ಮುಂಬೈ: ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ತಂಡದ ಭಾಗವಾಗಿದ್ದೂ ಪದಕ ವಂಚಿತರಾಗಿದ್ದ ಸ್ಟಾರ್ ಬ್ಯಾಟರ್ ಪ್ರತಿಕಾ ರಾವಲ್ ಗೆ ಕೊನೆಗೂ ಐಸಿಸಿ ಪದಕ ದೊರೆಯುತ್ತಿದೆ.
ಈ ಹಿಂದೆ ಬಾಂಗ್ಲಾದೇಶ ವಿರುದ್ಧದ ಭಾರತದ ಕೊನೆಯ ಲೀಗ್ ಪಂದ್ಯದ ಸಮಯದಲ್ಲಿ ಪಾದದ ಗಾಯದಿಂದಾಗಿ ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಹೀಗಾಗಿ ಅವರ ಸ್ಥಾನಕ್ಕೆ ಶಫಾಲಿ ವರ್ಮ ಅವರನ್ನು ಆಯ್ಕೆ ಮಾಡಲಾಗಿತ್ತು.
ಆದರೆ ಅದಾಗಲೇ ಪ್ರತೀಕಾ ರಾವಲ್ ಟೂರ್ನಿಯಲ್ಲಿ ಭಾರತ ಪರ 2ನೇ ಸರ್ವಾಧಿಕ ರನ್ (308) ಗಳಿಸಿದ್ದರು. ಆದಾಗ್ಯೂ ಅವರಿಗೆ ಫೈನಲ್ ಪಂದ್ಯದ ಬಳಿಕ ಪದಕ ನೀಡಲಾಗಿರಲಿಲ್ಲ. ಪ್ರತಿಕಾಗೆ ವಿಶ್ವಕಪ್ ಗೆಲುವಿನ ಪದಕ ದೊರೆಯದಿದ್ದ ಬಗ್ಗೆ ಹಲವು ಚರ್ಚೆಗಳು ನಡೆದಿದ್ದವು. ಐಸಿಸಿ ನಿಯಮ ಬಲಾವಣೆ ಮಾಡಬೇಕೆಂಬ ಆಗ್ರಹ ಕೇಳಿಬಂದಿತ್ತು.
ಇದೀಗ ಅವರಿಗೆ ಪದಕ ನೀಡುವುದು ಖಚಿತವಾಗಿದೆ. ಐಸಿಸಿ ಅಧ್ಯಕ್ಷ ಜಯ್ ಶಾ ವೈಯಕ್ತಿಕವಾಗಿ ತನಗೆ ಪದಕ ದೊರೆಯುವಂತೆ ಖಚಿತಪಡಿಸಿಕೊಂಡಿದ್ದಾರೆ ಎಂದು ರಾವಲ್ ಬಹಿರಂಗಪಡಿಸಿದ್ದಾರೆ. ಭಾರತದ ಆರಂಭಿಕ ಆಟಗಾರ್ತಿ ಪ್ರತೀಕಾ ರಾವಲ್(Pratika Rawal) ಅವರು ಐಸಿಸಿ ಮಹಿಳಾ ವಿಶ್ವಕಪ್ 2025 (Women’s ODI World Cup 2025) ವಿಜೇತರ ಪದಕವನ್ನು ಸ್ವೀಕರಿಸುವುದಾಗಿ ದೃಢಪಡಿಸಿದ್ದಾರೆ.
ಪದಕ ಏಕೆ ನೀಡಿರಲಿಲ್ಲ?
ಕಳೆದ ಭಾನುವಾರ ನಡೆದ ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾವನ್ನು ಸೋಲಿಸುವ ಮೂಲಕ ಭಾರತ ತನ್ನ ಚೊಚ್ಚಲ ಐಸಿಸಿ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಎತ್ತಿ ಹಿಡಿದಿತ್ತು. ರಾವಲ್ ಅವರ ಬದಲಿ ಆಟಗಾರ್ತಿ ಶಫಾಲಿ ವರ್ಮಾ ಸೇರಿದಂತೆ ವಿಜೇತ ತಂಡದ ಎಲ್ಲಾ 15 ಸದಸ್ಯರಿಗೂ ಪಂದ್ಯದ ನಂತರದ ಸಮಾರಂಭದಲ್ಲಿ ಪದಕಗಳನ್ನು ನೀಡಲಾಗಿತ್ತು.
