ಕೊಲಂಬೊ: ಶ್ರೀಲಂಕಾದಲ್ಲಿ ನಡೆಯುತ್ತಿರುವ 2025ರ ಮಹಿಳಾ ಏಕದಿನ ವಿಶ್ವಕಪ್‌ನಲ್ಲಿ ರಿಚಾ ಘೋಷ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ ಭಾನುವಾರ ಪಾಕಿಸ್ತಾನದ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಇಂದು ಕೊಲಂಬೊದಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದ ಪಾಕಿಸ್ತಾನ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ 50 ಓವರ್‌ಗಳಲ್ಲಿ 247 ರನ್‌ಗಳಿಗೆ ಆಲೌಟ್ ಆಯಿತು.
ಭಾರತದ ಪರ ರಿಚಾ ಘೋಷ್ ಸ್ಫೋಟಕ ಬ್ಯಾಟಿಂಗ್ ಮಾಡಿದ್ದು 2 ಸಿಕ್ಸರ್ 3 ಬೌಂಡರಿ ಸೇರಿದಂತೆ 20 ಎಸೆತಗಳಲ್ಲಿ ಅಜೇಯ 35 ರನ್ ಬಾರಿಸಿದರು. ಹರ್ಲೀನ್ ಡಿಯೋಲ್ 46 ರನ್ ಗಳಿಸಿ ಗರಿಷ್ಠ ಸ್ಕೋರರ್ ಆಗಿದ್ದರು. ಜೆಮಿಮಾ ರೊಡ್ರಿಗಸ್ 32 ಮತ್ತು ಪ್ರತೀಕಾ ರಾವಲ್ 31 ರನ್ ಗಳಿಸಿದರು. 8ನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ರಿಚಾ ಘೋಷ್ 20 ಎಸೆತಗಳಲ್ಲಿ ಅಜೇಯ 35 ರನ್ ಗಳಿಸಿ ಭಾರತ ಸ್ಪರ್ಧಾತ್ಮಕ ಮೊತ್ತವನ್ನು ತಲುಪಲು ಸಹಾಯ ಮಾಡಿದರು.
ಗೆಲುವಿಗೆ 248 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ, 43 ಓವರ್ ಗಳಲ್ಲಿ 159 ರನ್ ಗಳಿಸಿ ಆಲೌಟ್ ಆಯಿತು. ಇದರೊಂದಿಗೆ ಭಾರತ, ಪಾಕಿಸ್ತಾನದ ವಿರುದ್ಧ 88 ರನ್ ಗಳ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಸತತ 2ನೇ ಗೆಲುವು ದಾಖಲಿಸಿದರೆ, ಇತ್ತ ಪಾಕಿಸ್ತಾನ ಸತತ 2ನೇ ಸೋಲಿಗೆ ಕೊರಳೊಡ್ಡಿತು.