ನವದೆಹಲಿ: ಪ್ರವಾಸಿ ವೆಸ್ಟ್ ಇಂಡೀಸ್ ಮತ್ತು ಭಾರತದ ನಡುವೆ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಭಾರತ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಭಾರತದ ಪರ ಆರಂಭಿಕ ಆಟಗಾರರು ಸ್ಫೋಟಕ ಬ್ಯಾಟಿಂಗ್ ಮಾಡಿದ್ದು ಭಾರತ 500ರ ಗಡಿ ದಾಟಿದೆ. ಇನ್ನು ದ್ವಿಶತಕ ಗಳಿಸುವ ಅವಕಾಶ ಕೈತಪ್ಪಿದಾಗ ಯಾವುದೇ ಬ್ಯಾಟ್ಸ್‌ಮನ್ ಬೇಸರಗೊಳ್ಳುವುದು ಸಹಜ. ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್‌ನ ಮೊದಲ ದಿನದಂದು ಅದ್ಭುತವಾಗಿ ಆಡಿದ್ದ ಯಶಸ್ವಿ ಜೈಸ್ವಾಲ್ (175) ಇಂದು ಕೂಡ ಉತ್ತಮ ಉತ್ಸಾಹದಲ್ಲಿ ಕಾಣಿಸಿಕೊಂಡರು. ವಿಂಡೀಸ್ ವೇಗಿಗಳನ್ನು ಪರಿಣಾಮಕಾರಿಯಾಗಿ ಎದುರಿಸಿ ಮುಂದೆ ಸಾಗಿದರು. ಆದರೆ 1 ರನ್ ಪಡೆಯುವ ಭರದಲ್ಲಿ ರನೌಟ್ ಆಗಿ ಪೆವಿಲಿಯನ್ ಸೇರಿದರು.
ಇನ್ನು ರನೌಟ್ ಗೆ ಕಾರಣನಾದ ನಾನ್-ಸ್ಟ್ರೈಕ್ ನಲ್ಲಿದ್ದ ನಾಯಕ ಶುಭ್ಮನ್ ಗಿಲ್ ಬಗ್ಗೆ ಯಶಸ್ವಿ ಜೈಸ್ವಾಲ್ ತೀವ್ರ ಅಸಹನೆ ವ್ಯಕ್ತಪಡಿಸಿದರು. ಈ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಗಿಲ್ ರನ್ ಗಳಿಸಲು ಬಾರದ ಕಾರಣ ಔಟಾದ ಜೈಸ್ವಾಲ್ ಕೈಯಿಂದ ತಲೆಗೆ ಹೊಡೆದುಕೊಂಡು ಮೈದಾನದಿಂದ ಹೊರ ನಡೆದರು.
ಇನ್ನಿಂಗ್ಸ್‌ನ 92ನೇ ಓವರ್ ಅನ್ನು ಜೇಡನ್ ಸೀಲ್ಸ್ ಬೌಲ್ ಮಾಡಿದರು. ಜೈಸ್ವಾಲ್ ಆ ಓವರ್‌ನ ಎರಡನೇ ಚೆಂಡನ್ನು ಮಿಡ್-ಆಫ್ ಕಡೆಗೆ ಹೊಡೆದರು. ರನ್ ಗಳಿಸುವುದು ಸುಲಭ ಎಂದು ಭಾವಿಸಿ ಯಶಸ್ವಿ ಓಡಲು ಪ್ರಾರಂಭಿಸಿದರು. ಮತ್ತೊಂದೆಡೆ, ಗಿಲ್ ಕೂಡ ಓಡಲು ಪ್ರಾರಂಭಿಸಿದ್ದು ತಕ್ಷಣ ಹಿಂತಿರುಗಿದರು. ಅರ್ಧಕ್ಕಿಂತ ಹೆಚ್ಚು ಪಿಚ್ ದಾಟಿದ್ದ ಜೈಸ್ವಾಲ್ ಹಿಂತಿರುಗುವ ಹೊತ್ತಿಗೆ ರನ್ ಔಟ್ ಆದರು. ಇದರಿಂದ 74 ರನ್‌ಗಳ ಪಾಲುದಾರಿಕೆ ಕೊನೆಗೊಂಡಿತು. ಇದು ಸಾಮಾಜಿಕ ಮಾಧ್ಯಮದಲ್ಲಿ ಗಿಲ್ ವರ್ತನೆಯ ಬಗ್ಗೆ ತೀವ್ರ ಟೀಕೆಗೆ ಕಾರಣವಾಯಿತು.