ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೂ ಭಾರತದ ರನ್ ಮೆಷಿನ್ ವಿರಾಟ್ ಕೊಹ್ಲಿ ನಿರಾಶೆ ಮೂಡಿಸಿ ಶೂನ್ಯಕ್ಕೆ ಔಟಾಗಿದ್ದು, ಈ ವೇಳೆ ಅಭಿಮಾನಿಗಳಿಗೆ ಅಚ್ಚರಿಯ ಸನ್ಹೆ ಮಾಡಿದ್ದಾರೆ.
ಹೌದು.. ಅಡಿಲೇಡ್ ಓವಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ಆತಿಥೇಯ ತಂಡದ ನಾಯಕ ಮಿಚೇಲ್ ಮಾರ್ಷ್, ಬೌಲಿಂಗ್ ಆಯ್ದುಕೊಂಡರು. ಅದರಂತೆ ಕ್ರೀಸ್‌ಗಿಳಿದ ಟೀಂ ಇಂಡಿಯಾ, ಆರಂಭಿಕ ಆಘಾತಕ್ಕೆ ಒಳಗಾಗಿದೆ.
ಭಾರತ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯ ಎರಡನೇ ಪಂದ್ಯದಲ್ಲೂ ವೈಫಲ್ಯ ಅನುಭವಿಸಿದ್ದಾರೆ.
ಆರಂಭಿಕ ಆಘಾತ
ಮಾಜಿ ನಾಯಕ ರೋಹಿತ್ ಶರ್ಮಾ ಜೊತೆ ಇನಿಂಗ್ಸ್ ಆರಂಭಿಸಿದ ಗಿಲ್, 9 ಎಸೆತಗಳಲ್ಲಿ ಅಷ್ಟೇ ರನ್ ಗಳಿಸಿ ಔಟಾದರು. ಬಳಿಕ ಬಂದ ಕೊಹ್ಲಿ ಮತ್ತೆ ನಿರಾಸೆ ಮೂಡಿಸಿದರು. ಷೇವಿಯರ್ ಬರ್ಟ್ಲೆಟ್ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದ ಅವರು, ಪರ್ತ್ ಪಂದ್ಯದಂತೆ ಇಲ್ಲೂ ಖಾತೆ ತೆರೆಯದೆ ಪೆವಿಲಿಯನ್ ಸೇರಿಕೊಂಡರು.
ಕ್ಷಮೆ ಕೇಳಿದ್ರಾ..? ಅಥವಾ ನಿವೃತ್ತಿ ಸುಳಿವು ಕೊಟ್ರಾ?
ಇನ್ನು ಕೊಹ್ಲಿ ಔಟಾದ ಬಳಿಕ ಪೆವಿಲಿಯನ್ ನತ್ತ ಹೋಗುವಾಗ ಪ್ರೇಕ್ಷಕರತ್ತ ಏನೋ ಸನ್ಹೆ ಮಾಡಿದರು. ಕೊಹ್ಲಿ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗುವಾಗ ತಮ್ಮ ಕೈಯಲ್ಲಿದ್ದ ಕೈಗವಸುಗಳನ್ನು ಹಿಡಿದು ಅಭಿಮಾನಿಗಳತ್ತ ಕೈ ಬೀಸುತ್ತಿರುವುದು ಕಂಡುಬಂದಿತು. ಈ ಸನ್ನೆಯು ಅಭಿಮಾನಿಗಳು ಬ್ಯಾಟ್ಸ್‌ಮನ್ ತಮ್ಮ ನಿರ್ಗಮನದ ಸೂಚನೆ ನೀಡುತ್ತಿದ್ದಾರೆಯೇ ಎಂದು ಅನುಮಾನಿಸುವಂತೆ ಮಾಡಿತು.
ಇದು ಕೊಹ್ಲಿ ತಮ್ಮ ಅಭಿಮಾನಿಗಳಿಗೆ ನಿವೃತ್ತಿ ಸುಳಿವು ಕೊಟ್ರಾ ಎಂದು ಊಹಿಸಲಾಗುತ್ತಿದೆ. ಅಡಿಲೇಡ್ ನಲ್ಲಿ ಕೊಹ್ಲಿ ತಮ್ಮ ಕೊನೆಯ ಏಕದಿನ ಪಂದ್ಯವನ್ನಾಡುತ್ತಿರುವುದರಿಂದ ಅವರು ಈ ರೀತಿ ಸನ್ಹೆ ಮಾಡಿದ್ರಾ? ಅಥವಾ ಶೂನ್ಯ ಸುತ್ತಿ ಮತ್ತೆ ನಿರಾಶೆ ಮೂಡಿಸಿದ್ದರಿಂದ ಅಭಿಮಾನಿಗಳ ಕ್ಷಮೆ ಕೇಳಿದ್ರಾ ಎಂಬ ಪ್ರಶ್ನೆಯೂ ಮೂಡುತ್ತಿದೆ.
ಕೇವಲ ನಾಲ್ಕು ಎಸೆತಗಳಲ್ಲೇ ಔಟಾಗಿದ್ದರಿಂದ ಕೊಹ್ಲಿ ಬೇಸರಗೊಂಡು ಅಭಿಮಾನಿಗಳ ಕ್ಷಮೆ ಕೇಳಿದ್ರು ಎಂಬ ವಾದವೂ ಕೇಳಿಬರುತ್ತಿದೆ. ಔಟಾದ ನಂತರ ಡ್ರೆಸ್ಸಿಂಗ್ ಕೋಣೆಗೆ ಹಿಂತಿರುಗಿದ ಕೊಹ್ಲಿ ಅವರ ಈ ನಡೆ ನಿವೃತ್ತಿ ಚರ್ಚೆಗೆ ಮತ್ತಷ್ಟು ಇಂಬು ನೀಡಿದೆ.