ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಬಂದ ನಂತರ, ದೇಶೀಯ ಕ್ರಿಕೆಟ್‌ನಲ್ಲಿನ ಪ್ರದರ್ಶನಗಳು ದುರದೃಷ್ಟವಶಾತ್ ಮೊದಲಿನಷ್ಟು ಮಹತ್ವದ್ದಾಗಿಲ್ಲ. ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಆಟಗಾರರು ಯಾವುದೇ ಸ್ವರೂಪದಲ್ಲಿದ್ದರೂ, ಆಯ್ಕೆದಾರರ ಗಮನಕ್ಕೆ ಬೇಗನೆ ಬರುತ್ತಾರೆ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾಜಿ ಆಟಗಾರ ನವದೀಪ್ ಸೈನಿ ಹೇಳಿದ್ದಾರೆ. ಭಾರತ ಪರ 2 ಟೆಸ್ಟ್, 8 ಏಕದಿನ ಮತ್ತು 11 ಟಿ20 ಪಂದ್ಯಗಳನ್ನು ಆಡಿರುವ ಅನುಭವಿ ವೇಗಿ, ರಾಷ್ಟ್ರೀಯ ತಂಡದಿಂದ ಕೈಬಿಟ್ಟ ಬಗ್ಗೆ ಮಾತನಾಡುತ್ತಾ, ಐಪಿಎಲ್‌ನಲ್ಲಿ ಪ್ರದರ್ಶನ ನೀಡದೆ ಇಂದಿನ ದಿನಗಳಲ್ಲಿ ಭಾರತೀಯ ತಂಡಕ್ಕೆ ಪ್ರವೇಶಿಸುವ ಸಾಧ್ಯತೆ ಕಡಿಮೆ ಎಂದು ಹೇಳಿದರು.
ಒಂದು ಕಾಲದಲ್ಲಿ ಭಾರತದ ವೇಗದ ಬೌಲರ್ ಎಂದು ಪರಿಗಣಿಸಲ್ಪಟ್ಟಿದ್ದ ಸೈನಿ, ಕೊನೆಯ ಬಾರಿಗೆ ರಾಷ್ಟ್ರೀಯ ತಂಡದಲ್ಲಿ 2021 ರಲ್ಲಿ ಕಾಣಿಸಿಕೊಂಡರು. ಹಿಮಾಚಲ ಪ್ರದೇಶ ವಿರುದ್ಧದ ದೆಹಲಿಯ ರಣಜಿ ಟ್ರೋಫಿ ಪಂದ್ಯದ ದಿನದ ಆಟದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯ್ಕೆಯ ಮಾನದಂಡಗಳು ಬದಲಾಗುತ್ತಿರುವ ವಾಸ್ತವಗಳ ಬಗ್ಗೆ ಸ್ಪಷ್ಟವಾಗಿ ಹೇಳಿದರು.
'ನಾನು 2013ರಲ್ಲಿ ಇಲ್ಲಿಗೆ ಬಂದಾಗ ಕಳೆದುಕೊಳ್ಳಲು ಏನೂ ಇರಲಿಲ್ಲ, ಈಗಲೂ ಕಳೆದುಕೊಳ್ಳಲು ನನ್ನಲ್ಲಿ ಏನೂ ಇಲ್ಲ. ನಾನು ಭಾರತದ ಪುನರಾಗಮನದ ಕನಸು ಕಾಣದಿದ್ದರೆ, ದೆಹಲಿ ತಂಡದಲ್ಲಿ ಸ್ಥಾನವನ್ನು ಪಡೆಯುವುದರಲ್ಲಿ ಅರ್ಥವೇನು' ಎಂದು ಪ್ರಶ್ನಿಸಿದರು.
'ಹೌದು, ಒಬ್ಬರು ಇಷ್ಟಪಡಲಿ ಅಥವಾ ಇಲ್ಲದಿರಲಿ, ಭಾರತಕ್ಕಾಗಿ ಆಡಲು, ನೀವು ಐಪಿಎಲ್‌ನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬೇಕು. ಇದು ವಾಸ್ತವ. ಒಂದು ವರ್ಷದ ಹಿಂದೆ, ನನಗೆ ಭುಜದ ಗಾಯವಾಗಿತ್ತು ಮತ್ತು ನನ್ನ ವೇಗ ಕುಸಿಯಿತು. ಇದರಿಂದ ನಾನು ಐಪಿಎಲ್ ಒಪ್ಪಂದವನ್ನು ಕಳೆದುಕೊಳ್ಳುವಂತಾಯಿತು' ಎಂದರು.
ವಿಜಯ್ ಹಜಾರೆ ಟ್ರೋಫಿ ಅಥವಾ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಂತಹ ವೈಟ್-ಬಾಲ್ ಸ್ವರೂಪಗಳಿಗೆ ಅಂಟಿಕೊಳ್ಳಲು ನೀವು ಬಯಸುತ್ತೀರಾ ಎಂದು ಕೇಳಿದಾಗ, ಸೈನಿ ನಗುತ್ತಾ ಹೇಳಿದರು: 'ಹೌದು, ನನಗೆ ಸಾಧ್ಯವಾಗುತ್ತದೆ ಆದರೆ, ದಿನಗಳ ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ಈ ಸವಾಲನ್ನು ನಾನು ಇಷ್ಟಪಡುತ್ತೇನೆ. ಮುಜೆ ಮಜಾ ಆತಾ ಹೈ. ಕಳೆದ ಪಂದ್ಯದಲ್ಲಿ, ವಿಕೆಟ್ ನಿಧಾನವಾಗಿದ್ದರಿಂದ ನನಗೆ (ಹೈದರಾಬಾದ್‌ನಲ್ಲಿ) ವಿಕೆಟ್‌ಗಳು ಸಿಗಲಿಲ್ಲ. ಈ ಟ್ರ್ಯಾಕ್‌ನಲ್ಲಿ, ಚಹಾ ನಂತರ, ಅದು ಉತ್ಸಾಹಭರಿತವಾಯಿತು' ಎಂದರು.
ಹಾಗಾದರೆ, ನೀವಿನ್ನೂ ಭಾರತ ತಂಡಕ್ಕೆ ಪುನರಾಗಮನವನ್ನು ನಂಬುತ್ತೀರಾ? 'ಏಕಾಗಬಾರದು? ನನಗೆ ಒಂದೆರಡು ಐದು ವಿಕೆಟ್ ಗೊಂಚಲು ಸಿಕ್ಕರೆ, ನಾನು ಮತ್ತೆ ಚರ್ಚೆಗಳ ಭಾಗವಾಗುತ್ತೇನೆ' ಎಂದು ಮುಂದಿನ ತಿಂಗಳು 33 ವರ್ಷ ತುಂಬುತ್ತಿರುವ ಸೈನಿ ಹೇಳಿದರು.