ಮುಂಬೈ: ಹಾಲಿ ರಣಜಿ ಟೂರ್ನಿಯಲ್ಲಿ ಹರ್ಯಾಣದ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಹೊಸ ಇತಿಹಾಸ ನಿರ್ಮಿಸಿದ್ದು, ಒಂದೂ ರನ್ ನೀಡದೇ 5 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ.
ಹೌದು.. ಹಾಲಿ ರಣಜಿ ಟೂರ್ನಿಯಲ್ಲಿ 22 ವರ್ಷದ ಉದಯೋನ್ಮುಖ ಆಟಗಾರ ಅಮಿತ್ ಶುಕ್ಲಾ ಹೊಸ ಇತಿಹಾಸ ನಿರ್ಮಿಸಿದ್ದು, ಅದು ಸಹ 4 ಓವರ್ಗಳಲ್ಲೇ 5 ವಿಕೆಟ್ ಕಬಳಿಸುವ ಮೂಲಕ ಈ ಅತ್ಯಪರೂಪದ ದಾಖಲೆ ನಿರ್ಮಿಸಿದ್ದಾರೆ.
ಇನ್ನೂ ಅಚ್ಚರಿ ಎಂದರೆ ಅಮಿತ್ ಶುಕ್ಲಾ ಎಸೆದಿದ್ದ ಈ ನಾಲ್ಕು ಓವರ್ಗಳು ಕೂಡ ಮೇಡನ್ ಆಗಿತ್ತು. ಅಂದರೆ ಅಮಿತ್ ಶುಕ್ಲಾ ಆ ನಾಲ್ಕು ಓವರ್ ನಲ್ಲಿ ಯಾವುದೇ ರನ್ ನೀಡದೇ 5 ವಿಕೆಟ್ಗಳನ್ನು ಕಬಳಿಸಿದ್ದಾರೆ.
ರೋಹ್ಟಕ್ನಲ್ಲಿ ನಡೆಯುತ್ತಿರುವ ರಣಜಿ ಟೂರ್ನಿಯ ಎಲೈಟ್ ಗ್ರೂಪ್-ಸಿ ಪಂದ್ಯದಲ್ಲಿ ಸರ್ವೀಸಸ್ ಮತ್ತು ಹರ್ಯಾಣ ತಂಡಗಳು ಮುಖಾಮುಖಿಯಾಗಿದ್ದು, ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸರ್ವೀಸಸ್ ತಂಡವು ಕೇವಲ 211 ರನ್ಗಳಿಸಿ ಆಲೌಟ್ ಆಗಿತ್ತು.
ಇದಕ್ಕೆ ಉತ್ತರವಾಗಿ ಪ್ರಥಮ ಇನಿಂಗ್ಸ್ ಶುರು ಮಾಡಿದ ಹರ್ಯಾಣ ತಂಡಕ್ಕೆ ಯುವ ಸ್ಪಿನ್ನರ್ ಅಮಿತ್ ಶುಕ್ಲಾ ಮರ್ಮಾಘಾತ ನೀಡಿದರು. 4 ಓವರ್ ನಲ್ಲಿ ಒಂದೂ ರನ್ ನೀಡದೆ 5 ವಿಕೆಟ್ ಕಬಳಿಸಿದ್ದಾರೆ.
ಒಂದಾದರ ಮೇಲೊಂದು ವಿಕೆಟ್
ಈ ಪಂದ್ಯದಲ್ಲಿ 2ನೇ ಓವರ್ನಲ್ಲಿ ದಾಳಿಗಿಳಿದ ಅಮಿತ್ ಶುಕ್ಲಾ ತಮ್ಮ ದ್ವಿತೀಯ ಎಸೆತದಲ್ಲೇ ಮೊದಲ ವಿಕೆಟ್ ಪಡೆದರು. ಈ ಓವರ್ನಲ್ಲಿ ಅವರು ಯಾವುದೇ ರನ್ ನೀಡಿರಲಿಲ್ಲ. ಇದಾದ ಬಳಿಕ 4ನೇ ಓವರ್ನ ಮೊದಲ ಎಸೆತದಲ್ಲೇ 2ನೇ ವಿಕೆಟ್ ಕಬಳಿಸಿದರು. ಈ ಓವರ್ನಲ್ಲೂ ಯಾವುದೇ ರನ್ ಕೊಟ್ಟಿರಲಿಲ್ಲ. ಆನಂತರ 6ನೇ ಓವರ್ನ 5ನೇ ಎಸೆತದಲ್ಲಿ ಮತ್ತೊಂದು ವಿಕೆಟ್ ಪಡೆದರು.
