ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಶ್ರೀಲಂಕಾ ಮತ್ತು ಜಿಂಬಾಬ್ವೆ ವಿರುದ್ಧದ ಮುಂಬರುವ ಟಿ20ಐ ತ್ರಿಕೋನ ಸರಣಿಯ ದಿನಾಂಕಗಳನ್ನು ಬದಲಿಸಿದೆ. ಶ್ರೀಲಂಕಾ ಮತ್ತು ಜಿಂಬಾಬ್ವೆ ಒಳಗೊಂಡ ತ್ರಿಕೋನ ಸರಣಿಯು ನವೆಂಬರ್ 17ರ ಬದಲಿಗೆ ನವೆಂಬರ್ 18 ರಿಂದ ಪ್ರಾರಂಭವಾಗಲಿದ್ದು, ಇಸ್ಲಾಮಾಬಾದ್‌ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯ ನಂತರ ಸರಣಿಯ ಎಲ್ಲ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೂ ಮೊದಲು, ನವೆಂಬರ್ 29 ರಂದು ನಡೆಯಬೇಕಿದ್ದ ಫೈನಲ್ ಸೇರಿದಂತೆ ಐದು ಪಂದ್ಯಗಳನ್ನು ಲಾಹೋರ್‌ನಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಶ್ರೀಲಂಕಾ ಕ್ರಿಕೆಟ್ (SLC) ಮತ್ತು ಜಿಂಬಾಬ್ವೆ ಕ್ರಿಕೆಟ್ (ZC) ಜೊತೆ ಚರ್ಚೆ ನಡೆಸಿದ ನಂತರ ಸ್ಥಳ ಮತ್ತು ದಿನಾಂಕ ಬದಲಿಸುವ ನಿರ್ಧಾರವನ್ನು PCB ತೆಗೆದುಕೊಂಡಿದೆ.
'ಕಾರ್ಯನಿರ್ವಹಣೆ ಮತ್ತು ಪಂದ್ಯದ ಅವಶ್ಯಕತೆಗಳನ್ನು ಪೂರೈಸಲು ಪರಸ್ಪರ ಚರ್ಚೆಗಳ ನಂತರ, ಶ್ರೀಲಂಕಾ ಕ್ರಿಕೆಟ್ (SLC) ಮತ್ತು ಜಿಂಬಾಬ್ವೆ ಕ್ರಿಕೆಟ್ (ZC) ಜೊತೆ ಸಮಾಲೋಚಿಸಿ ವೇಳಾಪಟ್ಟಿಯನ್ನು ಪರಿಷ್ಕರಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ' ಎಂದು ಪಿಸಿಬಿ ಹೇಳಿಕೆಯಲ್ಲಿ ತಿಳಿಸಿದೆ.
ಗುರುವಾರ ಮುಂಜಾನೆ ಬಿಗಿ ಭದ್ರತೆಯ ನಡುವೆ ಜಿಂಬಾಬ್ವೆ ಕ್ರಿಕೆಟ್ ತಂಡ ಇಸ್ಲಾಮಾಬಾದ್‌ಗೆ ಆಗಮಿಸಿತು.
ಶ್ರೀಲಂಕಾ ಕ್ರಿಕೆಟ್ ತಂಡವು ಪಾಕಿಸ್ತಾನದ ದ್ವಿಪಕ್ಷೀಯ ಪ್ರವಾಸವನ್ನು ಮುಂದುವರಿಸಲಿದ್ದು, ಯಾವುದೇ ಆಟಗಾರ ಅಥವಾ ಅಧಿಕಾರಿ ಸ್ವದೇಶಕ್ಕೆ ಮರಳುವ ಯೋಜನೆ ಹೊಂದಿಲ್ಲ ಎಂದು ತಂಡದ ವ್ಯವಸ್ಥಾಪಕ ಮಹಿಂದಾ ಹಲಂಗೋಡ ತಿಳಿಸಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 12 ಜನರು ಸಾವಿಗೀಡಾಗಿ, ಹಲವರು ಗಾಯಗೊಂಡ ನಂತರ ಎಂಟು ಆಟಗಾರರು ಪ್ರವಾಸವನ್ನು ಮುಂದುವರಿಸುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಆದರೆ, ಎಸ್‌ಎಲ್‌ಸಿ ಅವರೊಂದಿಗೆ ಮಾತನಾಡಿ ಭರವಸೆ ನೀಡಿದ ನಂತರ, ಅವರು ಇಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.
'ಯಾವುದೇ ಆಟಗಾರ ಶ್ರೀಲಂಕಾಕ್ಕೆ ಹಿಂತಿರುಗುವುದಿಲ್ಲ. ನಾನು ಅದನ್ನು ದೃಢೀಕರಿಸಬಲ್ಲೆ' ಎಂದು ಹಲಂಗೋಡ ಹೇಳಿದರು.
ಈ ಬೆಳವಣಿಗೆಗಳ ಬಗ್ಗೆ ತಿಳಿದಿರುವ ವಿಶ್ವಾಸಾರ್ಹ ಮೂಲವೊಂದು, ಪಾಕಿಸ್ತಾನದಲ್ಲಿ ಸುರಕ್ಷಿತವಾಗಿರುತ್ತಾರೆ ಮತ್ತು ಸರಣಿಯನ್ನು ಮುಂದುವರಿಸಬೇಕು ಎಂದು ಆಟಗಾರರ ಮನವೊಲಿಸಲು ತೆರೆಮರೆಯಲ್ಲಿ ಭಾರಿ ಪ್ರಯತ್ನಗಳು ನಡೆದಿವೆ ಎಂದು ತಿಳಿಸಿದೆ.
'ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ಶಮ್ಮಿ ಸಿಲ್ವಾ ಮತ್ತು ಪಾಕಿಸ್ತಾನದಲ್ಲಿರುವ ಶ್ರೀಲಂಕಾದ ಹೈಕಮಿಷನರ್ ಮಧ್ಯಪ್ರವೇಶಿಸಿದ್ದಾರೆ. ಈಗ ವಿಷಯಗಳು ಇತ್ಯರ್ಥವಾಗಿವೆ' ಎಂದು ಅವರು ಹೇಳಿದರು.
ಪಾಕಿಸ್ತಾನ ಪ್ರವಾಸವನ್ನು ಮುಂದುವರಿಸುವ ನಿರ್ಧಾರಕ್ಕಾಗಿ ಶ್ರೀಲಂಕಾ ತಂಡಕ್ಕೆ ಪಿಸಿಬಿ ಅಧ್ಯಕ್ಷ ಮತ್ತು ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಕೃತಜ್ಞತೆ ಸಲ್ಲಿಸಿದ್ದಾರೆ.
ನಂತರ ಪಿಸಿಬಿ, ಶ್ರೀಲಂಕಾ ವಿರುದ್ಧದ ಉಳಿದ ಎರಡು ಏಕದಿನ ಪಂದ್ಯಗಳ ವೇಳಾಪಟ್ಟಿಯಲ್ಲಿ ಸ್ವಲ್ಪ ಬದಲಾವಣೆಯನ್ನು ಘೋಷಿಸಿತು. ನವೆಂಬರ್ 13 ಮತ್ತು 15 ರಂದು ಯೋಜಿಸಲಾಗಿದ್ದ ಈ ಎರಡು ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಶುಕ್ರವಾರ ಮತ್ತು ಭಾನುವಾರ ನಡೆಸಲಾಗುವುದು ಎಂದು ಪಿಸಿಬಿ ಘೋಷಿಸಿದೆ.