ವಾಷಿಂಗ್ಟನ್ ಸುಂದರ್ ಅವರ ಬದಲಿಗೆ ಬಿ ಸಾಯಿ ಸುದರ್ಶನ್ ಅವರನ್ನು 3ನೇ ಕ್ರಮಾಂಕದಲ್ಲಿ ತರುವ ಟೀಂ ಇಂಡಿಯಾದ ನಿರ್ಧಾರ ಇದೀಗ ಹಲವರ ಟೀಕೆಗೆ ಕಾರಣವಾಗಿದೆ. ವಾಷಿಂಗ್ಟನ್ ಸುಂದರ್ ಭಾರತ ಕ್ರಿಕೆಟ್ ತಂಡಕ್ಕೆ ಬ್ಯಾಟಿಂಗ್‌ನಲ್ಲಿ ಕೆಲವು ಅರ್ಥಪೂರ್ಣ ಕೊಡುಗೆಗಳನ್ನು ನೀಡಿದ್ದು, ಆ ಹೆಚ್ಚಿನ ಪ್ರದರ್ಶನಗಳು ಕೆಳ ಕ್ರಮಾಂಕದಲ್ಲಿ ಬಂದಿವೆ. ಆದರೆ, ವಾಷಿಂಗ್ಟನ್ ಸುಂದರ್ ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಿರುವುದನ್ನು ಕಂಡು ಭಾರತದ ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಕೆಲವು ಪ್ರಮುಖ ಪ್ರಶ್ನೆಗಳನ್ನು ಎತ್ತಿದ್ದಾರೆ. ಭಾರತದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ವಾಷಿಂಗ್ಟನ್ ಸುಂದರ್ ಕಡೆಗೆ ತೋರುತ್ತಿರುವ ನಡೆ ಇದೀಗ ಗೌಪ್ಯವಾಗಿ ಉಳಿದಿಲ್ಲ. ಆಲ್‌ರೌಂಡರ್ ಅನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುವ ಅವರ ನಿರ್ಧಾರ ನಿಜವಾಗಿಯೂ ಒಪ್ಪುವಂತದ್ದಲ್ಲ ಎಂದಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಮೊದಲನೇ ಟೆಸ್ಟ್‌ನಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ವಾಷಿಂಗ್ಟನ್ ಸುಂದರ್ ಎರಡು ಇನಿಂಗ್ಸ್‌ಗಳಲ್ಲಿ 29 ಮತ್ತು 31 ರನ್ ಗಳಿಸಿದರು. ಪಂದ್ಯದಲ್ಲಿ ವಾಷಿಂಗ್ಟನ್ ಅವರು ತಂಡಕ್ಕೆ ಉತ್ತಮ ರನ್ ನೀಡಿದ್ದರೂ, ಈ ಪಾತ್ರಕ್ಕಾಗಿ ಮಾಡಬೇಕಾದ ಅತಿಯಾದ ಬ್ಯಾಟಿಂಗ್ ಅಭ್ಯಾಸವು ಅವರ ಬೌಲಿಂಗ್ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಕಾರ್ತಿಕ್ ಹೇಳಿದ್ದಾರೆ.
'ಟೆಸ್ಟ್ ಆಟಗಾರ ವಾಷಿಂಗ್ಟನ್ ಸುಂದರ್ ಅವರನ್ನು ಎಲ್ಲಿ ನೋಡಲಾಗುತ್ತಿದೆ? ಅವರು ಬ್ಯಾಟಿಂಗ್ ಮಾಡಬಲ್ಲ ಬೌಲರ್ ಆಗಿದ್ದಾರೆಯೇ? ಈಗ, ನೀವು ಅವರನ್ನು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುತ್ತಿದ್ದರೆ, ಅವರು ಬ್ಯಾಟಿಂಗ್‌ನತ್ತ ಹೆಚ್ಚು ಗಮನಹರಿಸಬೇಕು ಎಂದು ನೀವು ಅವರಿಗೆ ಹೇಳುತ್ತಿದ್ದೀರಿ' ಎಂದು ಕಾರ್ತಿಕ್ ಕ್ರಿಕ್‌ಬಜ್‌ನಲ್ಲಿನ ವಿಡಿಯೋದಲ್ಲಿ ಹೇಳಿದರು.
'ಅವರು ದೀರ್ಘಾವಧಿಯ ಬ್ಯಾಟಿಂಗ್ ಅಭ್ಯಾಸದಲ್ಲಿ ಕಳೆಯಲು ಪ್ರಾರಂಭಿಸಿದ ಕ್ಷಣ, ನೀವು ಬೌಲಿಂಗ್ ಅಭ್ಯಾಸವನ್ನು ಕಡಿಮೆ ಮಾಡುತ್ತೀದ್ದೀರಿ ಎಂದರ್ಥ. ಏಕೆಂದರೆ ಎರಡರಲ್ಲೂ ಉತ್ತಮವಾಗಿರಲು ದೈಹಿಕವಾಗಿ ಅಸಾಧ್ಯ' ಎಂದು ಹೇಳಿದರು.
ವಾಷಿಂಗ್ಟನ್ ಸುಂದರ್ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವುದು ತಾತ್ಕಾಲಿಕ ಪರಿಹಾರದಂತೆ ಕಾಣುವುದರಿಂದ, ಈ ಪರಿಸ್ಥಿತಿಯನ್ನು ಕಠಿಣವಾದದ್ದು. ತಮಿಳುನಾಡಿನ ಈ ಕ್ರಿಕೆಟಿಗನನ್ನು ಪ್ರಾಥಮಿಕವಾಗಿ ಬ್ಯಾಟಿಂಗ್‌ನಲ್ಲಿ ಸಮರ್ಥ ಎಂದು ಸಾಬೀತುಪಡಿಸುವ ಬೌಲರ್ ಆಗಿ ನೋಡಲಾಗುತ್ತದೆ. ಆದರೆ, ಗೌತಮ್ ಗಂಭೀರ್ ಅವರ ನಾಯಕತ್ವದಲ್ಲಿ, ಅವರ ಪಾತ್ರವನ್ನು ಮರು ವ್ಯಾಖ್ಯಾನಿಸುವ ಸ್ಪಷ್ಟ ಉದ್ದೇಶವಿದೆ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.
'ಆದ್ದರಿಂದ, ನಾವು ನಿಮ್ಮಿಂದ ದೊಡ್ಡ ರನ್‌ಗಳನ್ನು ನೋಡುತ್ತಿದ್ದೇವೆ ಎಂಬ ಸಂದೇಶ ನೀಡಿರುವುದು ತುಂಬಾ ಸ್ಪಷ್ಟವಾಗಿದೆ. ಇದು ದೀರ್ಘಾವಧಿಯಲ್ಲಿ ಅವರ ಬೌಲಿಂಗ್ ಮೇಲೆ ಪರಿಣಾಮ ಬೀರಬಹುದು. ಇದು ತುಂಬಾ ಕಷ್ಟಕರವಾಗಿದೆ' ಎಂದರು.
ಕುತ್ತಿಗೆ ಗಾಯದಿಂದಾಗಿ ಗಿಲ್ ಎರಡನೇ ಟೆಸ್ಟ್‌ನಿಂದ ಹೊರಗುಳಿಯುವ ಸಾಧ್ಯತೆಯಿರುವುದರಿಂದ, ಗಂಭೀರ್ ಬ್ಯಾಟಿಂಗ್ ಘಟಕದಲ್ಲಿ ವಾಷಿಂಗ್ಟನ್ ಸುಂದರ್‌ಗೆ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಕಳುಹಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.