ದೋಹಾ: ಭಾರತದ ಉದಯೋನ್ಮುಖ ಪ್ರತಿಭೆ ವೈಭವ್ ಸೂರ್ಯವಂಶಿ ಮತ್ತೆ ತಮ್ಮ ಬ್ಯಾಟ್ ಮೂಲಕ ಅಬ್ಬರಿಸಿದ್ದು ಕೇವಲ 32 ಎಸೆತಗಳಲ್ಲಿ ಶತಕ ಸಿಡಿಸಿ ತಾವೆಷ್ಟು ಪ್ರತಿಭಾನ್ವಿತ ಬ್ಯಾಟರ್ ಎಂಬುದನ್ನು ಮತ್ತೆ ಸಾಬೀತುಪಡಿಸಿದ್ದಾರೆ.
ಎಸಿಸಿ ಪುರುಷರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ 2025ರ ಟೂರ್ನಿಯ ಯುಎಇ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತದ ಪರ ಭರ್ಜರಿ ಬ್ಯಾಟಿಂಗ್ ನಡೆಸಿದ ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್ ನಡೆಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಭಾರತ ಎ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಕೇವಲ 42 ಎಸೆತಗಳಲ್ಲಿ 11 ಬೌಂಡರಿ, 15 ಸಿಕ್ಸರ್ ಗಳ ನೆರವಿನಿಂದ 144 ರನ್ ಸಿಡಿಸಿದರು. ಸೂರ್ಯವಂಶಿ ಅವರಿಗೆ ನಮನ್ ಧೀರ್ (34) ಸ್ಥಿರ ಬೆಂಬಲ ನೀಡಿದರು. ಈ ಜೋಡಿ 10 ಓವರ್‌ಗಳಲ್ಲಿ ಪ್ರತಿ ಓವರ್‌ಗೆ 16 ರನ್‌ಗಳ ಸರಾಸರಿಯಲ್ಲಿ 168 ರನ್‌ಗಳನ್ನು ಸೇರಿಸಿತು.
ಬಳಿಕ ಆರ್ ಸಿಬಿ ಸ್ಟಾರ್ ಹಾಗೂ ಭಾರತ ಎ ತಂಡದ ನಾಯಕ ಜಿತೇಶ್ ಶರ್ಮಾ ಕೂಡ 32 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 8 ಬೌಂಡರಿಗಳ ನೆರವಿನಿಂದ 83 ರನ್ ಸಿಡಿಸಿದರು. ಈ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಎ ತಂಡ ನಿಗಧಿತ 20 ಓವರ್ ನಲ್ಲಿ 4 ವಿಕೆಟ್ ನಷ್ಟಕ್ಕೆ 297 ರನ್ ಗಳಿಸಿತು.
ಆ ಮೂಲಕ ಯುಎಇ ತಂಡಕ್ಕೆ 298 ರನ್ ಗಳ ಬೃಹತ್ ಗುರಿ ನೀಡಿತು. ಈ ಮೊತ್ತವನ್ನು ಬೆನ್ನು ಹತ್ತಿದ ಯುಎಇ 20 ಓವರ್ ನಲ್ಲಿ 7 ವಿಕೆಟ್ ನಷ್ಟಕ್ಕೆ ಕೇವಲ 149ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ ಬರೊಬ್ಬರಿ 148 ರನ್ ಅಂತರದ ಜಯ ದಾಖಲಿಸಿತು.
