ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯ ಲೋಕ ಕಲ್ಯಾಣ್ ಮಾರ್ಗದಲ್ಲಿರುವ ತಮ್ಮ ನಿವಾಸದಲ್ಲಿ ಮಹಿಳಾ ಕ್ರಿಕೆಟ್ ವಿಶ್ವಕಪ್ ಚಾಂಪಿಯನ್‌ಗಳಿಗೆ ನಿನ್ನೆ ಆತಿಥ್ಯ ನೀಡಿದ್ದರು.
ಕ್ಯಾಪ್ಟನ್ ಹರ್ಮನ್‌ಪ್ರೀತ್ ಕೌರ್ 2017 ರಲ್ಲಿ ಪ್ರಧಾನಿಯನ್ನು ಭೇಟಿಯಾಗಿದ್ದನ್ನು ನೆನಪಿಸಿಕೊಂಡರು. ಆಗ ಅವರು ಟ್ರೋಫಿ ಇಲ್ಲದೆ ಅವರನ್ನು ಭೇಟಿಯಾಗಿದ್ದರು. ಈಗ ಅವರು ಟ್ರೋಫಿಯೊಂದಿಗೆ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿರುವುದು ವಿಶೇಷವಾಗಿದೆ.
ಆಟಗಾರ್ತಿಯರು ಪ್ರಧಾನಿಯವರಿಗೆ ಪ್ರಶ್ನೆಗಳನ್ನು ಕೇಳುತ್ತಿದ್ದರು. ಈ ವೇಳೆ ಉನ್ನತ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್ಲೀನ್ ಕೌರ್ ಡಿಯೋಲ್ ಅವರು ಪ್ರಧಾನಿಗೆ ಹಾಸ್ಯವಾಗಿ ನಿಮ್ಮ ಚರ್ಮ ಯಾವಾಗಲೂ ಹೊಳೆಯುತ್ತಿರುತ್ತದೆ, ಅದರ ರಹಸ್ಯವೇನು, ನಿಮ್ಮ ಸ್ಕಿನ್ ಕೇರ್ ದಿನಚರಿ ಏನು ಎಂದು ಕೇಳಿದರು.
ಆಗ ಎಲ್ಲರೂ ನಗುವಿನ ಕಡಲಲ್ಲಿ ತೇಲಿದರು. ಪ್ರಧಾನಿಯವರು ಸಹ ನಗುತ್ತಾ, "ನಾನು ಆ ಬಗ್ಗೆ ಎಂದಿಗೂ ಯೋಚಿಸಲಿಲ್ಲ" ಎಂದರು.
ಆಗ ಆಲ್‌ರೌಂಡರ್ ಸ್ನೇಹ್ ರಾಣಾ, ದೇಶವಾಸಿಗಳ ಪ್ರೀತಿಯೇ ಪ್ರಧಾನಿಯವರನ್ನು ಹೊಳೆಯುವಂತೆ ಮಾಡುತ್ತದೆ ಎಂದು ಹೇಳಿದಾಗ, ಪ್ರಧಾನಿ ಮೋದಿ, ಖಂಡಿತ ಅದು ಹೌದು. ನನ್ನ ಶಕ್ತಿಯ ದೊಡ್ಡ ಮೂಲವಾಗಿದೆ. ನಾನು ಕಳೆದ 25 ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿದ್ದೇನೆ. ಜನರ ಆಶೀರ್ವಾದ ನನ್ನ ಮೇಲೆ ಪರಿಣಾಮ ಬೀರಿದೆ ಎಂದರು.
ಸಂವಾದದ ಸಮಯದಲ್ಲಿ, ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ 2017 ರಿಂದ 2025 ರವರೆಗಿನ ಕ್ರಿಕೆಟ್ ಪಯಣ ನೆನಪಿಸಿಕೊಂಡರು.
'2017 ರಲ್ಲಿ, ನಮಗೆ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ'
"ನಾವು 2017 ರಲ್ಲಿ ಕೊನೆಯ ಬಾರಿಗೆ ನಿಮ್ಮನ್ನು ಭೇಟಿಯಾದಾಗ, ನಮಗೆ ಟ್ರೋಫಿ ಪಡೆಯಲು ಸಾಧ್ಯವಾಗಲಿಲ್ಲ ಎಂದು ನಮಗೆ ನೆನಪಿದೆ. ಆದರೆ ಈ ಬಾರಿ ನಾವು ವಿಶ್ವ ಚಾಂಪಿಯನ್‌ಗಳಾಗಿದ್ದೇವೆ ಎಂದು ನಮಗೆ ನಿಜವಾಗಿಯೂ ಹೆಮ್ಮೆಯಿದೆ. ನಿಮ್ಮನ್ನು ಮತ್ತೆ ಭೇಟಿಯಾಗುವುದು ಗೌರವ, ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡುವುದನ್ನು ಮುಂದುವರಿಸಲು ನಾವು ಆಶಿಸುತ್ತೇವೆ" ಎಂದು ಹರ್ಮನ್‌ಪ್ರೀತ್ ಹೇಳಿದರು.
ಪ್ರಧಾನಿ ಮೋದಿ ಆಟಗಾರರ ದೃಢನಿಶ್ಚಯ, ಏಕತೆ ಮತ್ತು ಭಾರತೀಯ ಕ್ರಿಕೆಟ್‌ನ ಬೆಳೆಯುತ್ತಿರುವ ಪರಂಪರೆಗೆ ನೀಡಿದ ಕೊಡುಗೆಗಾಗಿ ಅವರನ್ನು ಅಭಿನಂದಿಸಿದರು.