ಮುಂಬೈ: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡ ಪ್ರಕಟವಾಗಿದ್ದು, ಗಾಯಾಳುಗಳಾದ ಶುಭ್ ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಗೆ ವಿಶ್ರಾಂತಿ ನೀಡಲಾಗಿದ್ದು, ತಂಡಕ್ಕೆ ಹೊಸ ಉಸ್ತುವಾರಿ ನೇಮಿಸಲಾಗಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಮುಂಬರುವ ಏಕದಿನ ಸರಣಿಗೆ ಭಾರತ ಕ್ರಿಕೆಟ್ ತಂಡವನ್ನು ಪ್ರಕಟಿಸಲಾಗಿದ್ದು, ಟೆಸ್ಟ್ ಪಂದ್ಯದ ವೇಳೆ ಗಾಯಗೊಂಡಿದ್ದ ಶುಭ್ ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಂಡದಿಂದ ಕೈ ಬಿಡಲಾಗಿದೆ.
ಉಳಿದಂತೆ ಏಕದಿನ ತಂಡಕ್ಕೆ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಲಭ್ಯರಿದ್ದು, ತುಂಬಾ ದಿನಗಳ ಬಳಿಕ ಸೀಮಿತ ಓವರ್ ಗಳ ಪಂದ್ಯಕ್ಕೆ ಯಶಸ್ವಿ ಜೈಸ್ವಾಲ್ ವಾಪಸ್ ಆಗಿದ್ದಾರೆ. ಅಂತೆಯೇ ರುತುರಾಜ್ ಗಾಯಕ್ವಾಡ್ ಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ.
ಏಕದಿನ ಸರಣಿಗೆ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅವರನ್ನು ಆಯ್ಕೆ ಮಾಡಲಾಗಿದ್ದು, ಹಾರ್ದಿಕ್ ಪಾಂಡ್ಯ ಅವರನ್ನು ತಂಡದಿಂದ ಕೈ ಬಿಡಲಾಗಿದೆ. ಯಶಸ್ವಿ ಜೈಸ್ವಾಲ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಆಡುವ ಸಾಧ್ಯತೆ ಇದೆ.
ಕನ್ನಡಿಗ ಕೆಎಲ್ ರಾಹುಲ್ ಗೆ ಕೊನೆಗೂ ಒಲಿದ ಅದೃಷ್ಟ!
ಇನ್ನು ಗಾಯಗೊಂಡ ಶುಭ್ ಮನ್ ಗಿಲ್ ಗೆ ವಿಶ್ರಾಂತಿ ನೀಡಲಾಗಿದ್ದು, ಗಿಲ್ ಗೆ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದ ಸಮಯದಲ್ಲಿ ಕುತ್ತಿಗೆಗೆ ಗಾಯವಾಗಿತ್ತು. ಹೀಗಾಗಿ ಗಿಲ್ ಗುವಾಹಟಿಯಲ್ಲಿ ನಡೆಯುತ್ತಿರುವ ಎರಡನೇ ಪಂದ್ಯವನ್ನು ತಪ್ಪಿಸಿಕೊಂಡಿದ್ದಾರೆ. ಗಿಲ್ ಅನುಪಸ್ಥಿತಿಯಲ್ಲಿ ಕನ್ನಡಿಗ ಕೆಎಲ್ ರಾಹುಲ್ ಗೆ ತಂಡದ ಸಾರಥ್ಯ ನೀಡಲಾಗಿದೆ. ಕೆಎಲ್ ರಾಹುಲ್ ನಾಯಕತ್ವದಲ್ಲಿ ಭಾರತ ತಂಡ ಏಕದಿನ ಸರಣಿ ಆಡಲಿದೆ.
ಇನ್ನು ಕಳೆದ ತಿಂಗಳು ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಬಲಗಾಲಿನ ಮುರಿತಕ್ಕೊಳಗಾಗಿದ್ದ ರಿಷಬ್ ಪಂತ್ ಚೇತರಿಸಿಕೊಂಡು ಇದೀಗ ಟೆಸ್ಟ್ ಸರಣಿಯಲ್ಲಿ ತಂಡದ ಸಾರಥ್ಯವಹಿಸಿದ್ದಾರೆ. ಹೀಗಾಗಿ ಏಕದಿನ ತಂಡಕ್ಕೂ ಅವರನ್ನು ಆಯ್ಕೆ ಮಾಡಲಾಗಿದೆ. ಅಂತೆಯೇ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್ ಹೀರೋ ತಿಲಕ್ ವರ್ಮಾ ಕೂಡ ತಂಡಕ್ಕೆ ಆಯ್ಕೆಯಾಗಿದ್ದು, ಡಿಸೆಂಬರ್ 2023 ರಲ್ಲಿ ತಮ್ಮ ಕೊನೆಯ ಏಕದಿನ ಪಂದ್ಯ ಆಡಿದ್ದ ತಿಲಕ್ ಇದೀಗ ಆಫ್ರಿಕಾ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದಾರೆ.
ಉಳಿದಂತೆ ಧ್ರುವ್ ಜುರೆಲ್ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದು, ಎಡಗೈ ಸ್ಪಿನ್ನರ್ ರವೀಂದ್ರ ಜಡೇಜಾ ತಂಡಕ್ಕೆ ಆಯ್ಕೆಯಾಗಿದ್ದಾರೆ.
ಶ್ರೇಯಸ್ ಅಯ್ಯರ್ ಗೆ ವಿಶ್ರಾಂತಿ
ಭಾರತದ ಏಕದಿನ ತಂಡದ ಉಪನಾಯಕ ಶ್ರೇಯಸ್ ಅಯ್ಯರ್ ಕಳೆದ ತಿಂಗಳು ಸಿಡ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯುವ ವೇಳೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಅಯ್ಯರ್ ಇದೀಗ ವೈದ್ಯರ ಮೇಲ್ವಿಚಾರಣೆಯಲ್ಲಿದ್ದಾರೆ.
ಮೊದಲ ಏಕದಿನ ಪಂದ್ಯ ನವೆಂಬರ್ 30 ರಂದು ನಡೆಯಲಿದ್ದು, ಮುಂದಿನ ಎರಡು ಪಂದ್ಯಗಳು ಕ್ರಮವಾಗಿ ಡಿಸೆಂಬರ್ 3 ಮತ್ತು ಡಿಸೆಂಬರ್ 6 ರಂದು ನಡೆಯಲಿವೆ.
ತಂಡ ಇಂತಿದೆ
ರೋಹಿತ್ ಶರ್ಮಾ, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ತಿಲಕ್ ವರ್ಮಾ, ಕೆಎಲ್ ರಾಹುಲ್ (ನಾಯಕ) (ವಿಕೆಟ್ ಕೀಪರ್), ರಿಷಭ್ ಪಂತ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ನಿತೀಶ್ ಕುಮಾರ್ ರೆಡ್ಡಿ, ಹರ್ಷಿತ್ ರಾಣಾ, ರುತುರಾಜ್ ಗಾಯಕ್ವಾಡ್, ದ್ರುವ್ ಜುರೆಲ್