ಶರ್ಮಾ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್ ಪರವಾಗಿ ಅತಿಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ಈ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ರೇಸ್‌ನಲ್ಲಿದ್ದು, ಲಕ್ನೋದಲ್ಲಿ ನಡೆದ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ 54 ರನ್ ಗಳಿಸುವ ಮೂಲಕ ಐಪಿಎಲ್ 2025 ರಲ್ಲಿ 600 ರನ್ ಗಳಿಸಿದ್ದಾರೆ. ವಿರಾಟ್ ಕೊಹ್ಲಿ 5 ಐಪಿಎಲ್ ಆವೃತ್ತಿಗಳಲ್ಲಿ 600ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
ಐಪಿಎಲ್ ಆವೃತ್ತಿಯಲ್ಲಿ 600ಕ್ಕೂ ಹೆಚ್ಚು ರನ್ ಗಳಿಸಿದವರು
ವಿರಾಟ್ ಕೊಹ್ಲಿ - 5 (2013, 2016, 2023, 2024, 2025)
ಕೆಎಲ್ ರಾಹುಲ್ - 4 (2018, 2020, 2021, 2022)
ಕ್ರಿಸ್ ಗೇಲ್ - 3 (2011, 2012, 2013)
ಡೇವಿಡ್ ವಾರ್ನರ್- 3 (2016, 2017, 2019)
ವಿರಾಟ್ ಕೊಹ್ಲಿ ಸತತ 3ನೇ ಆವೃತ್ತಿಯಲ್ಲಿ 600 ಅಥವಾ ಅದಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ. ಕಳೆದೆರಡು ಆವೃತ್ತಿಗಳಲ್ಲಿಯೂ ಅವರು 600 ರನ್ ಕಲೆಹಾಕಿದ್ದರು. ಕ್ರಿಸ್ ಗೇಲ್ ಮತ್ತು ಕೆಎಲ್ ರಾಹುಲ್ ಕೂಡ ಸತತ 3 ಆವೃತ್ತಿಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಕೊಹ್ಲಿಯಂತೆ ಗೇಲ್ ಅವರು ಕೂಡ ಆರ್‌ಸಿಬಿ ಪರವಾಗಿಯೇ ರನ್ ಕಲೆಹಾಕಿದ್ದಾರೆ.
ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ
ಲಕ್ನೋ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಗಳಿಸಿದ ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ಬರೆದರು. 30 ಎಸೆತಗಳಲ್ಲಿ 10 ಬೌಂಡರಿ ಸಹಿತ 54 ರನ್ ಗಳಿಸಿದ ಅವರು ಐಪಿಎಲ್‌ನ 63ನೇ ಅರ್ಧಶತಕ ಬಾರಿಸಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಅರ್ಧಶತಕ ಬಾರಿಸಿದ ದಾಖಲೆ ಈಗ ವಿರಾಟ್ ಕೊಹ್ಲಿ ಅವರ ಹೆಸರಿನಲ್ಲಿದೆ. ಡೇವಿಡ್ ವಾರ್ನರ್ ಐಪಿಎಲ್‌ನಲ್ಲಿ 62 ಅರ್ಧಶತಕ ಗಳಿಸಿದ್ದು, ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.