ಈ ಓವರ್ ಕೂಡ ಮೇಡನ್ ಆಗಿತ್ತು, ಇನ್ನು 8ನೇ ಓವರ್ನ ಮೊದಲ ಎಸೆತದಲ್ಲಿ ಧೀರು ಸಿಂಗ್ ವಿಕೆಟ್ ಪಡೆದ ಅಮಿತ್ ಶುಕ್ಲಾ, ಮೂರನೇ ಎಸೆತದಲ್ಲಿ ನಿಖಿಲ್ ಕಶ್ಯಪ್ ವಿಕೆಟ್ ಕಬಳಿಸಿದರು. ಈ ಮೂಲಕ ಒಂದೇ ಒಂದು ರನ್ ನೀಡದೇ ಐದು ವಿಕೆಟ್ಗಳ ಸಾಧನೆ ಮಾಡಿದರು.
8 ವಿಕೆಟ್ ಕಬಳಿಸಿದ ಅಮಿತ್ ಶುಕ್ಲಾ
ಯಾವುದೇ ರನ್ ನೀಡದೇ ಮೊದಲ 5 ವಿಕೆಟ್ ಕಬಳಿಸಿದ್ದ ಅಮಿತ್ ಶುಕ್ಲಾ ಆ ಬಳಿಕ ಕೂಡ ತನ್ನ ಸ್ಪಿನ್ ಮೋಡಿ ಮುಂದುವರೆಸಿ ಮತ್ತೆ 3 ವಿಕೆಟ್ ಪಡೆದರು. ಈ ಮೂಲಕ 20 ಓವರ್ಗಳನ್ನು ಎಸೆದ ಅವರು 8 ಮೇಡನ್ ಜೊತೆ ಕೇವಲ 27 ರನ್ ನೀಡಿ 8 ವಿಕೆಟ್ ಕಬಳಿಸಿದರು.
ಅಮಿತ್ ಶುಕ್ಲಾ ಅವರ ಈ ಭರ್ಜರಿ ಬೌಲಿಂಗ್ನಿಂದಾಗಿ ಹರ್ಯಾಣ ತಂಡವು ಮೊದಲ ಇನಿಂಗ್ಸ್ನಲ್ಲಿ ಕೇವಲ 111 ರನ್ಗಳಿಸಿ ಆಲೌಟ್ ಆಯಿತು.
IPL 2026 ಹರಾಜಿಗೆ ಭರ್ಜರಿ ಸಿದ್ಧತೆ
ಇನ್ನು ಅಮಿತ್ ಶುಕ್ಲಾ ಅವರ ಈ ಭರ್ಜರಿ ಪ್ರದರ್ಶನ ಇದೀಗ ಐಪಿಎಲ್ ಫ್ರಾಂಚೈಸಿಗಳ ಗಮನ ಸೆಳೆದಿದೆ. ಈಗಾಗಲೇ ಐಪಿಎಲ್ 2026 ರ ಮಿನಿ-ಹರಾಜಿಗೆ ಕ್ಷಣಗಣನೆ ಆರಂಭವಾಗಿದ್ದು, ಇದೇ ಸಮಯದಲ್ಲಿ ಶುಕ್ಲಾ ಪ್ರದರ್ಶನ ಅವರನ್ನು ಫ್ರಾಂಚೈಸಿಗಳ ಫೇವರಿಟ್ ಆಟಗಾರರನ್ನಾಗಿಸಿದೆ.
ಈಗಾಗಲೇ ಅಮಿತ್ ಶುಕ್ಲಾ ರನ್ನು ತಂಡಕ್ಕೆ ಸೇರಿಸಿಕೊಳ್ಳಲು ರಾಜಸ್ಥಾನ ರಾಯಲ್ಸ್ ಆಡಳಿತ ಮಂಡಳಿ ಉತ್ಸುಕತೆ ತೋರಿದ್ದು, ಈ ಸಂಬಂಧ ಮಾತುಕತೆಯಲ್ಲಿ ತೊಡಗಿದೆ ಎನ್ನಲಾಗಿದೆ. ಈಗಾಗಲೇ ರಾಜಸ್ತಾನ ತಂಡ ತನ್ನ ಮುಂಚೂಣಿ ಸ್ಪಿನ್ನರ್ ಗಳಾದ ವನಿಂದು ಹಸರಂಗ ಮತ್ತು ಬೌಲರ್ ಮಹೇಶ ತೀಕ್ಷಣ ಅವರನ್ನು ಬಿಡುಗಡೆ ಮಾಡಿದೆ. ಉಳಿದಂತೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ರವೀಂದ್ರ ಜಡೇಜಾ ರಾಜಸ್ತಾನ ತಂಡಕ್ಕೆ ಆಗಮಿಸಿದ್ದಾರೆ.