ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಟೀಂ ಇಂಡಿಯಾದ ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಫ್ರಾಂಚೈಸಿ ಯುಪಿ ವಾರಿಯರ್ಜ್ (UPW) ಅಚ್ಚರಿಯ ರೀತಿಯಲ್ಲಿ ಬಿಡುಗಡೆ ಮಾಡಿದ್ದು, ಕ್ರಿಕೆಟ್ ಲೋಕದ ತಜ್ಞರನ್ನೇ ದಂಗುಬಡಿಸಿದೆ.
ಆಲ್-ರೌಂಡ್ ಕೌಶಲ್ಯದಿಂದಾಗಿ, ವಿಶ್ವಕಪ್‌ನಲ್ಲಿ ಭಾರತದ ವಿಜಯದ ಅಭಿಯಾನದಲ್ಲಿ ದೀಪ್ತಿ ಪ್ರಮುಖ ಪಾತ್ರ ವಹಿಸಿದ್ದರು. ಅವರು ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ್ತಿಯಾಗಿ ಹೊರಹೊಮ್ಮಿದರು. ಜೊತೆಗೆ ಕೆಲವು ಪ್ರಮುಖ ಪಂದ್ಯಗಳಲ್ಲಿ ಬ್ಯಾಟಿಂಗ್‌ನಲ್ಲಿ ನಿರ್ಣಾಯಕ ರನ್‌ಗಳನ್ನು ಸಹ ನೀಡಿದರು. ಆದರೂ, ಮುಂಬರುವ ಡಬ್ಲ್ಯುಪಿಎಲ್ ಆವೃತ್ತಿಗೆ ಮುಂಚಿತವಾಗಿ ಯುಪಿ ವಾರಿಯರ್ಸ್ ಅವರನ್ನು ರಿಲೀಸ್ ಮಾಡಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಫೈನಲ್‌ನಲ್ಲಿ ದೀಪ್ತಿ ತಮ್ಮ ಅತ್ಯುತ್ತಮ ಪ್ರದರ್ಶನ ನೀಡಿದರು. ಬೌಲಿಂಗ್‌ನಲ್ಲಿ 5/39 ಮತ್ತು ಬ್ಯಾಟಿಂಗ್‌ನಲ್ಲಿ 58 ರನ್ ಗಳಿಸಿದರು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅವರ ಅತ್ಯುತ್ತಮ ಪ್ರದರ್ಶನಕ್ಕೆ ಅವರಿಗೆ ಅತ್ಯುನ್ನತ ವೈಯಕ್ತಿಕ ಪ್ರಶಸ್ತಿಯನ್ನು ತಂದುಕೊಟ್ಟಿತು.
ಯುಪಿ ವಾರಿಯರ್ಸ್ ತಮ್ಮ ರಿಲೀಸ್ ಮತ್ತು ರಿಟೆನ್ಶನ್ ಆಟಗಾರರ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದ್ದಂತೆ, ದೀಪ್ತಿ ಅವರನ್ನು ಕೈಬಿಟ್ಟಿರುವುನ್ನು ಕಂಡು ಇಡೀ ಕ್ರಿಕೆಟ್ ಜಗತ್ತು ದಿಗ್ಭ್ರಮೆಗೊಂಡಿತು.
'ಒಂದು ತಂಡದಲ್ಲಿ ಅನೇಕ ಪ್ರತಿಭಾನ್ವಿತ ಮತ್ತು ಅನುಭವಿ ಆಟಗಾರರು ಇರುವಾಗ, ಯಾವ ಆಟಗಾರರನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸುವುದು ಕಷ್ಟ. ಆದಾಗ್ಯೂ, ಫ್ರಾಂಚೈಸಿಯು ಹಳೆಯ ಆಟಗಾರರನ್ನು ಉಳಿಸಿಕೊಳ್ಳುವ ಬದಲು, ಹೊಸ ಆಟಗಾರರೊಂದಿಗೆ ಆವೃತ್ತಿಯನ್ನು ಪ್ರಾರಂಭಿಸಲು ಬಯಸಿದೆ' ಎಂದು ಯುಪಿ ವಾರಿಯರ್ಸ್ ತರಬೇತುದಾರ ಅಭಿಷೇಕ್ ನಾಯರ್ ಜಿಯೋಸ್ಟಾರ್ ಜೊತೆಗಿನ ಚಾಟ್‌ನಲ್ಲಿ ಹೇಳಿದರು.
'ಚಾಂಪಿಯನ್‌ಶಿಪ್ ಗೆಲ್ಲಬಲ್ಲ ಆಟಗಾರರನ್ನು ಮಾತ್ರವಲ್ಲದೆ, ಹರಾಜಿನಲ್ಲಿ ಈ ಆಟಗಾರರನ್ನು ಮರಳಿ ಪಡೆಯಲು ಸಾಧ್ಯವಾಗುವಂತೆ ಸಾಧ್ಯವಾದಷ್ಟು ಹಣವನ್ನು ನಮ್ಮ ಪರ್ಸ್‌ನಲ್ಲಿ ಇಟ್ಟುಕೊಳ್ಳುತ್ತೇವೆ' ಎಂದು ನಾಯರ್ ಹೇಳಿದರು.
'ಈ ರೀತಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಂದಿಗೂ ಸುಲಭವಲ್ಲ. ಸರಿ ಅಥವಾ ತಪ್ಪು ಏನಾಗಿದ್ದರೂ, ನಮ್ಮ ನಿರ್ಧಾರದ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ. ಪೂರ್ಣ ಪರ್ಸ್‌ನೊಂದಿಗೆ ಹೋಗಿ, ಸಾಧ್ಯವಾದಷ್ಟು ಉತ್ತಮ ತಂಡವನ್ನು ರಚಿಸಲು ಪ್ರಯತ್ನಿಸುವುದು ನಮ್ಮ ಆಲೋಚನಾ ಪ್ರಕ್ರಿಯೆಯಾಗಿದೆ' ಎಂದು ನಾಯರ್ ವಿವರಿಸಿದರು.
28 ವರ್ಷದ ಆಲ್‌ರೌಂಡರ್ 2024ರ WPL ಆವೃತ್ತಿಯಲ್ಲಿ ಪ್ಲೇಯರ್ ಆಫ್ ದ ಟೂರ್ನಮೆಂಟ್ ಆಗಿದ್ದರು. ಮುಂಬರುವ ಆವೃತ್ತಿಗಾಗಿ ಫ್ರಾಂಚೈಸಿಯು ಮಾಜಿ ಅಂಡರ್-19 ವಿಶ್ವಕಪ್ ವಿಜೇತೆ ಶ್ವೇತಾ ಸೆಹ್ರಾವತ್ ಅವರನ್ನು ಮಾತ್ರ ಉಳಿಸಿಕೊಳ್ಳಲು ನಿರ್ಧರಿಸಿತು.