ರಿಷಬ್ ಪಂತ್ ದಾಖಲೆಗೇ ಕುತ್ತು ತಂದಿದ್ದ ಸೂರ್ಯವಂಶಿ
ಸೂರ್ಯವಂಶಿ ಕೇವಲ 32 ಎಸೆತಗಳಲ್ಲಿ ಶತಕ ಗಳಿಸುವ ಮೂಲಕ ಭಾರತದ ಮತ್ತೋರ್ವ ಸ್ಟಾರ್ ಆಟಗಾರ ರಿಷಬ್ ಪಂತ್ ದಾಖಲೆ ಸರಿಗಟ್ಟಿದರು. ಈ ಹಿಂದೆ ಅಂದರೆ 2018ರಲ್ಲಿ ದೆಹಲಿ ಪರ ಹಿಮಾಚಲ ಪ್ರದೇಶದ ವಿರುದ್ಧ ಶತಕ ಗಳಿಸಿದ ರಿಷಭ್ ಪಂತ್ ಅವರ ದಾಖಲೆಯನ್ನು ಸರಿಗಟ್ಟಿದರು. ಇದು ಭಾರತೀಯ ಬ್ಯಾಟ್ಸ್‌ಮನ್‌ನ ಜಂಟಿ ಎರಡನೇ ವೇಗದ ಟಿ20 ಶತಕವಾಗಿದೆ. 17 ವರ್ಷದ ಪಂತ್ 10 ನೇ ಓವರ್‌ನಲ್ಲಿ ವೇಗಿ ಮುಹಮ್ಮದ್ ಅರ್ಫಾನ್ ಎಸೆತದಲ್ಲಿ ನಾಲ್ಕು ಸಿಡಿಸುವ ಮೂಲಕ ಈ ಮೈಲಿಗಲ್ಲು ತಲುಪಿದ್ದರು.
ಸೂರ್ಯವಂಶಿ ಇನ್ನಿಂಗ್ಸ್ ಉದ್ದಕ್ಕೂ ನಿರಂತರ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ಪ್ರಮುಖವಾಗಿ ಯುಎಇ ಎಡಗೈ ಸ್ಪಿನ್ನರ್ ಹರ್ಷಿತ್ ಕೌಶಿಕ್ ವಿರುದ್ಧ ಅವರ ಬ್ಯಾಟಿಂಗ್ ದಾಳಿ ಅತ್ಯಂತ ಕ್ರೂರವಾಗಿತ್ತು, ಅವರು 11 ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್ ಮತ್ತು ಒಂದು ಬೌಂಡರಿ ಬಾರಿಸಿದರು. ಆ ಒಂದೇ ಓವರ್ ನಲ್ಲಿ ಬರೊಬ್ಬರಿ 30 ರನ್‌ಗಳು ಹರಿದು ಬಂದವು.
ಒಂದು ಹಂತದಲ್ಲಿ ಸೂರ್ಯವಂಶಿ ಬ್ಯಾಟಿಂಗ್ ಸ್ಟ್ರೇಕ್ ರೇಟ್ 300ರ ಗಡಿ ದಾಟಿತ್ತು. ಆಗ ಭಾರತ ಎ ತಂಡವು ಕೇವಲ 12.3 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 195 ರನ್ ಗಳಿಸಿತ್ತು. ನಂತರ ಅವರು ಆಫ್-ಸ್ಪಿನ್ನರ್ ಮೊಹಮ್ಮದ್ ಫರಾಜುದ್ದೀನ್ ಬೌಲಿಂಗ್ ನಲ್ಲಿ ಔಟಾದರು.
ಮತ್ತೊಂದು ದಾಖಲೆ ಕೂದಲೆಳೆ ಅಂತರದಲ್ಲಿ ಮಿಸ್
ಈ ಹತ್ಯಾಕಾಂಡದ ಹೊರತಾಗಿಯೂ, ಅವರು ಅತಿ ವೇಗದ T20 ಶತಕಗಳ (28 ಎಸೆತಗಳು) ಭಾರತೀಯ ದಾಖಲೆಯನ್ನು ಹೊಂದಿರುವ ಅಭಿಷೇಕ್ ಶರ್ಮಾ ಮತ್ತು ಉರ್ವಿಲ್ ಪಟೇಲ್ ಅವರನ್ನು ಹಿಂದಿಕ್ಕುವ ಅವಕಾಶವನ್ನು ಸ್ವಲ್ಪದರಲ್ಲೇ ತಪ್ಪಿಸಿಕೊಂಡರು.