ಅಹ್ಮದಾಬಾದ್: ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇನ್ನಿಂಗ್ಸ್ ಮತ್ತು 140 ರನ್ ಗಳ ಅಂತರದ ಭರ್ಜರಿ ಜಯ ಸಾಧಿಸಿದ್ದು, ಬ್ಯಾಟಿಂಗ್ ನಲ್ಲಿ ಶತಕ ಸಿಡಿಸಿ ಬೌಲಿಂಗ್ ನಲ್ಲಿ 4 ವಿಕೆಟ್ ಕಬಳಿಸಿದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
2ನೇ ದಿನಾದಟ ಅಂತ್ಯಕ್ಕೆ ಭಾರತ 448/5 ಗಳಿಸಿ 286 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು. ರವೀಂದ್ರ ಜಡೇಜಾ 176 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 6 ಬೌಂಡರಿ ಸಹಿತ ಅಜೇಯ 104 ರನ್ ಗಳಿಸಿ 3ನೇ ದಿನಕ್ಕೆ ಕ್ರೀಸ್ ಕಾಯ್ದುಕೊಂಡಿದ್ದರು. ಆದರೆ 3ನೇ ದಿನದಾಟ ಆರಂಭಕ್ಕೂ ಮೊದಲೇ ಭಾರತ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
ಅದರಂತೆ 286 ರನ್ ಗಳ ಹಿನ್ನಡೆಯೊಂದಿಗೆ 2ನೇ ಇನ್ನಿಂಗ್ಸ್ ಆರಂಭಿಸಿದ ವಿಂಡೀಸ್ ಪಡೆ ರವೀಂದ್ರ ಜಡೇಜಾ ಮತ್ತು ಮಹಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿತು. ಆರಂಭದಿಂದಲೂ ನಿಯಮಿತವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ ರೋಸ್ಟನ್ ಚೇಸ್ ಪಡೆ ಅಂತಿಮವಾಗಿ 146 ರನ್ ಗಳಿಗೆ ಆಲೌಟ್ ಆಯಿತು. ಆ ಮೂಲಕ ವೆಸ್ಟ್ ಇಂಡೀಸ್ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ವಿರುದ್ಧ ಇನ್ನಿಂಗ್ಸ್ ಮತ್ತು 140 ರನ್ ಗಳ ಹೀನಾಯ ಸೋಲು ದಾಖಲಿಸಿತು.
ರವೀಂದ್ರ ಜಡೇಜಾ ಆಲ್ರೌಂಡ್ ಆಟ
ಭಾರತದ ಮೊದಲ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಅಜೇಯರಾಗಿ ಉಳಿದಿದ್ದ ರವೀಂದ್ರ ಜಡೇಜಾ ಬಳಿಕ ವೆಸ್ಟ್ ಇಂಡೀಸ್ ನ 2ನೇ ಇನ್ನಿಂಗ್ಸ್ ವೇಳೆ 4 ವಿಕೆಟ್ ಪಡೆದು ಮಿಂಚಿದರು. ಅವರ ಆಲ್ರೌಂಡ್ ಪ್ರದರ್ಶನದಿಂದಾಗಿಯೇ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
ಇದೇ ಪಂದ್ಯದಲ್ಲಿ ಕನ್ನಡಿಗ ಕೆಎಲ್ ರಾಹುಲ್, ವಿಕೆಟ್ ಕೀಪರ್ ಬ್ಯಾಟರ್ ದ್ರುವ್ ಜುರೆಲ್ ಶತಕ ಸಿಡಿಸಿದರೆ, ಇತ್ತ ಬೌಲಿಂಗ್ ನಲ್ಲಿ ಬುಮ್ರಾ 3 ವಿಕೆಟ್ ಪಡೆದರೆ, ಸಿರಾಜ್ ಎರಡೂ ಇನ್ನಿಂಗ್ಸ್ ನಿಂದ 7 ವಿಕೆಟ್ ಪಡೆದರು. ರವೀಂದ್ರ ಜಡೇಜಾ 2ನೇ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದರು. ಕುಲದೀಪ್ ಯಾದವ್ 4 ಮತ್ತು ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು.
ಪಂದ್ಯಶ್ರೇಷ್ಠ ಪ್ರಶಸ್ತಿ
ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಭರ್ಜರಿ ಪ್ರದರ್ಶನ ನೀಡಿದ ರವೀಂದ್ರ ಜಡೇಜಾ ಅರ್ಹವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು. ಅಂತೆಯೇ ಇದು ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ರವೀಂದ್ರ ಜಡೇಜಾ ಗೆ ಸಿಕ್ಕ 11ನೇ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿದೆ. ಆ ಮೂಲಕ ರವೀಂದ್ರ ಜಡೇಜಾ ಅಪರೂಪದ ದಾಖಲೆ ನಿರ್ಮಿಸಿದ್ದು, ಭಾರತದಲ್ಲಿ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರ ಎಂಬ ಕೀರ್ತಿಗೆ ರವೀಂದ್ರ ಜಡೇಜಾ ಪಾತ್ರರಾಗಿದ್ದಾರೆ.
ಅದೂ ಕೂಡ ಕೇವಲ 50 ಟೆಸ್ಟ್ ಪಂದ್ಯಗಳಲ್ಲಿ ರವೀಂದ್ರ ಜಡೇಜಾ ಈ ಸಾಧನೆ ಮಾಡಿದ್ದಾರೆ. ಇಷ್ಟು ದಿನ ಈ ದಾಖಲೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಅವರ ಹೆಸರಿನಲ್ಲಿತ್ತು. ಕುಂಬ್ಳೆ ಭಾರತದಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ 9 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಭಾಜನರಾಗಿದ್ದರು.
Most Player of the Match awards in Tests in India
10 Ravindra Jadeja (50 Tests)
9 Anil Kumble (63)
8 Virat Kohli (55)
8 Sachin Tendulkar (94)
7 R Ashwin (65)
ಭಾರತದ ಪರ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ
ಅಂತೆಯೇ ಭಾರತದ ಪರ ಅತೀ ಹೆಚ್ಚು ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಕೀರ್ತಿ ಭಾರತದ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿದೆ. ಸಚಿನ್ 200 ಟೆಸ್ಟ್ ಗಳ ಪೈಕಿ 14 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2ನೇ ಸ್ಥಾನದಲ್ಲಿ ರಾಹುಲ್ ದ್ರಾವಿಡ್ ಇದ್ದು, ದ್ರಾವಿಡ್ 163 ಟೆಸ್ಟ್ ಪಂದ್ಯಗಳ ಪೈಕಿ 11 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರವೀಂದ್ರ ಜಡೇಜಾ ಇದೀಗ 3ನೇ ಸ್ಥಾನಕ್ಕೇರಿದ್ದು, ಕೇವಲ 86 ಟೆಸ್ಟ್ ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
Most Player of the Match awards in Tests for India
14 Sachin Tendulkar (200 Tests)
11 Rahul Dravid (163)
11 Ravindra Jadeja (86) *
10 R Ashwin (106)
10 Virat Kohli (123)