ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕುತ್ತಿಗೆ ಗಾಯಕ್ಕೆ ತುತ್ತಾಗಿ ಮೊದಲ ಟೆಸ್ಟ್ ಪಂದ್ಯದಿಂದಲೇ ದೂರ ಉಳಿದಿದ್ದ ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ 3ನೇ ದಿನದಾಟ ಆರಂಭವಾಗುವ ಮುನ್ನ ಭಾರತ ತಂಡಕ್ಕೆ ಭಾರಿ ಹೊಡೆತ ಬಿದ್ದಿದ್ದು, ನಾಯಕ ಶುಭಮನ್ ಗಿಲ್ ಪಂದ್ಯದ ಉಳಿದ ಪಂದ್ಯಕ್ಕೆ ಹೊರಗುಳಿದಿದ್ದಾರೆ.
ಶನಿವಾರ ಎರಡನೇ ದಿನದಾಟದ ವೇಳೆ ಕುತ್ತಿಗೆಗೆ ಗಾಯವಾಗಿದ್ದರಿಂದ ಗಿಲ್ ಅವರನ್ನು ಕೋಲ್ಕತ್ತಾದ ವುಡ್‌ಲ್ಯಾಂಡ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆರಂಭದಿಂದಲೂ ಗಿಲ್ ಅವರನ್ನು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ ಎಂದು ವರದಿಯೊಂದು ಹೇಳಿದೆ.
ಈ ಕುರಿತು ಎನ್ ಡಿಟಿವಿ ವರದಿ ಮಾಡಿದ್ದು, ಶುಭ್ ಮನ್ ಗಿಲ್ ರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಲಾಗುತ್ತಿದ್ದು, ಆದರೆ ಅವರ ಆರೋಗ್ಯ ಸ್ಥಿರವಾಗಿದೆ. ಕೇವಲ ಅವರನ್ನು ವೀಕ್ಷಣೆ (Observation)ಯಲ್ಲಿಡಲಾಗಿದೆ. ಶುಭ್ ಮನ್ ಗಿಲ್ ಭಾನುವಾರ ಆಸ್ಪತ್ರೆಯಲ್ಲಿಯೇ ಇರಲಿದ್ದಾರೆ ಎಂದು ವರದಿ ಮಾಡಿದೆ.
ಇಡೀ ಟೂರ್ನಿಗೇ ಡೌಟ್
ಇನ್ನು ಭಾರತ ತಂಡದ ನಾಯಕ ಶುಭ್ ಮನ್ ಗಿಲ್ ಗಾಯದ ಸಮಸ್ಯೆಯಿಂದಾಗಿ ಟೂರ್ನಿಯ ಬಾಕಿ ಪಂದ್ಯಗಳಿಗೂ ಲಭ್ಯರಿರುವುದಿಲ್ಲ ಎಂದು ಹೇಳಲಾಗಿದೆ. ಗುವಾಹಟಿಯಲ್ಲಿ ನಡೆಯಲಿರುವ ಮುಂದಿನ ಅಂದರೆ 2ನೇ ಟೆಸ್ಟ್ ಗೂ ಅವರ ಭಾಗವಹಿಸುವಿಕೆಯೂ ಅನಿಶ್ಚಿತವಾಗಿದೆ. ಪ್ರಸ್ತುತ ಗಿಲ್ ರನ್ನು ಡಾ. ಸಪ್ತರ್ಷಿ ಬಸು ಅವರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕ್ರಿಟಿಕಲ್ ಕೇರ್ ಪ್ಯಾನಲ್ ರಚನೆ
ಇದೇ ವೇಳೆ ಗಿಲ್ ರ ಆರೋಗ್ಯ ಮೇಲ್ವಿಚಾರಣೆಗೆ ಮುನ್ನೆಚ್ಚರಿಕಾ ಕ್ರಮವಾಗಿ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ ಎಂದು ರೆವ್‌ಸ್ಪೋರ್ಟ್ಸ್ ವರದಿ ತಿಳಿಸಿದೆ. ಸಮಿತಿಯು ನಿರ್ಣಾಯಕ ಆರೈಕೆ ತಜ್ಞ, ನರಶಸ್ತ್ರಚಿಕಿತ್ಸಕ, ನರವಿಜ್ಞಾನಿ ಮತ್ತು ಹೃದ್ರೋಗ ತಜ್ಞರನ್ನು ಒಳಗೊಂಡಿದ್ದು, ಅವರ ಸ್ಥಿತಿಯ ಪ್ರತಿಯೊಂದು ಅಂಶವನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಖಚಿತಪಡಿಸುತ್ತದೆ.
ಗುವಾಹಟಿ ಪಂದ್ಯಕ್ಕೆ ಡೌಟ್
ಮುಂಬರುವ ಗುವಾಹಟಿ ಟೆಸ್ಟ್‌ನಲ್ಲಿ ಅವರ ಭಾಗವಹಿಸುವಿಕೆಯು ಅವರ ಚೇತರಿಕೆಯ ವೇಗವನ್ನು ಸಂಪೂರ್ಣವಾಗಿ ಅವಲಂಬಿಸಿರುತ್ತದೆ ಎಂದು ಅಧಿಕಾರಿಗಳು ಹೇಳಿದ್ದು, ಪ್ರಸ್ತುತ, ಅವರು ಸಮಯಕ್ಕೆ ಸರಿಯಾಗಿ ಫಿಟ್ ಆಗುತ್ತಾರೆಯೇ ಎಂದು ಊಹಿಸಲು ಸಾಧ್ಯವಿಲ್ಲ, ಆದರೂ ಅವರು ನಿರೀಕ್ಷೆಗಿಂತ ವೇಗವಾಗಿ ಚೇತರಿಸಿಕೊಳ್ಳಬಹುದು ಎಂಬ ಎಚ್ಚರಿಕೆಯ ಆಶಾವಾದ ಉಳಿದಿದೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್
ಇನ್ನು ಇದೀಗ ಬಂದ ಸುದ್ದಿಗಳ ಪ್ರಕಾರ ಶುಭಮನ್ ಗಿಲ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ನೋವು ಕಡಿಮೆಯಾದ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ 4-5 ದಿನಗಳ ವಿಶ್ರಾಂತಿಗೆ ಸೂಚಿಸಲಾಗಿದೆ.
ಏನಾಗಿತ್ತು?
ಎರಡನೇ ದಿನದ ಆಟದ ಸಮಯದಲ್ಲಿ, ಶುಭಮನ್ ಗಿಲ್ ಕೇವಲ ಮೂರು ಎಸೆತಗಳನ್ನು ಎದುರಿಸಿದ ನಂತರ ಗಾಯಗೊಂಡು ನಿವೃತ್ತರಾಗಿದ್ದರು. ಸೈಮನ್ ಹಾರ್ಮರ್ ಎಸೆತದಲ್ಲಿ ಸ್ವೀಪ್ ಶಾಟ್ ಹೊಡೆದ ನಂತರ ಅವರು ಗೋಚರ ಅಸ್ವಸ್ಥತೆಯಲ್ಲಿ ಕಾಣಿಸಿಕೊಂಡರು.
ವೈದ್ಯಕೀಯ ಸಹಾಯಕ್ಕಾಗಿ ಕರೆ ಮಾಡುವ ಮೊದಲು ಅವರ ಕುತ್ತಿಗೆಯನ್ನು ಬಿಗಿದುಕೊಂಡರು. ನಂತರ ಅವರನ್ನು ಸ್ಕ್ಯಾನ್ ಮತ್ತು ವೀಕ್ಷಣೆಗಾಗಿ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.