ಐಸಿಸಿ ನಿಯಮದ ಪ್ರಕಾರ ಟೂರ್ನಿಯಿಂದ ಹೊರಬಿದ್ದರೆ ವಿನ್ನರ್ಸ್ ಮೆಡಲ್ ಪಡೆಯಲು ಅರ್ಹರಲ್ಲ. ಹೀಗಾಗಿ ಪ್ರತೀಕಾ ರಾವಲ್‌ಗೆ ಪದಕ ನೀಡಿರಲಿಲ್ಲ. ಆದರೆ ಭಾರತ ತಂಡದ ಪ್ರಶಸ್ತಿ ಗೆಲುವಿನಲ್ಲಿ ಪ್ರತಿಕಾ ಪಾತ್ರವೂ ಪ್ರಮುಖವಾಗಿತ್ತು. ಹೀಗಾಗಿ ಅವರಿಗೆ ಪದಕ ನೀಡಬೇಕು ಎಂದು ಹಲವರು ಆಗ್ರಹಿಸಿದ್ದರು.
ಪ್ರತೀಕಾ ಧರಿಸಿದ್ದ ಪದಕ ಯಾವುದು?
ಇನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗಿನ ಭಾರತೀಯ ತಂಡದ ಭೇಟಿಯ ಸಂದರ್ಭದಲ್ಲಿ ಪ್ರತೀಕಾ ರಾವಲ್ ಧರಿಸಿದ್ದ ಪದಕ ಬೆಂಬಲ ಸಿಬ್ಬಂದಿಯೊಬ್ಬರು ಅವರಿಗೆ ನೀಡಿದ ಪದಕವಾಗಿದೆ ಎಂದು ಹೇಳಲಾಗಿದೆ.
ಪ್ರತೀಕಾ ಹೇಳಿದ್ದೇನು?
ಪ್ರತಿಕಾಗೆ ಪದಕ ಪಡೆಯಲು ವ್ಯವಸ್ಥೆ ಮಾಡಬೇಕೆಂದು ಜಯ್ ಶಾ ನಮ್ಮ ಮ್ಯಾನೇಜರ್‌ಗೆ ಸಂದೇಶ ಕಳುಹಿಸಿದ್ದಾರೆ" ಎಂದು ರಾವಲ್ ತಿಳಿಸಿದ್ದರು. "ಹಾಗಾಗಿ, ಅಂತಿಮವಾಗಿ, ನನ್ನದೇ ಆದ ಪದಕ ಈಗ ನನ್ನ ಬಳಿ ಇದೆ. ನಾನು ಮೊದಲ ಬಾರಿಗೆ ಅದನ್ನು ತೆರೆದಾಗ (ಸಹಾಯಕ ಸಿಬ್ಬಂದಿ ಅವಳಿಗೆ ನೀಡಿದ ಪದಕ) ಮತ್ತು ಅದರ ಕಡೆಗೆ ನೋಡಿದಾಗ, ನಾನು ಬಹುತೇಕ ಕಣ್ಣೀರು ಹಾಕಿದ್ದೆ.
ಐಸಿಸಿಯಿಂದ ಪದಕ ಕಳುಹಿಸಬಹುದೇ ಎಂದು ಕೇಳುತ್ತಿರುವುದಾಗಿ ಜಯ್ ಶಾ ನಮಗೆ ತಿಳಿಸಿದರು. ಆದ್ದರಿಂದ ಆ ಪದಕ ನನಗೆ ತಲುಪಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಸಹಾಯಕ ಸಿಬ್ಬಂದಿಯೊಬ್ಬರು ನನಗೆ ಈಗ ಧರಿಸಲು ತಮ್ಮ ಪದಕವನ್ನು ನೀಡಿದರು. ನನ್ನದೇ ಆದ ಪದಕವೂ ಬರುತ್ತಿದೆ" ಎಂದು ಪ್ರತೀಕಾ ರವಾಲ್ ಹೇಳಿದರು.